ಸಮುದ್ರ ಪ್ರಕ್ಷುಬ್ದ-ಮುಟ್ಟಳಿವೆ ಬಳಿ ಬ್ಲೂಫ್ಲ್ಯಾಗ್ ಬೀಚ್‍ಗೆ ಹಾನಿ

ಪಡುಬಿದ್ರಿ: ಅಕಾಲಿಕವಾಗಿ ಸುರಿದ ಮಳೆ ಹಾಗೂ ಅರಬ್ಬೀ ಸಮುದ್ರದಲ್ಲಿನ ನಿಮ್ನ ಒತ್ತಡದ ಪರಿಣಾಮ ಪಡುಬಿದ್ರಿ-ಹೆಜಮಾಡಿ ಸಮುದ್ರ ಭಾಗದಲ್ಲಿ ಸಂಧಿಸುವ ಮುಟ್ಟಳಿವೆ ಬಳಿ ಕಾಮಿನಿ ಹೊಳೆ ನೀರು ತನ್ನ ಪರಿಧಿಯಿಂದ ಉತ್ತರಕ್ಕೆ ಸರಿದ ಪರಿಣಾಮ ಬಹು ನಿರೀಕ್ಷಿತ ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿ ಕಾಮಾಗಾರಿ ಮುಳುಗಡೆಯಾಗಿದೆ.

ಸುಮಾರು 8 ಕೋಟಿ ರೂ. ಗಳ ಈ ಯೋಜನೆಗೆ ಸಂಬಂಧಿಸಿದಂತೆ ಹಲವಾರು ವಾಕಿಂಗ್ ಬೇ, ಡ್ರೆಸ್ ಬದಲಾವಣೆಯ ಕೋಣೆಗಳು, ಶೌಚಾಲಯ ಕಾಮಗಾರಿಗಳಿಗೆ ಸಮುದ್ರ ದಂಡೆಯಲ್ಲಿ ಅಡಿಪಾಯವನ್ನು ಹಾಕಲಾಗಿದೆ. ಅವೆಲ್ಲವೂ ಸದ್ಯ ಮರಳಿನಿಂದ ಆವೃತ್ತವಾಗಿದ್ದು, ಯಾವುದೇ ಕ್ಷಣದಲ್ಲಿ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
ಕಾಮಿನಿ ಹೊಳೆಯ ಹರಿವು ಬೇರೆಡೆ ತಿರುಗುವ ಮುನ್ಸೂಚನೆ ಅರಿತ ಕಾಮಗಾರಿ ಗುತ್ತಿಗೆ ಕಂಪನಿಯು ಗುರುವಾರ ಜೆಸಿಬಿ ಬಳಸಿ ಹೊಳೆ ನೀರು ನೇರ ಹರಿಯಲು ಕಾಮಗಾರಿ ನಡೆಸಿತ್ತು. ಆದರೆ ನೀರಿನ ಅತಿಯಾದ ಒತ್ತಡದಿಂದ ಹೊಳೆ ನೀರು ಪಥ ಬದಲಿಸಿ ಬೀಚ್ ಕಾಮಾಗಾರಿಗಳನ್ನು ಆಪೋಶನಗೈದಿದೆ.

ಕಾಮಿನಿ ನದಿಯ ಪ್ರಲಾಪದಿಂದಾಗಿ ಅಳಿವೆಯ ಒಂದು ಭಾಗವು ಶೌಚಾಲಯಕ್ಕೆ ಸಂಬಂಧಿಸಿದ ನೀರಿನ ಟ್ಯಾಂಕ್ ಬಳಿಯೇ ಅರಬೀ ಸಮುದ್ರವನ್ನು ಸೇರುವಂತಾಗಿದೆ. ಹಾಗಾಗಿ ಸುಮಾರು 1ಕಿಮೀ ನಷ್ಟು ತೀರ ಪ್ರೆದೇಶವು ಸದ್ಯ ಯೋಜನೆಗೆ ನಷ್ಟವಾಗಿದೆ. ಯೋಜನಾ ಪ್ರದೇಶವು ಎರಡು ಹೋಳಾಗಿದೆ. ಈ ಪ್ರದೇಶದಲ್ಲಿನ ಗಾಳಿ ಮರಗಳು ಬೇರು ಸಮೇತ ಬುಡಮೇಲಾಗಿ ಸಮುದ್ರವನ್ನು ಸೇರುತ್ತಿದೆ. 100ಕ್ಕೂ ಅಧಿಕ ಗಾಳಿಮರಗಳು ಸಮುದ್ರ ಪಾಲಾಗಿದೆ.

ಈ ಜಾಗವು ಸಿಆರ್‍ಝೆಡ್ ಪ್ರದೇಶವಾಗಿದ್ದರಿಂದ ಯೋಜನೆಯನ್ನು ಯಾವುದೇ ಪರವಾನಿಗೆಯ ರಹಿತ ನಡೆಸಲಾಗುತ್ತಿತ್ತು. ಕರಾವಳಿ ನಿಯಂತ್ರಣ ಕಾಯಿದೆಯನ್ವಯ ಕೇಂದ್ರ ಯೋಜನೆಯಾಗಿದ್ದರೂ ಸೂಕ್ತ ಪರವಾನಿಗೆ ಪಡೆದುಕೊಳ್ಳುವಂತೆ ಕಚೇರಿಯಿಂದ ಎಚ್ಚರಿಕೆ ನೋಟೀಸುಗಳನ್ನು ರವಾನಿಸಲಾಗಿತ್ತು. ಜಿಲ್ಲಾಧಿಕಾರಿ ಅವರು ಈ ಹಿಂದಿನ ಕರಾವಳಿ ನಿಯಂತ್ರಣ ವಲಯ ಸಮಿತಿ ಸಭೆಯನ್ವಯ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದರು. ಗುತ್ತಿಗೆದಾರರು ಸಿಆರ್‍ಝೆಡ್ ಕುರಿತಾದ ಪರವಾನಿಗೆಯನ್ನು ಪಡೆದು ಕಾಮಗಾರಿಯನ್ನು ನಡೆಸಿಲ್ಲವೆಂದು, ತಾನೂ ಈ ಪ್ರದೇಶಕ್ಕೆ ಭೇಟಿಯಿತ್ತು ಪರಿಶೀಲಿಸಿರುವುದಾಗಿ ಉಡುಪಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದ ಅಧಿಕಾರಿ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.
ಪ್ರವಾಸೋದ್ಯಮ ಇಲಾಖಾ ಉಪ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಕೇಂದ್ರ ಸರಕಾರದ 8ಕೋಟಿ ರೂ. ಗಳ ಬ್ಲೂ ಫ್ಲ್ಯಾಗ್ ಬೀಚ್ ಯೋಜನೆಗಾಗಿ ರಾಜ್ಯ ಸರಕಾರದಿಂದ ಸುಮಾರು 2.68ಕೋಟಿ ರೂ. ಗಳ ಪೂರ್ವಭಾವಿ ಸಿದ್ಧತೆಗಳಿಗಾಗಿ ಹಣ ಮಂಜೂರು ಆಗಿದೆ. ಆದರೆ ಮಳೆಗಾಲ ಎದುರಾದುದರಿಂದ ಎಲ್ಲವನ್ನು ವ್ಯಯಿಸಲಾಗಿಲ್ಲ. ಈ ಪ್ರಾಕೃತಿಕ ವಿಕೋಪದಿಂದಾಗಿ ಸುಮಾರು 6000ಚ. ಅಡಿ ಭೂಭಾಗವು ಯೋಜನೆಯಲ್ಲಿ ನಷ್ಟವಾಗಿದ್ದು ಬಿಟ್ಟರೆ ಯೋಜನೆಯು ಮತ್ತೂ ಮುಂದುವರಿಯಲಿದೆ. ಕೊಚ್ಚಿಕೊಂಡು ಹೋದ ಜಾಗವು ಮತ್ತೆ ಮರಲಿ ಸಿಗಬಹುದೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಅಳಿವೆ ತಾನು ಸೀಳಿಕೊಂಡು ಯೋಜನಾ ಪ್ರದೇಶದತ್ತ ಬಂದಿರುವ ಮುಖಭಾಗದಲ್ಲೇ ಅದನ್ನು ಜೆಸಿಬಿ ಸಹಾಯದಿಂದ ಸೀಳಿ ಅಲ್ಲೂ ಕೂಡಾ ನದಿಯು ಸಮುದ್ರವನ್ನು ಸೇರುವಂತೆ ಮಾಡಲಾಗಿದೆ. ಶೌಚಗೃಹದ ನೀರಿನ ಟ್ಯಾಂಕಿಯನ್ನು ಆ ಜಾಗದಿಂದ ಸ್ಥಳಾಂತರಿಸಲೂ ಗುತ್ತಿಗೆದಾರ ಗುರ್ಗಾಂವ್‍ನ ಎ ಟು ಝೆಡ್ ಕಂಪೆನಿಯು ತೀರ್ಮಾನಿಸಿದೆ.