Valedictory function of Hejmady Mattu Panduranga Bhajana Mandira’s 75th anniversary

Padubidri, May 4th 2018

ಹೆಜಮಾಡಿ ಬಂದರು ಯೋಜನೆ ಜಾರಿಗಾಗಿ ಹೋರಾಟದ ನೇತೃತ್ವ ವಹಿಸಲು ಸಿದ್ಧ-ಡಾ.ಜಿ.ಶಂಕರ್
ಹೆಜಮಾಡಿ ಮಟ್ಟು ಪಾಂಡುರಂಗ ಭಜನಾ ಮಂದಿರದ ಅಮೃತ ಮಹೋತ್ಸವ ಸಮಾರೋಪ

ಸಮುದ್ರ ಮೀನುಗಾರರ ಅನ್ನ ಕೊಡುವ ಬಟ್ಟಲು.ಹೆಜಮಾಡಿ ಹಾಗೂ ಆಸುಪಾಸಿನ ಗ್ರಾಮಗಳ ಮೀನುಗಾರರಿಗೆ ಅತ್ಯವಶ್ಯಕವಾಗಿ ಬೇಕಾದ ಹೆಜಮಾಡಿ ಬಂದರು ಯೋಜನೆ ಜಾರಿಗೆ ಇಲ್ಲಿನ ಮೀನುಗಾರರು ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ.ಸರಕಾರ ನಡೆಸಿದ ಎಲ್ಲರೂ ಬಾಯಿ ಮಾತಿನ ಭರವಸೆ ನೀಡಿದರೇ ವಿನಹ ಬಂದರು ಯೋಜನೆ ಜಾರಿಯಾಗಲೇ ಇಲ್ಲ.ಇದೀಗ ನಿರ್ಣಾಯಕ ಹೋರಾಟದ ಕಾಲ ಕೂಡಿ ಬಂದಿದೆ.ಹೆಜಮಾಡಿ ಏಳೂರು,ಮೂಲ್ಕಿ ನಾಲ್ಕು ಪಟ್ಣ ಹಾಗೂ ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ಮೂಲಕ ಸಮಸ್ತ ಮೊಗವೀರರನ್ನು ಒಗ್ಗೂಡಿಸಿ ಮುಂದಿನ ದಿನಗಳಲ್ಲಿ ನಿರ್ಣಾಯಕ ಹೋರಾಟ ನಡೆಸಬೇಕಾಗಿದ್ದು,ಹೋರಾಟದ ನೇತೃತ್ವವನ್ನು ನಾನೇ ವಹಿಸುತ್ತೇನೆ.ಯಾವುದೇ ಕಾರಣಕ್ಕೂ ಹೆಜಮಾಡಿ ಬಂದರು ಯೋಜನೆ ಜಾರಿಯಾಗಲೇಬೇಕು ಎಂದು ಉಡುಪಿ ಅಂಬಲ್ಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಹೇಳಿದ್ದಾರೆ.ಗುರುವಾರ ರಾತ್ರಿ ಹೆಜಮಾಡಿಯ ಮಟ್ಟು ಮೊಗವೀರ ಸಭಾ ಆಡಳಿತದ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ ಅಮೃತ ಮಹೋತ್ಸವ ಸಮಾರಂಭದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಅದಾನಿ ಸಹಿತ ಬೃಹತ್ ಯೋಜನೆಗಳಿಂದಲೂ ಬಂದರು ಯೋಜನೆ ಜಾರಿಗೊಳಿಸಬಹುದಾಗಿದೆ.ರಾಜಕಾರಣಿಗಳು ಈ ಬಗ್ಗೆ ಪ್ರಾಮಾಣಿಕವಾಗಿ ಕಾರ್ಯಾಚರಿಸಬೇಕಾಗಿದೆ.ಈ ಬಾರಿ ಬಂದರು ಯೋಜನೆ ಜಾರಿಯಾಗದಿದ್ದಲ್ಲಿ ಉಗ್ರ ಹೋರಾಟ ಖಚಿತ ಎಂದವರು ಎಚ್ಚರಿಸಿದ್ದಾರೆ.


