Uchila Shri Mahalakshmi temple Renovation

Uchila: Foundation stone was laid for the renovation of Uchila Shri Mahalakshmi temple and for the construction of a community hall.

ಮೊಗವೀರರ ಕುಲದೇವರಾದ ಶ್ರೀ ಮಹಾಲಕ್ಷ್ಮೀ ಸನ್ನಿಧಾನವೇ ಸಮಾಜದ ಶ್ರದ್ಧಾ ಭಕ್ತಿಯ ಕಡಲು: ಶ್ರೀ ಶಾಂತ ಭೀಷ್ಮ ಮಹಾಸ್ವಾಮಿಗಳು

ಪಡುಬಿದ್ರಿ: ಮೊಗವೀರ ಸಮಾಜದ ಕುಲದೇವರಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸನ್ನಿಧಾನವೇ ಜನಾಂಗದ ಶ್ರದ್ಧಾಭಕ್ತಿಯ ಕಡಲು ಎನಿಸಿದೆ. ಆಧ್ಯಾತ್ಮವು ಸಂಪೂರ್ಣವಾಗಿ ನೆಲೆಯೂರಿರುವ ಭಾರತದಲ್ಲಿ ಭಕ್ತಿಯೇ ಪ್ರಧಾನವಾಗಿದ್ದು ಗಂಗಾ ಮಾತೆಯನ್ನು ಆಶ್ರಯಿಸಿ ಜೀವಿಸುವ ಇಲ್ಲಿನ ನಮ್ಮ ಮೊಗವೀರ ಜನಾಂಗದ ಆಧ್ಯಾತ್ಮಿಕ, ಸಾಂಘಿಕ ಪರಿಶ್ರಮದಿಂದ ಈ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕಾರ್ಯಗಳು ಸಾಂಗವಾಗಿ ನರವೇರುವುದಾಗಿ ಹಾವೇರಿ ಜಿಲ್ಲೆ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶಾಂತಭೀಷ್ಮ ಮಹಾಸ್ವಾಮಿಗಳು ಶುಭಾರ್ಷೀವಚಿಸಿದರು.

ಅವರು ಭಾನುವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಪೂರ್ವಕ ಶಿಲಾ ಮುಹೊರ್ತ, ಕಾಷ್ಟ ಮುಹೂರ್ತ ಹಾಗೂ ಎಂಆರ್‍ಪಿಎಲ್‍ನ ಸಿಎಸ್‍ಆರ್ ನಿಧಿಯ ಮೂಲಕ ನಿರ್ಮಾಣವಾಗಲಿರುವ ಸುಮಾರು 10 ಕೋಟಿ ರೂ. ಗಳ ವೆಚ್ಚದ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಂಆರ್‍ಪಿಎಲ್‍ನ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ಕೇಂದ್ರ ಸರಕಾರದ ಅಧೀನ ತಮ್ಮ ಸಂಸ್ಥೆಯು ಕೆಲವೊಂದು ಕಾನೂನು ಚೌಕಟ್ಟಿನೊಳಗೆ ಸಮಾಜಮುಖಿಯಾಗಿ ತನ್ನ ಸಿಎಸ್‍ಆರ್ ನಿಧಿಯನ್ನು ವಿನಿಯೋಗಿಸುತ್ತಿರುತ್ತದೆ. 7.5 ಕೋಟಿ ರೂ. ಗಳನ್ನು ಸಮುದಾಯ ಭವನ ನಿರ್ಮಾಣಕ್ಕಾಗಿ ಈಗಾಗಲೇ ಮೀಸಲಿರಿಸಲಾಗಿದೆ. ಇನ್ನೂ ಹೆಚ್ಚಿನ ಸಹಕಾರವನ್ನು ತಾನು ನೀಡುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕಾಗಿ ಮೊಗವೀರ ಜನಾಂಗದ ಜನನಾಯಕ ಡಾ| ಜಿ. ಶಂಕರ್ ಸಹಿತದ ನಿಯೋಗದೊಂದಿಗೆ ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರಕಾರದ ಅನುದಾನವನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸುವ ಭರವಸೆ ನೀಡಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅದಾನಿ ದಕ್ಷಿಣ ಭಾರತ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ, ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‍ಪಾಲ್ ಸುವರ್ಣ, ಮುಂಬಯಿ ಮೊಗವೀರ ಬ್ಯಾಂಕ್‍ನ ಸದಾನಂದ ಕೋಟ್ಯಾನ್ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ರಾಘವೇಂದ್ರ ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ರಮೇಶ್ ಬಂಗೇರ, ಬೆಂಗಳೂರು ಮೊಗವೀರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಮುಂಬಯಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅಜಿತ್ ಸುವರ್ಣ, ಕೋಟ ಗೀತಾನಂದ ಫೌಂಡೇಶನ್‍ನ ಪ್ರವರ್ತಕ ಆನಂದ ಸಿ. ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಮಂಗಳೂರು ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ನಿತಿನ್ ಕುಮಾರ್, ಉದ್ಯಮಿಗಳಾದ ಲೋಕನಾಥ ಬೋಳಾರ್, ಭುವನೇಂದ್ರ ಕಿದಿಯೂರು, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಶಾಖಾಧ್ಯಕ್ಷ ಕೆ. ಕೆ. ಕಾಂಚನ್, ದ.ಕ. ಮೊಗವೀರ ಮಹಿಳಾ ಸಂಘದ ಗೌರವಾಧ್ಯಕ್ಷೆ ಸರಳಾ ಕಾಂಚನ್, ಮೊಗವೀರ ಮಹಾಜನ ಸಂಘದ ಮಾಜಿ ಅಧ್ಯಕ್ಷ ಕೇಶವ ಕುಂದರ್, ಸುಧಾಕರ ಕುಂದರ್, ಹರಿಯಪ್ಪ ಕೋಟ್ಯಾನ್, ಮೋಹನ್ ಬಂಗೇರ, ವಿನಯ ಕರ್ಕೇರ, ಕೀರ್ತಿರಾಜ್ ಸಾಲ್ಯಾನ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದೇಣಿಗೆ ಹಸ್ತಾಂತರ: ಮಲ್ಪೆ ಮೀನುಗಾರರ ಸಂಘದ ಮೂಲಕ ಸಮಗ್ರ ಜೀಣೋದ್ಧಾರ ಸಂಕಲ್ಪಗಳಿಗೆ ನೀಡಲಾದ ಮೊದಲ ಹಂತದ 1 ಕೋಟಿ ರೂ. ಗಳ ದೇಣಿಗೆ, ದ.ಕ., ಮೊಗವೀರ ಮಹಿಳಾ ಮಹಾಜನ ಸಂಘದ ದೇಣಿಗೆಯಾದ 5 ಲಕ್ಷ ರೂ., ಮೊಗವೀರ ಹಿತಸಾಧನಾ ವೇದಿಕೆಯಿಂದ ನೀಡಲಾದ 5 ಲಕ್ಷರೂ., ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡಿ ದೇಗುಲದ 25 ಲಕ್ಷ ರೂ. ಸಹಿತದ ಕೆಲವಾರು ದೇಣಿಗೆಗಳನ್ನು ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ. ಜಿ. ಶಂಕರ್ ಮೂಲಕ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್ ಹಾಗೂ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಅವರಿಗೆ ಹಸ್ತಾಂತರಿಸಲಾಯಿತು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ. ಜಿ.ಶಂಕರ್ ಪ್ರಸ್ತಾವಿಸಿದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ. ಸಿ. ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು.

ಆರಂಭದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಶಿಲಾ ಮುಹೂರ್ತ, ಕಾಷ್ಟ ಮುಹೂರ್ತಗಳು ನಡೆದು ಆ ಬಳಿಕ ಮೊಗವೀರ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯಿತು.