ಮಾನಸಿಕ ಸ್ಥಿರತೆ ಮತ್ತು ಶಾರೀರಿಕ ವ್ಯಾಯಾಮಕ್ಕಾಗಿ ಕ್ರೀಡಾ ಚಟುವಟಿಕೆ ಅಗತ್ಯ-ಲಾಲಾಜಿ ಆರ್ ಮೆಂಡನ್

ಪಡುಬಿದ್ರಿ: ಮಾನಸಿಕ ಸ್ಥಿರತೆ ಹಾಗೂ ಶಾರೀರಿಕ ವ್ಯಾಯಾಮಕ್ಕಾಗಿ ನಿರಂತರ ಕ್ರೀಡಾ ಚಟುವಟಿಕೆಗಳ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಪಡುಬಿದ್ರಿಯ ಕೆ.ಪಿ.ಎಸ್.(ಬೋರ್ಡ್ ಶಾಲೆ) ಮೈದಾನದಲ್ಲಿ ಮಂಗಳವಾರ ಉಡುಪಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕೆಪಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪಡುಬಿದ್ರಿ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿಕೆಟ್ ಮತ್ತು ಕಬಡ್ಡಿ ಇಂದು ದೇಶದ ಜನಪ್ರಿಯ ಕ್ರೀಡೆಯಾಗಿದೆ. ಇದರ ಜತೆಗೆ ಇತರ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹದ ಅಗತ್ಯವಿದೆ ಎಂದ ಅವರು, ಶಿಕ್ಷಣದಲ್ಲಿ ಗುರಿ ಮತ್ತು ಗುರು ಇರಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿದಲ್ಲಿ ಯಶಸ್ಸು ಶತಸಿದ್ಧ ಎಂದರು.

ಕ್ರೀಡಾ ಕೂಟದ ಜ್ಯೋತಿ ಹಸ್ತಾಂತರಿಸಿ ಮತ್ತು ಧ್ವಜಾರೋಹಣಗೈದು ಅವರು ಕ್ರೀಡಾಕೂಟಕ್ಕೆ ಉದ್ಘಾಟಿಸಿದರೆ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ರಾಷ್ಟ್ರಧ್ವಜ ಸಂಕೇತದ ಬೆಲೂನ್ ಹಾರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ನಾಲ್ಕು ವೃತ್ತಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, ಇಲ್ಲಿ ವಿಜೇತರಾದವರು ಅಕ್ಟೋಬರ್ 4-5ರಂದು ಕಾಪು ಮಹಾದೇವಿ ಶಾಲೆಯಲ್ಲಿ ನಡೆಯಲಿರುವ ತಾಲೂಕು ಕ್ರೀಡಾಕೂಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಶೂ-ಸಾಕ್ಸ್ ವಿತರಣೆ: ಇದೇ ಸಂದರ್ಭ ಸರಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಒದಗಿಸಲಾದ ಶೂ ಮತ್ತು ಸಾಕ್ಸ್ ಕಿಟ್‍ನ್ನು ಲಾಲಾಜಿ ಮೆಂಡನ್ ವಿತರಿಸಿದರು.

ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಕೆಪಿಎಸ್ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದ್ಯಮಿ ಮಿಥುನ್ ಆರ್.ಹೆಗ್ಡೆ, ಸಿಆರ್‍ಪಿ ಕವಿತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಮಂಗಳಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆಲ್ವಿನ್ ಅಂದ್ರಾದೆ, ಗ್ರಾಪಂ ಸದಸ್ಯೆ ನಯನಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಕೆಪಿಎಸ್ ಉಪಪ್ರಾಂಶುಪಾಲ ಪ್ರಸನ್ನ, ಎಸ್‍ಡಿಎಮ್‍ಸಿ ಅಧ್ಯಕ್ಷೆ ಮೋಹಿನಿ ಮುಖ್ಯ ಅತಿಥಿಗಳಾಗಿದ್ದರು.

ಕೆಪಿಎಸ್ ಪ್ರಾಂಶುಪಾಲೆ ಯಶೋದಾ ಸ್ವಾಗತಿಸಿದರು. ಗಾಯತ್ರಿ ರಾವ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಜೆಸಿಂತಾ ವಂದಿಸಿದರು.