ಪಡುಬಿದ್ರಿ ಬ್ರಹ್ಮಸ್ಥಾನಕ್ಕೆ ಶ್ರೀ ಕಾಣಿಯೂರು ಶ್ರೀಪಾದರ ಭೇಟಿ

ಪಡುಬಿದ್ರಿ: ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಗಳು ನಡೆಯುತ್ತಿರುವ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನಕ್ಕೆ ಫೆ. 20ರಂದು ರಾತ್ರಿ ಉಡುಪಿ ಶ್ರೀ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿದರು.

ಕವಿತಾ ಹಾಗೂ ಉದಯಕುಮಾರ್ ಶೆಟ್ಟಿ ದಂಪತಿ ಢಕ್ಕೆಬಲಿ ಸೇವೆಯ ಈ ದಿನದಂದು ಶ್ರೀ ಖಡ್ಗೇಶ್ವರೀ ಜ್ಞಾನಮಂದಿರಕ್ಕೆ ಆಗಮಿಸಿದ ಶ್ರೀಪಾದರನ್ನು ಸೇವಾಕರ್ತೃ ದಂಪತಿ ಹಾಗೂ ಮಕ್ಕಳು ಮತ್ತು ಶ್ರೀ ವನದುರ್ಗಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್‍ರವರು ಪಾದೋದಕ,ಪಾದ ಪ್ರಕ್ಷಾಳನಗಳಿಂದ ಸ್ವಾಗತಿಸಿ ಬರಮಾಡಿಕೊಂಡರು.

ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರ ಪಾದಪೂಜೆಯನ್ನು ಸೇವಾಕರ್ತೃ ದಂಪತಿ ನೆರವೇರಿಸಿದರು. ಶ್ರೀ ಪಾದರು ಸೇವಾಕರ್ತೃ ದಂಪತಿ ಹಾಗೂ ಕುಟುಂಬಿಕರಿಗೆ ಅನುಗ್ರಹ ಮಂತ್ರಾಕ್ಷತೆಗಳನ್ನಿತ್ತರು.

ಈ ಸಂದರ್ಭ ಬ್ರಹ್ಮಸ್ಥಾನದ ಗುರಿಕಾರ ಮನೆತನದ ಕೋರ್ನಾಯ ಶ್ರೀಪತಿ ರಾವ್,ಪಾತ್ರಿಗಳಾದ ಪಿ.ಜಿ.ನಾರಾಯಣ ರಾವ್,ಸುರೇಶ್ ರಾವ್,ಅರ್ಚಕ ಪಿ.ಎಲ್.ರಾಮಕೃಷ್ಣ ಆಚಾರ್ಯ,ಟ್ರಸ್ಟ್‍ನ ಕೋಶಾಧಿಕಾರಿ ವೈ.ಸುರೇಶ್ ರಾವ್,ಟ್ರಸ್ಟ್‍ನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಶ್ರೀ ಬ್ರಹ್ಮಸ್ಥಾನಕ್ಕೆ ಆಗಮಿಸಿದ ಶ್ರೀ ಶ್ರೀಗಳು ಢಕ್ಕೆಬಲಿ ಸೇವೆಯ ಪ್ರಥಮಾರ್ಧದ ತಂಬಿಲ ಸೇವೆಯ ವೇಳೆ ಉಪಸ್ಥಿತರಿದ್ದರು.