ಸೆ.5: ಪಡುಬಿದ್ರಿ ಸಿಎ ಸೊಸೈಟಿ ವಜ್ರ ಮಹೋತ್ಸವ ಕಟ್ಟಡ “ಸಹಕಾರ ಸಂಗಮ” ಉದ್ಘಾಟನೆ

ಪಡುಬಿದ್ರಿ: ವಜ್ರ ಮಹೋತ್ಸವ ಸಂಭ್ರಮದ ಜಿಲ್ಲೆಯ ಮೊತ್ತ ಮೊದಲ ನೊಂದಾಯಿತ ಸಂಸ್ಥೆಯಾದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವಜ್ರ ಮಹೋತ್ಸವ ಕಟ್ಟಡ “ಸಹಕಾರ ಸಂಗಮ”ವು ಸೆಪ್ಟಂಬರ್ 5 ಗುರುವಾರ ಉದ್ಘಾಟನೆಗೊಳ್ಳಲಿದೆ.

ಶನಿವಾರ ಸೊಸೈಟಿಯ ಪ್ರಧಾನ ಕಛೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಪಡುಬಿದ್ರಿಯ ಅಂಚೆ ಕಛೇರಿ ಮುಂಭಾಗ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೆಲಮಹಡಿ ಸಹಿತ ನಾಲ್ಕು ಮಹಡಿಗಳೊಂದಿಗೆ ನೂತನವಾಗಿ ನಿರ್ಮಾಣಗೊಂಡ ಸಹಕಾರ ಸಂಗಮವನ್ನು ಮಂಗಳೂರು ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿರುವರು. ರಾಜ್ಯ ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೊಸೈಟಿಯ ನೂತನ ಸಭಾಂಗಣ ಉದ್ಘಾಟನೆ ನಡೆಸಲಿರುವರು.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸೊಸೈಟಿಯ ಶಾಖಾ ಕಛೇರಿಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಉದ್ಘಾಟಿಸುವರು. ಭದ್ರತಾ ಕೊಠಡಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದು, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್‍ರವರು ಕಂಪ್ಯೂಟರ್ ಉದ್ಘಾಟನೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರು ಪ್ರಧಾನ ಕಛೇರಿ ಉದ್ಘಾಟನೆ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‍ಚಂದ್ರ ಡಿ.ಸುವರ್ಣರವರು ಸೇಫ್ ಲಾಕರ್ ಉದ್ಘಾಟನೆ ನಡೆಸಲಿರುವರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿಯವರು ಠೇವಣಿ ಪತ್ರಗಳನ್ನು ಬಿಡುಗಡೆಗೊಳಿಸಲಿರುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಮಾಜಿ ಉಪಪ್ರಧಾನ ವ್ಯವಸ್ಥಾಪಕ ಮೋಹನ್‍ದಾಸ್ ಹೆಜ್ಮಾಡಿ, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಜಿಲ್ಲಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕ ಎಮ್‍ಎಚ್ ವಿಠಲ ಶೇರಿಗಾರ್, ಸಹಕಾರ ಸಂಘಗಳ ಕುಂದಾಪುರ ವಿಭಾಗದ ಸಹಾಯಕ ಉಪನಿಬಂಧಕಿ ಚಂದ್ರಪ್ರತಿಮಾ ಎಮ್‍ಜೆ ಮತ್ತಿತರ ಗಣ್ಯರು ಉಪಸ್ಥಿತರಿರುವರು.

9.30ಕ್ಕೆ ವಾರ್ಷಿಕ ಮಹಾಸಭೆ: ವಜ್ರಮಹೋತ್ಸವ ಕಟ್ಟಡ ಸಹಕಾರ ಸಂಗಮ ಉದ್ಘಾಟನೆಗೆ ಮುನ್ನ ಬೆಳಿಗ್ಗೆ 9.30 ಗಂಟೆಗೆ ಸೊಸೈಟಿಯ ವಾರ್ಷಿಕ ಮಹಾಸಭೆಯು ನೂತನ ಕಟ್ಟಡದ ಬಳಿ ನಡೆಯಲಿದೆ. ಸೊಸೈಟಿಯ ಎಲ್ಲಾ ಸದಸ್ಯರು ಮಹಾಸಭೆಯಲ್ಲಿ ಹಾಜರಿರುವಂತೆ ವೈ.ಸುಧೀರ್‍ಕುಮಾರ್ ವಿನಂತಿಸಿದ್ದಾರೆ.

ಪಡುಬಿದ್ರಿ ಕೇಂದ್ರ ಕಛೇರಿಯಾಗಿದ್ದುಕೊಂಡು ಹೆಜಮಾಡಿ, ಪಲಿಮಾರು ಮತ್ತು ಎರ್ಮಾಳು ತೆಂಕಗಳಲ್ಲಿ ಶಾಖೆಗಳನ್ನು ಹೊಂದಿರುವ ಸೊಸೈಟಿಯಲ್ಲಿ ವೈ.ಸುಧೀರ್ ಕುಮಾರ್‍ರವರು ಕಳೆದ 15 ವರ್ಷಗಳಿಂದ ಅಧ್ಯಕ್ಷರಾಗಿ ಸೊಸೈಟಿಯನ್ನು ಅಭೂತಪೂರ್ವವಾಗಿ ಉನ್ನತ ಸ್ಥಾನಕ್ಕೇರಿಸಿದ್ದು, ಜಿಲ್ಲೆಯ ಅತ್ಯುತ್ತಮ ಸಹಕಾರಿ ಸೊಸೈಟಿ ಆಗಿ ಮೂಡಿಬಂದಿದೆ. ಕಳೆದ 8 ವರ್ಷಗಳಲ್ಲಿ ಸದಸ್ಯರಿಗೆ ನಿರಂತರ ಶೇ.25 ಡಿವಿಡೆಂಟ್ ನೀಡುವ ಮೂಲಕ ಜಿಲ್ಲೆಯ ಏಕೈಕ ಸೊಸೈಟಿಯಾಗಿದೆ. ಅಲ್ಲದೆ ಕೃಷಿಕರಿಗೆ ಗೊಬ್ಬರ ಖರೀದಿಗೆ ಶೆ.15 ಸಬ್ಸಿಡಿ ನೀಡುವ ಏಕೈಕ ಸಂಸ್ಥೆಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಸೊಸೈಟಿ ನಿರ್ದೇಶಕರಾದ ರಾಜಾರಾಮ್ ರಾವ್, ವೈ.ಜಿ.ರಸೂಲ್, ಗಿರೀಶ್ ಪಲಿಮಾರ್, ವಾಸುದೇವ ದೇವಾಡಿಗ, ಯಶವಂತ ಪಿ.ಬಿ., ಮಾಧವ ಆಚಾರ್ಯ, ಸುಚರಿತಾ ಎಲ್.ಅಮೀನ್, ಕುಸುಮಾ ಎಮ್.ಕರ್ಕೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಉಪಸ್ಥಿತರಿದ್ದರು.