ಮೊಗವೀರ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ಜಾರಿಯಲ್ಲಿದ್ದು ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,ನಮ್ಮ ನೆಮ್ಮದಿ ಹಾಗೂ ಶಾಂತಿಗೆ ಭಜನೆ ಅತ್ಯುತ್ತಮ ಸಾಧನ.ಭಜನೆಯು ಮೊಗವೀರರ ಆಸ್ತಿ.ನಮ್ಮ ಹಿರಿಯರು ಭಜನೆ ಮೂಲಕ ಸಂಸ್ಕಾರ ಸಂಸ್ಕøತಿ ಉಳಿಸುವ ಮುಂದಾಲೋಚನೆ ಹೊಂದಿದ್ದರು.ಹಾಗಾಗಿ ಕರಾವಳಿಯುದ್ದಕ್ಕೂ ಎಲ್ಲೆಡೆ ಭಜನಾ ಮಂದಿರಗಳು ಸಾಂಗವಾಗಿ ಸೇವೆ ಸಲ್ಲಿಸುತ್ತಿವೆ.ಮಟ್ಟು ಪಟ್ಣದಲ್ಲಿ 75 ವರ್ಷಗಳಿಂದ ಭಜನಾ ಮಂದಿರ ನಡೆಸಿಕೊಂಡು ಬಂದಿರುವುದು ಸ್ತುತ್ಯರ್ಥವೇ ಸರಿ.ಅಚ್ಚುಕಟ್ಟಾಗಿ ಎಲ್ಲರೂ ಒಗ್ಗೂಡಿ ನಿರಂತರ ಭಜನಾ ಸೇವೆಯೊಂದಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೂ ಒತ್ತು ನೀಡಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮಟ್ಟ ಶ್ರೀ ಪಾಂಡುರಂಗ ಭಜನಾ ಮಂದಿರವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅತ್ಯುತ್ತಮ ಗ್ರಾಮ ಸಭೆ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದವರು ಹೇಳಿದರು.


ಸನ್ಮಾನ: ಇದೇ ವೇಳೆ ಹೆಜಮಾಡಿ ಏಳೂರು ಮೊಗವೀರ ಸಭೆಗಳ ಗುರಿಕಾರರುಗಳಾದ ನೀಲಯ್ಯ ಗುರಿಕಾರ(ಮಟ್ಟುಪಟ್ಣ),ಲೋಕನಾಥ ಶ್ರೀಯಾನ್(ಗುಂಡಿ),ಪುರುಷೋತ್ತಮ ಗುರಿಕಾರ(ಹೆಜಮಾಡಿ),ಗಂಗಾಧರ ಕಾಂಚನ್(ಸಣ್ಣ ಗುಂಡಿ),ಜಗನ್ನಾಥ ಕುಂದರ್ ಮತ್ತು ಸೋಮಶೇಖರ ಗುರಿಕಾರ(ಕನ್ನಂಗಾರು),ಕೃಷ್ಣಪ್ಪ ಕೋಟ್ಯಾನ್(ಆಚೆಮಟ್ಟು),ಸದಾಶಿವ ಕೋಟ್ಯಾನ್ ಮತ್ತು ಮಾಧವ ಪುತ್ರನ್(ಪಲಿಮಾರು)ರವರನ್ನು ಅಮೃತ ಮಹೋತ್ಸವದ ಅಂಗವಾಗಿ ಡಾ.ಜಿ.ಶಂಕರ್ ಸನ್ಮಾನಿಸಿ ಗೌರವಿಸಿದರು.


ಅಂತರಾಷ್ಟ್ರೀಯ ಕ್ರೀಡಾಪಟು ಯೋಗೇಶ್ ಬಿ.ಕಾಂಚನ್,ಶೈಕ್ಷಣಿಕ ಅತ್ಯುನ್ನತ ಸಾಧಕಿ ಶ್ರೇಯಾ ಎಚ್.ಕಾಂಚನ್ ಮತ್ತು ಕರಾಟೆ ಚಾಂಪ್ಯನ್ ನಿಶಿತ್ ಯು.ಸಾಲ್ಯಾನ್‍ರವರನ್ನು ಸನ್ಮಾನಿಸಲಾಯಿತು.
ಸ್ಮರಣ ಸಂಚಿಕೆ ಬಿಡುಗಡೆ: ಅಮೃತ ಮಹೋತ್ಸವ ಸವಿನೆನಪಿಗಾಗಿ ಹೊರತಂದ “ಅಮೃತ ಸಂಭ್ರಮ” ಸ್ಮರಣ ಸಂಚಿಕೆಯನ್ನು ಡಾ.ಜಿ.ಶಂಕರ್ ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಎಚ್.ಗಂಗಾಧರ ಕರ್ಕೇರ ಮಾತನಾಡಿ,ಇತ್ತೀಚೆಗೆ ವಿಜಯ ಕರ್ನಾಟಕ ಪತ್ರಿಕೆ ಮೊಗವೀರರ ಸಮಸ್ಯೆಗಳ ಕುರಿತು ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಂಡಿಸಿದ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಸಮಸ್ತ ಮೊಗವೀರ ಸಮಾಜವನ್ನು ಒಗ್ಗೂಡಿಸಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದರು.

