ಪಡುಬಿದ್ರಿ, ಎರ್ಮಾಳು ಬಡಾಗಳಲ್ಲಿ ತೀವ್ರಗೊಂಡ ಕಡಲ್ಕೊರೆತ

ಪಡುಬಿದ್ರಿ, ಎರ್ಮಾಳು ಬಡಾಗಳಲ್ಲಿ ತೀವ್ರಗೊಂಡ ಕಡಲ್ಕೊರೆತ
ನೂರಾರು ತೆಂಗಿನ ಮರಗಳು ಸಮುದ್ರಪಾಲು-ಮನೆ,ರಸ್ತೆ ನೀರು ಪಾಲಾಗುವ ಭೀತಿ
ಪಡುಬಿದ್ರಿ: ಸಮುದ್ರ ಶಾಂತವಾಗಿದ್ದರೂ ಮಳೆಗಾಲದಲ್ಲಿ ಅಲ್ಲಲ್ಲಿ ಬೀಳುವ ಗುಳಿಗಳಿಂದ ಈ ಬಾರಿ ಪಡುಬಿದ್ರಿಯಿಂದ ಎರ್ಮಾಳು ಬಡಾವರೆಗೆ ಕಡಲ್ಕೊರೆತ ತೀವ್ರಗೊಂಡಿದ್ದು, ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಎರಡು ಮನೆಗಳು, ಮೀನುಗಾರಿಕಾ ರಸ್ತೆ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಕಳೆದ ಮೂರು ದಿನಗಳಿಂದ ಕಡಲ್ಕೊರೆತ ಕಾಣಿಸಿಕೊಂಡಿರುವ ಬಡಾ ಎರ್ಮಾಳಿನ ಮೀರಾ ಕರ್ಕೇರ ಅವರ ಮನೆ ಸಮೀಪ ಈಗಾಗಲೇ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಇಂದು ಮತ್ತೆರಡು ತೆಂಗಿನ ಮರಗಳು ಕೊರೆತಕ್ಕೆ ಸಿಲುಕಿದೆ. ಇಲ್ಲಿ ಕೊರೆತ ಕೇವಲ 5 ಮೀಟರ್‍ನಷ್ಟು ವಿಸ್ತಾರಗೊಂಡಲ್ಲಿ ಈ ಭಾಗದಲ್ಲಿ ಹಾದು ಹೋಗುವ ಮೀನುಗಾರಿಕಾ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಇಲ್ಲಿನ ಜನ ಕಲ್ಲು ಹಾಕುವ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದರೂ, ಕೊರೆತ ತಡೆಯಲು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಬಡಾ ಗ್ರಾಪಂ ಅಧ್ಯಕ್ಷೆ ಶರ್ಮಿಳಾ ಡಿ ಸಾಲ್ಯಾನ್, ಪಿಡಿಒ ಕುಶಾಲಿನಿ ಮತ್ತಿತರರು ಭೇಟಿ ನೀಡಿದ್ದಾರೆ.

ಈ ಭಾಗದಲ್ಲಿ ಕಡಲ್ಕೊರೆತವು ತೀವ್ರಗೊಂಡಿದ್ದು ಸುರಕ್ಷತೆಗಾಗಿ ಹಾಕಲಾಗಿದ್ದ ಬೃಹತ್ ಗಾತ್ರದ ಕಲ್ಲುಗಳೂ ಕಡಲ ತೆಕ್ಕೆಗೆ ಸೆಳೆದುಕೊಂಡಿದ್ದವು. ಅದರೊಂದಿಗೆ ಈ ಭಾಗದಲ್ಲಿನ ಹಲವು ತೆಂಗಿನ ಮರಗಳು ಕಡಲ ಪಾಲಾಗುತ್ತಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಸೃಷ್ಠಿ ಮಾಡಿದ ಹಿನ್ನೆಲೆಯಲ್ಲಿ ಸಂತ್ರಸ್ಥ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

ಶುಕ್ರವಾರ ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಮಂಗಳೂರು ಎಡಿಪಿಐ ಇಲಾಖಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ, ಶನಿವಾರ ಬೆಳಿಗ್ಗೆ 8ಗಂಟೆಗೆ ತಡೆಗೋಡೆ ನಿರ್ಮಾಣಕ್ಕೆ ಕಲ್ಲು ಹಾಕುವ ಭರವಸೆ ನೀಡಿದ್ದಾರೆ.

ಪಡುಬಿದ್ರಿಯ ಕಾಡಿಪಟ್ಣ ಮತ್ತು ನಡಿಪಟ್ಣ ಪ್ರದೇಶಗಳಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದ್ದು, ನಡಿಪಟ್ಣದಲ್ಲಿ ಕಡಲ ಕಿನಾರೆಯಲ್ಲಿ ಬೀಚ್ ನಿರ್ವಹಣಾ ಸಮಿತಿ ನಿರ್ಮಿಸಿರುವ ಕಾಂಕ್ರೀಟ್ ರಚನೆ ಭಾಗಶಃ ಹಾನಿಗೊಂಡಿದೆ. ಕಾಮಿನಿ ಹೊಳೆ ಸಮುದ್ರಕ್ಕೆ ಹತ್ತಿರವಿರುವ ಪಾಂಡುರಂಗ ಎಂಬವರ ಮನೆ ಬಳಿ ತಡೆಗೋಡೆ ಸಮುದ್ರ ಪಾಲಾಗಿದೆ. ಇಲ್ಲಿನ ಶ್ರೀ ವಿಷ್ಣು ಭಜನಾ ಮಂದಿರದ ಬಳಿಯೂ ಕೊರೆತ ತೀವ್ರವಾಗಿದ್ದು, ಕಡಲ ತೀರದಲ್ಲಿರುವ ಗಾಳಿ ಮರಗಳು ಸಮುದ್ರ ಪಾಲಾಗಿವೆ. ಕಾಡಿಪಟ್ಣ ಲಕ್ಷ್ಮಣ ಸಾಲ್ಯಾನ್ ಮನೆ ಬಳಿಯೂ ಕೊರೆತ ಉಂಟಾಗಿದ್ದು, ಸಮುದ್ರದಂಚಿನ ಮರಗಳು ಅಪಾಯದಲ್ಲಿದೆ. ಕೊರೆತ ಹೆಚ್ಚಾದಲ್ಲಿ ಸಮುದ್ರದಿಂದ 10 ಮೀಟರ್ ಅಂತರದಲ್ಲಿರುವ ಮೀನುಗಾರಿಕಾ ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿದೆ. ಸಮುದ್ರ ಅಲ್ಲಲ್ಲಿ ಗುಳಿ ಬಿದ್ದಿದ್ದು, ಕೊರೆತ ಇನ್ನಷ್ಟು ತೀವ್ರವಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ನೀರಿನ ಅಬ್ಬರದ ಸಂದರ್ಭ ಕಡಲ್ಕೊರೆತದ ತೀವ್ರತೆ ಅತೀ ಹೆಚ್ಚಾಗಿದ್ದು, ಶೀಘ್ರ ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.