Protest outside Padubidri MESCOM office to find solution for long power disruptions

ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪಡುಬಿದ್ರಿ ಮೆಸ್ಕಾಂಗೆ ಮುತ್ತಿಗೆ

ಬುಧವಾರ ಇಲಾಖಾ ಮುಖ್ಯಸ್ಥರ ಜತೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ:ಶಾಸಕ ಲಾಲಾಜಿ ಮೆಂಡನ್

ಕಳೆದ ಹಲವು ದಿನಗಳಿಂದ ಪಡುಬಿದ್ರಿ ಮೆಸ್ಕಾಂ ವ್ಯಾಪ್ತಿಯ ಹೆಜಮಾಡಿ,ಪಡುಬಿದ್ರಿ,ತೆಂಕ,ಬಡಾ,ಪಾದೆಬೆಟ್ಟು,ನಂದಿಕೂರು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿದ್ದು,ಮೆಸ್ಕಾಂ ನಿರ್ಲಕ್ಷ್ಯ ವಿರೋಧಿಸಿ ಸಾರ್ವಜನಿಕರು ಒಗ್ಗೂಡಿ ಪಡುಬಿದ್ರಿ ಮೆಸ್ಕಾಂ ಶಾಖಾ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.


ಈ ಸಂದರ್ಭ ಪ್ರತಿಭಟನಾಕಾರರ ಜತೆಗೂಡಿದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಮೆಸ್ಕಾಂ ಎಇಇ ಜೆ.ಪಿ.ರವಿಯವರನ್ನು ತರಾಟೆಗೆ ತೆಗೆದುಕೊಂಡರು.ಕಾಪು ವ್ಯಾಪ್ತಯಲ್ಲಿ ಎಲ್ಲಾ ಕಡೆ ಸಮಸ್ಯೆ ಬಿಗಡಾಯಿಸಿದ್ದರೂ ಪಡುಬಿದ್ರಿ ಭಾಗದ ಸಮಸ್ಯೆ ಸರಿಪಡಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು.ಕಾಪು ಕ್ಷೇತ್ರ ವ್ಯಾಪ್ತಿಯ ಕೆಲವೆಡೆ ಗಂಭೀರ ಸಮಸ್ಯೆ ಇದ್ದರೂ ಬಹುಬೇಗ ಸಮಸ್ಯೆ ಪರಿಹಾರಗೊಂಡಿದೆ.ಆದರೆ ಅತೀ ಕಡಿಮೆ ಸಮಸ್ಯೆ ಇರುವ ಪಡುಬಿದ್ರಿ ಭಾಗದಲ್ಲಿ ನಿರ್ಲಕ್ಷ್ಯವೇಕೆ? ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಅವರು ಆಗ್ರಹಿಸಿದರು.


ಈ ಬಗ್ಗೆ ಬುಧವಾರ ಮೆಸ್ಕಾಂ ಸೀನಿಯರ್ ಎಕ್ಸಿಕ್ಯುಟಿವ್ ಇಂಜಿನಿಯರ್ ಶರತ್‍ಪಾಲ್ ಉಪಸ್ಥಿತಿಯಲ್ಲಿ ಕಾಪು ಮೆಸ್ಕಾಂ ಕಛೇರಿಯಲ್ಲಿ ಸಭೆ ನಡೆಸಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ವಿನಂತಿಸಲಾಗುವುದು ಎಂದು ಮೆಂಡನ್ ಮಾಧ್ಯಮಕ್ಕೆ ತಿಳಿಸಿದರು.

ಪಡುಬಿದ್ರಿ ಶಾಖಾಧಿಕಾರಿ ಮತ್ತು ಲೈನ್‍ಮ್ಯಾನ್‍ಗಳ ಜತೆ ಹೊಂದಾಣಿಕೆ ಕೊರತೆ: ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಹೊಸದಾಗಿ ನೇಮಕಗೊಂಡ ಸಹಾಯಕ ಇಂಜಿನಿಯರ್ ಸುಧೀರ್ ಪಟೇಲ್ ಮತ್ತು ಕಾರ್ಯನಿರ್ವಹಿಸುವ 13 ಲೈನ್‍ಮ್ಯಾನ್‍ಗಳ ನಡುವೆ ಹೊಂದಾಣಿಕೆ ಕೊರತೆಯಿಂದ ಸಮಸ್ಯೆ ಬಿಗಡಾಯಿಸಿದೆ ಎಂದು ಗ್ರಾಮಸ್ಥರ ದೂರು. ಸುಧೀರ್ ಪಟೇಲ್ ಗ್ರಾಹಕರ ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ.ದೂರು ಪಡೆದುಕೊಂಡರೂ ಲೈನ್‍ಮ್ಯಾನ್‍ಗಳಿಗೆ ತಿಳಿಸುವುದಿಲ್ಲ.ಹೆಚ್ಚಿನ ಅವಧಿಯಲ್ಲಿ ಕಾಲ್ ಡೈವರ್ಟ್ ಮಾಡಿರುತ್ತಾರೆ.ಹಾಗಾಗಿ ಕೆಲವೆಡೆ ಹಲವು ದಿನಗಳಿಂದ ವಿದ್ಯುತ್ ಸಂಪರ್ಕ ಒದಗಿಸಿಲ್ಲ.ಸುಧೀರ್ ಪಟೇಲ್‍ರನ್ನು ವರ್ಗಾವಣೆಗೊಳಿಸಬೇಕೆಂದು ಪ್ರತಿಭಟನಾಕಾರರು ಮೆಸ್ಕಾಂ ಮೇಲಾಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ದೊರೆಯಿತು.

