Padubidri Shri Khadgeshwari Brahmasthana;s Dakke Bali – 2019

ರಹಸ್ಯ ಕಟ್ಟಳೆಗಳು ಮೈವೆತ್ತ ತಾಣ: ಪಡುಬಿದ್ರಿಯ ಬಯಲು ಆಲಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನ
ಜ.18ರಿಂದ ಮೊಳಗಲಿದೆ ಢಕ್ಕೆಬಲಿಯ ನಿನಾದ
– ಹರೀಶ್ ಹೆಜ್ಮಾಡಿ, ಪಡುಬಿದ್ರಿ

ಕಟ್ಟಡಗಳು ಪ್ರಧಾನವಾಗದೆ ಕಟ್ಟಳೆಗಳೇ ಮುಖ್ಯವಾಗಿರುವ ಆದಿಮ ಆಚರಣೆಯ ಸತ್ವಗಳನ್ನು ಉಳಿಸಿಕೊಂಡು,ಬದಲಾವಣೆಯ ಯಾವುದೇ ಸುಳಿಗೆ ಸಿಗದೆ ತನ್ನ ಮೂಲ ಸ್ವರೂಪದಲ್ಲಿ ಸಂಪ್ರದಾಯಬದ್ಧವಾಗಿ ಆಚರಣೆಗಳ ವೈವಿಧ್ಯದೊಂದಿಗೆ ಪಡುಬಿದ್ರಿಯ ಬ್ರಹ್ಮಸ್ಥಾನವು ವಿಶ್ವದಾದ್ಯಂತ ಆಸ್ತಿಕರ,ಚಿಂತಕರ,ವಾಸ್ತವವಾದಿಗಳ,ಸಂಶೋಧಕರ ಗಮನ ಸೆಳೆದ ಶೃದ್ಧಾಕೇಂದ್ರ.

ಇಲ್ಲಿ ನಡೆಯುವ ರೋಚಕ ವಿಧಿಗಳ ವಿಲಕ್ಷಣ ಆರಾಧನಾ ವಿಧಾನವನ್ನು ಸ್ಥೂಲವಾಗಿ ಗಮನಿಸಿದರೆ ಏನೂ ತಿಳಿಯದು.ಆದರೆ ಸೂಕ್ಷ್ಮ ಅವಲೋಕನದಿಂದ ಎಲ್ಲವೂ ಒಗಟಾಗುತ್ತಾ ವಿವರಗಳು ನಿಗೂಢವಾಗುತ್ತದೆ.ಆದುದರಿಂದಲೇ ಈ ಆರಾಧನಾ ಸನ್ನಿಧಾನವು ವಿಭಿನ್ನ ಸ್ತರಗಳ ಜನರ ಆಸಕ್ತಿಯನ್ನು ಕೆರಳಿಸುತ್ತದೆ.

ಬಯಲು ಆಲಯ ಎಂದೇ ವಿಶ್ವದಾದ್ಯಂತ ಪ್ರಸಿದ್ದಿ ಪಡೆದ ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ದೈವಾರ್ಷಿಕವಾಗಿ (ಉಡುಪಿ ಪರ್ಯಾಯ ಇಲ್ಲದ ವರ್ಷ) ಎರಡು ತಿಂಗಳ ಕಾಲ ನಡೆಯುವ ಅದ್ದೂರಿ ಢಕ್ಕೆ ಬಲಿ ಸೇವೆಯು ಜನವರಿ 18ರಿಂದ ಆರಂಭಗೊಂಡು ಮಾರ್ಚ್ 12ರವರೆಗೆ ಆಯ್ದ 35 ದಿನಗಳಲ್ಲಿ ನಡೆಯಲಿದೆ.

ಧಾರ್ಮಿಕ ಕ್ಷೇತ್ರಗಳ ತಾಣವೆಂದೇ ಪ್ರಸಿದ್ಧಿ ಪಡೆದ ಕರ್ನಾಟಕ ಕರಾವಳಿಯ ಉಡುಪಿ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಪಡುಬಿದ್ರಿಯಲ್ಲಿ ಗ್ರಾಮದೇವರಾದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿಯು ಪ್ರಧಾನ ದೇವರಾದರೂ ಅಲ್ಲಿನ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನವು ಜಗತ್‍ಪ್ರಸಿದ್ಧಿ ಪಡೆದ ತಾಣವಾಗಿದೆ.

