ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರಾವಣ ಸಂಭ್ರಮ

— ಎಚ್ಕೆ ಹೆಜ್ಮಾಡಿ, ಪಡುಬಿದ್ರಿ

ಸುಮಾರು 150 ವರ್ಷಗಳ ಇತಿಹಾಸದ ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಈಗ ಶ್ರಾವಣ ಮಾಸದ ಸಂಭ್ರಮ.
ನಾಗರ ಪಂಚಮಿಯೊಂದಿಗೆ ಆರಂಭಗೊಂಡ ಶ್ರಾವಣ ಸಂಭ್ರಮದ ಅಂಗವಾಗಿ ವರ ಮಹಾಲಕ್ಷ್ಮೀ ಪೂಜೆ, ಚೂಡಿ ಪೂಜೆ, ಪುಷ್ಪಾಲಂಕಾರ, ಹೂವಿನ ಪೂಜೆ, ಋಗುಪಾಕರ್ಮ ಹೋಮ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಸಹಿತ ವಿವಿಧ ಧಾರ್ಮಿಕ ವಿಧಿಗಳು ಸಂಭ್ರಮದಿಂದ ನಡೆಯುತ್ತದೆ. ಈ ಸಂದರ್ಭ ಅನ್ನಸಂತರ್ಪಣೆಯೂ ನಡೆಯುತ್ತದೆ. ಸಾಮೂಹಿಕವಾಗಿ ಇಲ್ಲಿ ಶ್ರಾವಣ ಸಂಭ್ರಮವನ್ನು ಆಚರಿಸಲಾಗುತ್ತದೆ.

ಹಿನ್ನೆಲೆ: ಪಡುಬಿದ್ರಿಯ ಪ್ರಮುಖ ವರ್ತಕರಾಗಿದ್ದ ಗೌಡ ಸಾರಸ್ವತ ಬ್ರಾಹ್ಮಣರು ಪುರಾತನ ಕಾಲದಿಂದಲೂ ಹೆಜಮಾಡಿಯ ಮಲ್ಯರ ಮಠವನ್ನು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ನಂಬಿಕೊಂಡು ಬಂದಿದ್ದರು.

ಸುಮಾರು 150 ವರ್ಷಗಳ ಹಿಂದೆ ಗ್ರಾಮದ ಗೌಡ ಸಾರಸ್ವತ ಬ್ರಾಹ್ಮಣರಾದ ದಾಮೋದರ ಭಟ್ ಎಂಬವರು ಪಡುಬಿದ್ರಿಯಲ್ಲಿ ಸಮಾಜದವರಿಗಾಗಿ ದೇವಳವೊಂದನ್ನು ಪ್ರಾರಂಭಿಸುವ ಉದ್ದೇಶದಿಂದ ಗ್ರಾಮಸ್ಥರನ್ನು ಒಗ್ಗೂಡಿಸಿದ್ದರು. ಸರ್ವರ ಅಭಿಪ್ರಾಯದಂತೆ ಕಾರ್ಕಳದ ಶ್ರೀ ವೆಂಕಟರಮಣ ದೇವಳದಿಂದ ಪಟ್ಟದ ದೇವರನ್ನು ತಂದು ಪಡುಬಿದ್ರಿಯ ಕೆಳಗಿನ ಪೇಟೆಯಲ್ಲಿ ದೇವಳವನ್ನು ನಿರ್ಮಿಸಿದರು. ಸುಮಾರು 100 ವರ್ಷಗಳ ಹಿಂದೆ ಕಾಶೀ ಮಠಾಧೀಶ ಶ್ರೀ ಭುವನೇಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ದೇವರ ಉತ್ಸವ ಮೂರ್ತಿಯನ್ನು ದೇವಳಕ್ಕೆ ನೀಡಿದರು.

ಅಲ್ಲಿಂದ ಶ್ರೀ ದೇವಳದಲ್ಲಿ ವರ್ಷ ಪೂರ್ತಿ ವಿವಿಧ ಧಾರ್ಮಿಕ ಸೇವೆಗಳು ನಿರಂತರ ನಡೆಯುತ್ತಾ ಬಂದಿದೆ. ನಡ್ಸಾಲು, ಪಡುಬಿದ್ರಿ, ಪಾದೆಬೆಟ್ಟು, ಎರ್ಮಾಳು ಗ್ರಾಮಗಳ ಸುಮಾರು 150 ಮನೆಗಳ ಗೌಡ ಸಾರಸ್ವತ ಬ್ರಾಹ್ಮಣರು ಶ್ರೀ ದೇವಳದಲ್ಲಿ ಧಾರ್ಮಿಕ ಸೇವೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ.

ನವರಾತ್ರಿಯ ಸಂದರ್ಭ ದುರ್ಗಾ ನಮಸ್ಕಾರ ಪೂಜೆ, ವೈಶಾಖ ಮಾಸದಲ್ಲಿ ಬ್ರಹ್ಮ ರಥಾರೋಹಣ, ಬ್ರಹ್ಮ ರಥೋತ್ಸವ, ಭಾದ್ರಪದ ಮಾಸದ ಸೆ.9 ರಂದು ಗಣೇಶ್ ಚತುರ್ಥಿ, ಕಾರ್ತಿಕ ಮಾಸದ ನವೆಂಬರ್ 8ರಿಂದ ಏಕಾಹ ಭಜನೆ, ಕಾರ್ತಿಕ ಮಾಸದ ನವೆಂಬರ್ 18ರಂದು ಕಾರ್ತಿಕ ದೀಪೋತ್ಸವ ಸಹಿತ ನಿರಂತರ ವಿವಿಧ ಧಾರ್ಮಿಕ ಸೇವೆಗಳು ಸಂಭ್ರಮದಿಂದ ನಡೆಯುತ್ತದೆ.
ನೂತನ ಆಡಳಿತ ಮಂಡಳಿಯು ಶ್ರೀ ದೇವಳದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ 2 ವರ್ಷದ ಹಿಂದೆ ಅರ್ಚಕರ ವಸತಿ ಗೃಹ, ಅತಿಥಿ ಗೃಹ, ಅಗ್ರ ಶಾಲಾದಿ ನಿರ್ಮಾಣ ಭವನಗಳನ್ನು ನಿರ್ಮಿಸಿ ಶ್ರೀ ಸನ್ನಿದಿಗೆ ಸಮರ್ಪಿಸಲಾಗಿದೆ.

ಮುಂದೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಸಮಿತಿ ತಿಳಿಸಿದ್ದು, 2021ರಲ್ಲಿ ದೇವಳದ ಪುನರ್‍ಪ್ರತಿಷ್ಠಾ ಸುವರ್ಣ ಮಹೋತ್ಸವ ಸಂಭ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅನಿಸಿಕೆ:
ಶ್ರೀ ದೇವಳದಲ್ಲಿ ಶ್ರಾವಣ ಮಾಸವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. 2021ರಲ್ಲಿ ದೇವಳದ ಪುನರ್‍ಪ್ರತಿಷ್ಠೆಯಾಗಿ 50 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮೋತ್ಸವ ನಡೆಸಲು ಉದ್ದೇಶಿಸಲಾಗಿದೆ. ದೇವಳದ ಜೀರ್ಣೋದ್ಧಾರ, ಬ್ರಹ್ಮಕಲಶ, ಸಹಸ್ರ ಕುಂಭಾಭಿಷೇಕ ನಡೆಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
-ರಾಮಚಂದ್ರ ಶೆಣೈ, ಆಡಳಿತ ಮೊಕ್ತೇಸರರು, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಪಡುಬಿದ್ರಿ