ಈ ಹಿಂದಿನ ಮೆಸ್ಕಾಂ ಅಧಿಕಾರಿಗಳು ಹಗಲು ರಾತ್ರಿ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.ಇದೀಗ ರಾತ್ರಿ ವೇಳೆ ಅಪಾಯಕಾರಿ ಸಮಸ್ಯೆ ಇದ್ದರೂ ಕಛೇರಿ ದೂರವಾಣಿಯನ್ನೂ ಎತ್ತುವುದಿಲ್ಲ.ಮಾಸಿಕ ಬಿಲ್ ಪಾವತಿಸದಿದ್ದಲ್ಲಿ ತಕ್ಷಣ ಸಂಪರ್ಕ ಕಡಿತಗೊಳಿಸುತ್ತೀರಿ.ಸಮಸ್ಯೆಗೆ ಮಾತ್ರ ಶೀಘ್ರ ಪರಿಹಾರ ಒದಗಿಸುತ್ತಿಲ್ಲ.ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.ಅಲ್ಲದೆ ಈ ಹಿಂದಿನಂತೆ ದಿನದ 24 ಗಂಟೆಯೂ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳಿಗೆ ಮನವಿಗಳನ್ನು ಅರ್ಪಿಸಿದರು.
ಪಡುಬಿದ್ರಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಸುಧೀರ್ ಪಟೇಲ್ ವಿಕ ದೊಂದಿಗೆ ಮಾತನಾಡಿ,ಈ ಬಾರಿ ಮಳೆ ಹಾಗೂ ಗಾಳಿಯಿಂದ ಅಧಿಕ ಸಮಸ್ಯೆಯುಂಟಾಗಿದೆ.20 ಜನ ಲೈನ್‍ಮ್ಯಾನ್‍ಗಳ ಅಗತ್ಯವಿದ್ದು,ಕೇವಲ 13 ಮಂದಿ ಮಾತ್ರ ಹಗಲು ರಾತ್ರಿ ಅವಿರತ ಕಾರ್ಯನಿರ್ವಹಿಸುತ್ತಿದ್ದಾರೆ.2 ದಿನಗಳಿಂದ ಸಮಸ್ಯೆ ಕಡಿಮೆಯಾಗಿದೆ.ಆದರೆ ಭಾರೀ ಗಾಳಿಯಿಂದ ಪದೇಪದೇ ವಿದ್ಯುತ್ ನಿಲುಗಡೆ ಅನಿವಾರ್ಯವಾಗಿದೆ.ರಾತ್ರಿ ವೇಳೆ 3 ಲೈನ್‍ಮ್ಯಾನ್‍ಗಳು ಕಾರ್ಯನಿರ್ವಹಿಸುತ್ತಿದ್ದು,ಸಾಧ್ಯವಿದ್ದಷ್ಟು ಸಮಸ್ಯೆ ಪರಿಹರಿಸಿದ್ದಾರೆ.ಸಮಸ್ಯೆ ಅಧಿಕವಿದ್ದಾಗ ಫೋನ್‍ಕಾಲ್ ರಿಸೀವ್ ಮಾಡಲು ಸಾಧ್ಯವಾಗಿರಲಿಲ್ಲ.ಆದರೆ ಈಗ ಎಲ್ಲಾ ಕರೆಗಳನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

ವಿಶುಕುಮಾರ್ ಶೆಟ್ಟಿಬಾಲ್,ವಿಷ್ಣುಮೂರ್ತಿ ಆಚಾರ್ಯ,ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಮಿಥುನ್ ಆರ್,ಹೆಗ್ಡೆ,ಸುಧಾಕರ ಶೆಟ್ಟಿ ಹೆಜಮಾಡಿ,ಶಶಿಕಾಂತ್ ಪಡುಬಿದ್ರಿ,ನೀತಾ ಗುರುರಾಜ್,ರಮಾಕಾಂತ ದೇವಾಡಿಗ,ವಿಠಲ ಮಾಸ್ಟರ್,ಹರೀಶ್ ಕುಮಾರ್ ಶೆಟ್ಟಿ ಪಾದೆಬೆಟ್ಟು,ರಮೀಝ್ ಹುಸೈನ್,ಮ್ಯಾಕ್ಸಿಂ ಡಿಸೋಜಾ,ರವಿ ಶೆಟ್ಟಿ,ರಮೇಶ್ ಶೆಟ್ಟಿ,ಜಗದೀಶ ಶೆಟ್ಟಿ,ಕೌಸರ್,ಬಾಲಕೃಷ್ಣ ದೇವಾಡಿಗ,ರವಿ ಶೆಟ್ಟಿ,ಜಯ ಸಾಲ್ಯಾನ್,ಅಶೋಕ್ ಸಾಲ್ಯಾನ್,ರಾಜೇಶ್ ಕೋಟ್ಯಾನ್,ಗಣೇಶ್ ಕೋಟ್ಯಾನ್,ದಿವಾಕರ ಹೆಜಮಾಡಿ,ದಿನೇಶ್ ಕೋಟ್ಯಾನ್ ಪಲಿಮಾರು,ಮೆಸ್ಕಾಂ ಎಇ ಜಯಸ್ಮಿತಾ ಮತ್ತಿತರರು ಉಪಸ್ಥಿತರಿದ್ದರು.

 

News and pictures by:

HK Hemady