ಪಡುಬಿದ್ರಿಗೆ ಕೃಷಿ ಉಪ ಕೇಂದ್ರಕ್ಕೆ ಆಗ್ರಹ

ಪಡುಬಿದ್ರಿ: ಪಡುಬಿದ್ರಿ ಹಾಗೂ ಆಸುಪಾಸಿನ ಗ್ರಾಮಗಳ ಕೃಷಿಕರು ಕೃಷಿ ಬೀಜ ಖರೀದಿ ಸಹಿತ ಇತರ ಕೃಷಿ ಸಂಬಂಧಿ ಕಾರ್ಯಕ್ಕಾಗಿ ದೂರದ ಕಾಪುವಿನ ಕೃಷಿ ಕೇಂದ್ರಕ್ಕೆ ಹೋಗಬೇಕಾಗಿದೆ. ಅದರ ಬದಲು ಪಡುಬಿದ್ರಿಯಲ್ಲಿಯೇ ಕೃಷಿ ಕೇಂದ್ರ ಇದ್ದರೆ ಕೃಷಿಕರಿಗೆ ಅನುಕೂಲವಾಗಲಿದೆ. ಹಾಗಾಗಿ ಪಡುಬಿದ್ರಿಯಲ್ಲಿ ಕೃಷಿ ಉಪ ಕೇಂದ್ರ ಆರಂಭಕ್ಕೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಬುಧವಾರ ಪಡುಬಿದ್ರಿ ಗ್ರಾಪಂನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕೇಳಿಬಂತು.

ಈ ಬಗ್ಗೆ ಗ್ರಾಪಂ ನಿರ್ಣಯ ಅಂಗೀಕರಿಸಿ ಸಂಬಂಧಿತ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದೇ ಮೊದಲ ಬಾರಿಗೆ ಪಡುಬಿದ್ರಿ ಗ್ರಾಪಂನಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಕೃಷಿ ಸಹಾಯಕ ಅಧಿಕಾರಿ ವಾದಿರಾಜ್ ಕೃಷಿ ಇಲಾಖಾ ಮಾಹಿತಿ ನೀಡಿದರು. ಈ ಬಾರಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯಲ್ಲಿ 16 ಕ್ವಿಂಟಾಲ್ ಕೃಷಿ ಬೀಜ ವಿತರಿಸಲಾಗಿದೆ ಎಂದರು.ಬಳಿಕ ಅವರು ಬೆಳೆ ಸಮೀಕ್ಷೆ, ಬೆಳೆ ವಿಮೆ, ಕರಾವಳಿ ಕೃಷಿ ಪ್ಯಾಕೇಜ್‍ಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಬಿ.ರಾವ್ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದ್ದು, ಔಷಧ ಕೊರತೆ ಇದೆ. ಅದಕ್ಕೆ ನೀಡುವ ಅನುದಾನವೂ ಸಾಕಾಗದು ಎಂದರು. ಡೆಂಗೆ ಸಾಂಕ್ರಾಮಿಕ ಕಾಯಿಲೆ ಬಗ್ಗೆ ಮಾಹಿತಿ ನೀಡಿದ ಅವರು ಗ್ರಾಮ ವ್ಯಾಪ್ತಿಯಲ್ಲಿ ಹಲವೆಡೆ ನೀರಿ ಸಂಗ್ರಹವಾಗುತ್ತಿದ್ದು, ಈ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ. ಹೆಚ್ಚಾಗಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಹೆಚ್ಚು ಕಂಡು ಬಂದಿದೆ. ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಶಕುಂತಳಾರವರು ಮಾತೃಪೂರ್ಣ ಯೋಜನೆಯಡಿ ಶೇ.20 ಮಾತ್ರ ಪ್ರಗತಿಯಾಗಿರುವ ಬಗ್ಗೆ ಮಾಹಿತಿ ನೀಡಿದರು.

ಪಶು ಸಂಗೋಪನಾ ಇಳಾಖಾಧಿಕಾರಿ ವಸಂತ್‍ಕುಮಾರ್‍ರವರಿಗೆ ಗ್ರಾಮದ ಪಶು ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಕಟ್ಟಡ ಕಳಪೆ ಕಾಮಗಾರಿಗಳ ಪ್ರಶ್ನಿಸಲಾಯಿತು. ಈ ಬಗ್ಗೆ ಇಲಾಖಾ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಗ್ರಾಮ ವ್ಯಾಪ್ತಿಯಲ್ಲಿ 700ಕ್ಕೂ ಅಧಿಕ ವಸತಿ ನಿವೇಶನದ ಅರ್ಜಿಗಳ ವಿಲೇವಾರಿ ಬಗ್ಗೆ ಮತ್ತು ಆಹಾರ ಪಡಿತರ ಚೀಟಿ ಸಮಸ್ಯೆಗಳ ಕುರಿತು ಗ್ರಾಮ ಕರಣಿಕ ಶ್ಯಾಂಸುಂದರ್ ಗಮನ ಸೆಳೆಯಲಾಯಿತು.

ಸ್ಥಳಿಯ ಹಾಸ್ಟೆಲ್‍ಗಳ ಕುಂದುಕೊರತೆಗಳ ಬಗ್ಗೆ ವಾರ್ಡನ್ ಬಸವರಾಜ್‍ರವರ ಗಮನ ಸೆಳೆಯಲಾಯಿತು. ಸ್ಥಳೀಯ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ವಿದ್ಯಾರ್ಥಿಗಳ ಕೊರತೆ ಬಗ್ಗೆ ಗಮನ ಸೆಳೆದ ಶಿಕ್ಷಕ ರಮೇಶ್ ದೇವಾಡಿಗ, ಹಾಸ್ಟೆಲ್ ಮಕ್ಕಳು ಕಡ್ಡಾಯವಾಗಿ ಕೆಪಿಎಸ್‍ಗೆ ಬರುವಂತೆ ಮನವಿ ಮಾಡಿಕೊಂಡರು.

ಸೇವಾ ಕೇಂದ್ರದ ಮಕರಂದ್ ಸಾಲ್ಯಾನ್‍ರವರು ವಿಶೇಷಚೇತನ, ಹಿರಿಯ ನಾಗರಿಕ ಮತ್ತು ಪ್ರಾನ್ ಕಾರ್ಡ್, ಕಾರ್ಮಿಕ ಕಾರ್ಡ್‍ಗಳ ಬಗ್ಗೆ ಮಾಹಿತಿ ನೀಡಿದರು.

ಸಾಮಾಜಿಕ ಅರಣ್ಯ ಇಲಾಖೆಯ ರಶ್ಮಿ, ಮೆಸ್ಕಾಂ ಎಸ್‍ಒ ಸುಧೀರ್ ಪಠೇಲ್, ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಶ್ವೇತಾ ಹಿರೇಮಠ ಇಲಾಖಾ ಮಾಹಿತಿ ನೀಡಿದರು.

ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್, ನೀರು ಮತ್ತು ನೈರ್ಮಲ್ಯ ಸ್ಥಾಯೀ ಸಮಿತಿಯ ರವಿ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿಯ ಶಿವಮ್ಮ ಉಪಸ್ಥಿತರಿದ್ದರು.