ಸುರತ್ಕಲ್ ಶ್ರೀ ದುರ್ಗಾ ಡೆವಲಪರ್ಸ್ ಮಾಲಕ ಪುಂಡಲೀಕ ಹೊಸಬೆಟ್ಟು,ಜಿಪಂ ಮಾಜಿ ಅಧ್ಯಕ್ಷೆ ನಯನಾ ಗಣೇಶ್,ಉಚ್ಚಿಲ ಶ್ರೀ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಶರತ್ ಗುಡ್ಡೆಕೊಪ್ಲ,ಅನಿವಾಸಿ ಉದ್ಯಮಿ ಹರೀಶ್ ಎನ್.ಕೋಟ್ಯಾನ್,ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಭೋಜರಾಜ್ ಆರ್.ಕಿದಿಯೂರು,ಗುತ್ತಿಗೆದಾರರಾದ ಜಯಂತ್ ಪುತ್ರನ್ ಮತ್ತು ಲೋಕೇಶ್ ಅಮೀನ್,ದಾನಿಗಳಾದ ಲಲಿತಾ ಸದಾನಂದ್,ಮಟ್ಟು ಮೊಗವೀರ ಸಭಾ ಗುರಿಕಾರ ನೀಲಯ್ಯ ಗುರಿಕಾರ,ಗೌರವಾಧ್ಯಕ್ಷ ನಾರಾಯಣ ಕೆ.ಮೆಂಡನ್,ಅಧ್ಯಕ್ಷ ಬಾಲಕೃಷ್ಣ ಎಲ್.ಸುವರ್ಣ,ಮುಂಬೈ ಸಮಿತಿಯ ಗೌರವಾಧ್ಯಕ್ಷ ಪುರಂದರ ಜಿ.ಸಾಲ್ಯಾನ್,ಮಹಿಳಾ ಸಭಾ ಅಧ್ಯಕ್ಷೆ ಶಾರದಾ ಎಸ್.ಬಂಗೇರ,ಮುಂಬೈ ಸಮಿತಿಯ ಅಧ್ಯಕ್ಷೆ ಲತಾ ಶ್ರೀಧರ್,ಲೀಲಾಧರ್ ಬೈಕಂಪಾಡಿ,ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶಶಿ ಜಿ.ಪುತ್ರನ್,ಅಧ್ಯಕ್ಷ ಸದಾನಂದ ವಿ.ಸುವರ್ಣ,ಕಾರ್ಯಾಧ್ಯಕ್ಷ ಧನಂಜಯ ಎಲ್.ಬಂಗೇರ,ವಿದ್ಯಾದಾಯಿನಿ ಯುವತಿ ವೃಂದದ ಅಧ್ಯಕ್ಷೆ ಭಾರತಿ ಕೆ.ಶ್ರೀಯಾನ್ ಮುಖ್ಯ ಅತಿಥಿಗಳಾಗಿದ್ದರು.

ಲೋಹಿತಾಕ್ಷ ಕರ್ಕೇರ ಸ್ವಾಗತಿಸಿದರು.ವಿಮಲಾ ದಯಾನಂದ್ ವರದಿ ಸಲ್ಲಿಸಿದರು.ಶರಣ್ ಕುಮಾರ್ ಮಟ್ಟು ವಂದಿಸಿದರು.ಮಧುರಾಜ್ ಗುರುಪುರ ಕಾರ್ಯಕ್ರಮ ನಿರ್ವಹಿಸಿದರು.