ಮೇಲು ಕೀಳು ಬೇಧಭಾವ ಇಲ್ಲದೆ ಸನ್ನಿಧಿಗೆ ಆಗಮಿಸುವ ಭಕ್ತರೆಲ್ಲರೂ ಬಯಲು ಆಲಯದಲ್ಲಿ ನೆಲದಲ್ಲೇ ಪವಡಿಸಿ ಶ್ರೀ ವನದುರ್ಗೆಯ ದರ್ಶನ ಪಡೆದು ಧನ್ಯತಾ ಭಾವ ಹೊಂದುತ್ತಾರೆ. ಢಕ್ಕೆ ಬಲಿ ಸೇವೆಗಾಗಿ ದೇಶವಿದೇಶಗಳ ಭಕ್ತರು ಹಲವು ವರ್ಷ ಕಾಯಬೇಕಿದ್ದುದು ಶ್ರೀ ಕ್ಷೇತ್ರದ ಮಹಿಮೆಗೆ ಸಾಕ್ಷಿ.

ಭಕ್ತ ಜನೋದ್ಧಾರಕಳಾಗಿ ಈಕೆ ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನೆಲೆಯಾಗಿದ್ದಾಳೆ.ಭಕ್ತರ ಪ್ರೀತಿಯ ಸೆಲೆಯಾಗಿದ್ದಾಳೆ.
ಪಡುಬಿದ್ರಿ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನವು ದಟ್ಟ ಕಾನನದ ನಡುವೆ ಗುಡಿ ಗೋಪುರಗಳಿಲ್ಲದೆ ಕೇವಲ ಪ್ರಾಕೃತಿಕ ಸೊಬಗಿನ ಹಿನ್ನೆಲೆಯಲ್ಲಿದೆ.ಕೋಮು ಸೌಹಾರ್ದತೆಯ ಸಂಕೇತವಾಗಿ ಎಲ್ಲಾ ಧರ್ಮೀಯರೂ,ವಿಜ್ಞಾನಿಗಳೂ,ದೇಶ ವಿದೇಶಗಳ ವಿದ್ವಾಂಸರೂ,ಮಠಾಶರುಗಳೂ ಮುಕ್ತವಾಗಿ ಸಂದರ್ಶಿಸುವ ತಾಣವಿದು.

ಕಾಣಿಕೆ ಭಂಡಾರಗಳು ಇಲ್ಲಿಲ್ಲ.ರಾತ್ರಿಯ ವೇಳೆ ಇಲ್ಲಿ ಕೇವಲ ಕರ್ಪೂರ,ಎಣ್ಣೆ ದೀಪ,ದೊಂದಿ ಬೆಳಕು,ಈಗೀಗ ಗ್ಯಾಸ್ ಲೈಟ್‍ಗಳಿಂದ ಈ ವನವು ಕಂಗೊಳಿಸುತ್ತದೆ.ಲಕ್ಷಾಂತರ ಭಕ್ತರು ಸೇರಬಹುದಾದ ಈ ಸುಂದರ ತಾಣದಲ್ಲಿ ಮಹಿಳೆಯರು,ಮಕ್ಕಳು ರಾತ್ರಿ ವೇಳೆಯೂ ಯಾವುದೇ ಭಯ ಪಡದೆ ಸಂದರ್ಶಿಸಬಹುದಾಗಿದೆ.

ಪ್ರಾಕೃತಿಕ ನಯನ ಮನೋಹರ ದಟ್ಟ ಕಾನನದ ನಡುವೆ ಬ್ರಹ್ಮಸ್ಥಾನವು ದುರ್ಗೆಯ ಉದ್ಭವ ಸ್ಥಾನವಾಗಿರುತ್ತದೆ.ವಿಶಿಷ್ಠ ಸಾಂಪ್ರದಾಯಿಕ ಹಿನ್ನೆಲೆಯೊಂದಿಗೆ ಇದು ಸದಾ ಸಾನಿಧ್ಯದ ಸ್ಥಳವಾಗಿದೆ.

ಢಕ್ಕೆ ಬಲಿ ಸೇವೆ: ಎರಡು ವರ್ಷಗಳಿಗೊಮ್ಮೆ ಶ್ರೀ ಸನ್ನಿಯಲ್ಲಿ ನಡೆಯುವ ಢಕ್ಕೆಬಲಿ ಸೇವೆ ಬೆಳಿಗ್ಗೆ ಪುಣ್ಯಾಹ,ಪಂಚಾಮೃತ ಪುರಸ್ಸರವಾಗಿ ಬ್ರಹ್ಮಸ್ಥಾನವನ್ನು ಶುದ್ಧೀಕರಿಸಲಾಗುತ್ತದೆ.ಮಧ್ಯಾಹ್ನ ಬ್ರಾಹ್ಮಣ,ಸುವಾಸಿನಿಯರ ಆರಾಧನೆ,ಸಂತರ್ಪಣೆ ನಡೆದ ಬಳಿಕ ಸಂಜೆ ವೇಳೆ ಸೇವಾಕರ್ತರಿಂದ ಹೊರೆಕಾಣಿಕೆಯ ಸಮರ್ಪಣೆ ನಡೆಯುತ್ತದೆ.

ದೇವತಾ ಪ್ರಾರ್ಥನೆಯಾಗಿ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮಕ್ಷಮ ಹೊರೆ ಕಾಣಿಕೆಯನ್ನು ಶ್ರೀ ವನದುರ್ಗೆಗೆ ಸಮರ್ಪಿಸಲಾಗುತ್ತದೆ.
ಬಳಿಕ ಶಿವಳ್ಳಿ ಬ್ರಾಹ್ಮಣ ಯುವಕರಾದಿಯಾಗಿ ಅಬಾಲವೃದ್ಧರು ಸೇರಿ ಸನ್ನಿಯ ಅಲಂಕಾರವನ್ನು ಮಾಡುತ್ತಾರೆ.ಈ ಸಂದರ್ಭ ಸನ್ನಿಧಿಯ ಸೊಬಗನ್ನು ನೋಡಲು ಕಣ್ಣುಗಳೇ ಸಾಲವು.ಸಿರಿ ಸಿಂಗಾರಗಳಿಂದ ಬಳುಕುವ ವನದೇವತೆಯೇ ಮೈದುಂಬಿ ನಿಂತಿರುತ್ತಾಳೆ.ಹಣ್ಣುಹಂಪಲು,ವಿವಿಧ ಪುಷ್ಪಗಳು,ಹಿಂಗಾರ,ಅಡಿಕೆ,ಸಿಯಾಳಗಳಿಂದ ಬ್ರಹ್ಮಸ್ಥಾನವನ್ನು ಅಲಂಕರಿಸುತ್ತಾರೆ.

ಬಳಿಕ ರಾತ್ರಿ ಅರ್ಚಕರಿಂದ ಪುಣ್ಯಾಹವಾಚನ,ಶುದ್ಧೀಕರಣ ನಡೆದು ಶ್ರೀ ಖಡ್ಗೇಶ್ವರೀ,ಶ್ರೀ ನಾಗದೇವರ ಸನ್ನಿಧಾನದ ಅಲಂಕಾರವು ಅರ್ಚಕರಿಂದ ನಡೆಯುತ್ತದೆ.ಈ ನಡುವೆ ದರ್ಶನ ಪಾತ್ರಿಗಳ ಆಗಮನವಾಗುತ್ತದೆ.ಊರವರಲ್ಲಿ ಕೇಳಿ ಪಾತ್ರಿಗಳು ಸ್ನಾನಕ್ಕೆ ಹೊರಡುತ್ತಾರೆ.ಮರಳಿ ಬರುತ್ತಲೇ ವಾದಯಾದಿಗಳು ಮೊಳಗುತ್ತದೆ.ವೈದ್ಯರೆಂದು ಕರೆಯಲ್ಪಡುವ ಢಕ್ಕೆ ವಾದಕರೂ ನಡೆಯಲ್ಲಿ ಬಂದು ಸೇರುತ್ತಾರೆ.ಇದೇ ಸಂದರ್ಭ ಶ್ರೀ ಖಡ್ಗೇಶ್ವರೀ ಸನ್ನಿಧಾನದ ಮಹಾಪೂಜೆ ನಡೆಯುತ್ತದೆ.

ಬಳಿಕ ಪಾತ್ರಿಗಳು ಗಂಧಾದಿ ಲೇಪನವನ್ನು ಪಾತ್ರಿಗಳು ಮಾಡಿಕೊಳ್ಳುತ್ತಾರೆ.ದೂಪದೀಕ್ಷೆಯೂ ನಡೆಯುತ್ತದೆ.ಬಳಿಕ ಒಬ್ಬೊಬ್ಬರಾಗಿ ಪಾತ್ರಿಗಳು ನಡೆಯಲ್ಲಿ ವೈದ್ಯರ ಕಂಚಿನ ಢಕ್ಕೆಯ ನಿನಾದ,ಗಾಯನದೊಂದಿಗೆ ಪಂಚವಾದ್ಯ ಘೋಷ ಸಮ್ಮಿಲಿತವಾದಾಗ ಆವೇಶಭರಿತರಾಗುತ್ತಾರೆ.ಅವರನ್ನು ನಾಗಸನ್ನಿಗೆ ಕರೆತರಲಾಗುತ್ತದೆ.ಆವೇಶ ಮುಗಿದ ಬಳಿಕ ಅವರಿಗೆ ಹಿಂಗಾರ,ಹೂನೀರನ್ನು ನೀಡಲಾಗುತ್ತದೆ.ಅಜೆಕಾಯಿ ಕಲ್ಲಿನ ಸುತ್ತ ಹಾಡುತ್ತಾ ಸಾಗುವ ವೈದ್ಯರ ನರ್ತನದ ಬಳಿಕ ತಂಬಿಲ ಸೇವೆಯ ಮೊದಲ ಪ್ರಸಾದ ವಿತರಣೆಯಾಗುತ್ತದೆ.ಬಳಿಕ ಅಜೆಕಾಯಿ ಕಲ್ಲಿಗೆ ಪಾತ್ರಿಗಳು,ಅರ್ಚಕರು,ಗುರಿಕಾರರಿಂದ ತೆಂಗಿನಕಾಯಿ ಒಡೆಯುವ ಪ್ರಕ್ರಿಯೆ ನಡೆಯುತ್ತದೆ.ಜತೆಗೆ ಪಾತ್ರಿಗಳ ಆವೇಶ ಬಿಡುಗಡೆಯಾಗುತ್ತದೆ.ಇಲ್ಲಿಗೆ ಢಕ್ಕೆಬಲಿಯ ಮೊದಲ ಭಾಗ ಅಂತ್ಯಗೊಳ್ಳುತ್ತದೆ.

ಎರಡು ಗಂಟೆಗಳ ವಿರಾಮದ ಬಳಿಕ ವೈದ್ಯರುಗಳು ತೆಂಗಿನ ಗರಿಗಳಿಂದ ಮಂಡಲ ಚಪ್ಪರದ ಶೃಂಗಾರ ಮಾಡುತ್ತಾರೆ.ಪಂಚವರ್ಣದ ಹುಡಿಗಳಿಂದ ಮಂಡಲ ಚಿತ್ರಣವನ್ನೂ ಮಾಡುತ್ತಾರೆ.ಆಗಲೇ ಢಕ್ಕೆಬಲಿ ಸೇವೆ ಆರಂಭಗೊಳ್ಳುತ್ತದೆ.ನಾಗಕನ್ನಿಕೆ ವೇಷತೊಟ್ಟ ವೈದ್ಯರು ಮಂಡಲದೆದುರು ನರ್ತಿಸುತ್ತಾರೆ.ಪಾತ್ರಿಗಳ ಆಗಮನದೊಂದಿಗೆ ನಡೆಯಲ್ಲಿ ನಾಗಕನ್ನಿಕೆಯ ಢಕ್ಕೆ ನಿನಾದಕ್ಕೆ ಆವೇಶಭರಿತರಾಗುತ್ತಾರೆ.ಇದೇ ವೇಳೆ ಪಾತ್ರಿಗಳಿಂದ ಗುರಿಕಾರರಿಗೆ ಹಾಗೂ ನಾಗಕನ್ನಿಕೆಯರಿಗೆ ಮಾಲಾರ್ಪಣೆಯಾಗುತ್ತದೆ.ಫಲಪುಷ್ಪ ವಿತರಣೆಯಾಗಿ ಕೇಳಿಕೆಗಾಗಿ ವಿತರಣೆ ನಡೆಯುತ್ತದೆ.ನರ್ತನ,ಪವಿತ್ರ ನರ್ತನಗಳ ಬಳಿಕ ಪ್ರತ್ಯೇಕವಾಗಿ ಪಾತ್ರಿಗಳಿಂದ ವಾದ್ಯಘೋಷಗಳೊಂದಿಗೆ ಹಿಂಗಾರ ಸ್ನಾನವಾಗುತ್ತದೆ.

ಮಂಡಲದ ಸುತ್ತ ಅಕ್ಕಿಯಿಂದ ಬಲಿ ಸಮರ್ಪಣೆಯಾಗುತ್ತದೆ.ಪುನಃ ನರ್ತನವಾದ ಬಳಿಕ ಅರ್ಚಕರಿಂದ ಮಂಡಲ ಪೂಜೆಯಾಗುತ್ತದೆ.ಅನಂತರ ನಾಗಕನ್ನಿಕೆಯ ಕಂಚಿನ ಢಕ್ಕೆಯ ನಿನಾದಕ್ಕೆ ಮಣಿದು ಪಾತ್ರಿಗಳು ಶ್ರೀ ಖಡ್ಗೇಶ್ವರೀ ನಡೆಗೆ ಆಗಮಿಸುತ್ತಾರೆ.ಭಕ್ತರಿಂದ ತೆಂಗಿನಕಾಯಿಯ ಕಾಣಿಕೆ ಅರ್ಪಿಸಿ ಪರಿಹಾರ ಕೇಳುವ ಕ್ರಮವು ಜರುಗುತ್ತದೆ.ಪ್ರತಿ ಢಕ್ಕೆಬಲಿಯ ದಿನದಂದು ಗಂಧ ಪ್ರಸಾದ ವಿತರಣೆಯಾಗಿ ಅಂತಿಮವಾಗಿ ಮಂಡಲೋತ್ಸವದಂದು ಮಂಡಲ ಪ್ರಸಾದ ವಿತರಣೆಯಾಗುತ್ತದೆ.ಯಜಮಾನ ಪ್ರಸಾದ,ವೈದ್ಯರ ಪ್ರಸಾದಗಳ ವಿತರಣೆಯಾಗಿ ಆವೇಶ ಬಿಡುಗಡೆಯೊಂದಿಗೆ ಢಕ್ಕೆಬಲಿ,ಮಂಡಲೋತ್ಸವಗಳು ಸಂಪನ್ನಗೊಳ್ಳುತ್ತದೆ.

ಢಕ್ಕೆಬಲಿಯ ವೇಳೆ ಇಡೀ ಗ್ರಾಮದಲ್ಲಿ ಊರಿನ ಜನರು ಕೆಲವು ಅಲಿಖಿತ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದ್ದು,ಇಂದಿಗೂ ಚಾಲ್ತಿಯಲ್ಲಿದೆ.ಈ ಸಂದರ್ಭ ಯಾವುದೇ ಶುಭ ಸಮಾರಂಭಗಳನ್ನು ನಡೆಸುವಂತಿಲ್ಲ.ಯಾವುದೇ ಪ್ರಾಣಿಗಳನ್ನು ಬಲಿಕೊಡುವಂತಿಲ್ಲ.ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.ಗ್ರಾಮವ್ಯಾಪ್ತಿಯಲ್ಲಿ ಶವಸಂಸ್ಕಾರವನ್ನೂ ನಡೆಸುವಂತಿಲ್ಲ ಎಂಬುದು ಇಂದಿಗೂ ಚಾಲ್ತಿಯಲ್ಲಿದೆ.

ಬ್ರಹ್ಮಸ್ಥಾನದಲ್ಲೂ ಯಾವುದೇ ಕಾಣಿಕೆಗಳನ್ನು ನೀಡುವಂತಿಲ್ಲ.ಗಂಧ ಪ್ರಸಾದ ನೀಡುವುದಿಲ್ಲ.ಕುಳಿತ ಮರಳೇ ಪ್ರಸಾದ.ಛಾಯಾ ಚಿತ್ರ,ವೀಡಿಯೋ ಬಳಸುವಂತಿಲ್ಲ ಎಂಬ ನಿಯಮ ಇಲ್ಲಿದೆ.ಅರಸನಾದರೂ ಇಲ್ಲಿ ನೆಲದಲ್ಲೇ ಪವಡಿಸಬೇಕು.

ಇಲ್ಲಿ ವರ್ಷವಿಡೀ ತಂಬಿಲ ಸೇವೆಗಳು ನಡೆಯುತ್ತದೆ.ಹಗಲು ಮತ್ತು ರಾತ್ರಿಯಲ್ಲಿಯೂ ತಂಬಿಲ ಸೇವೆ ನಡೆಯುತ್ತದೆ.ಅಲ್ಲದೆ ಪಂಚಾಮೃತ ಅಭಿಷೇಕ ಸೇವೆಯೂ ಇದೆ.ತುಳು ತಿಂಗಳ ಆಟಿಯಲ್ಲಿ 16ನೇ ದಿನ ಅಜೆಕಾಯಿ ಎಂಬ ಸಾವಿರಗಟ್ಟಲೇ ತೆಂಗಿನಕಾಯಿ ಸನ್ನಿಯಲ್ಲಿ ಒಡೆಯುವ ವಿಶಿಷ್ಟ ಸೇವೆಯಂದು ಸಮುದ್ರದಾಳದಿಂದ ತೆಗೆದು ತಂದ ಮರಳನ್ನು ಸನ್ನಿಯ ಒಳಗೆ ಅರ್ಪಿಸಿ ವರ್ಷವಿಡೀ ಅದನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.

ಬಯಲು ಆಲಯವೆಂದೇ ಗುರುತಿಸ್ಪಡುವ ಶ್ರೀ ಸನ್ನಿಯು ಆಸ್ತಿಕರ ಇಷ್ಟಾರ್ಥ ಸಿದ್ಧಿಯ ತಾಣ.ತನ್ನೆಲ್ಲಾ ಆಚರಣೆಗಳಲ್ಲಿ ರಹಸ್ಯ ಮತ್ತು ಕಟ್ಟಳೆಗಳನ್ನು ರಕ್ಷಿಸಿಕೊಂಡಿರುವ ವಿಶಿಷ್ಟ ಆರಾಧನಾ ಸ್ಥಾನ.ಆದಿಮ ಸಂಸ್ಕøತಿಯ ಹಿನ್ನೆಲೆ ಇರುವ ಈ ಕ್ಷೇತ್ರ ಚಿಂತಕರ,ಸಂಶೋಧಕರ ಗಮನ ಸೆಳೆದಿದೆ.ಇಂತಹ ನಿಗೂಢ ಸತ್ಯಗಳ ಪರಂಪರೆಯನ್ನು ಕಾಪಾಡಿಕೊಂಡು ಬಂದ ಈ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಯು ಜನವರಿ 18 ರಿಂದ ಆರಂಭಗೊಂಡು ಮಾರ್ಚ್ 12ರವರೆಗೆ ನಿರ್ದಿಷ್ಟ ದಿನಗಳಲ್ಲಿ ವಿವಿಧ ಭಕ್ತರಿಂದ ಸೇವಾರೂಪದಲ್ಲಿ 35 ಢಕ್ಕೆಬಲಿ,ನಾಗಮಂಡಲ ಸೇವೆಗಳು ಸಂಪನ್ನಗೊಳ್ಳಲಿದೆ.ಈ ಪರಮ ಪವಿತ್ರ ಢಕ್ಕೆಬಲಿ ಸೇವೆಯಲ್ಲಿ ಭಕ್ತಾದಿಗಳು ಸಂಪೂರ್ಣವಾಗಿ ಪಾಲ್ಗೊಂಡು ಶ್ರೀ ಖಡ್ಗೇಶ್ವರಿಯ ಕೃಪೆಗೆ ಪಾತ್ರರಾಗುವಂತೆ ಬ್ರಹ್ಮಸ್ಥಾನದ ಆಡಳಿತದ ಶ್ರೀ ವನದುರ್ಗಾ ಟ್ರಸ್ಟ್ ವಿನಂತಿಸಿದೆ.

Archive pictures of Padubidri Shri Khadgeshwari Brahmasthana’s Dakke Bali: