ಪಡುಬಿದ್ರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಶುಭಾರಂಭ

ಬದಲಾವಣೆಗೆ ಒಗ್ಗಿಕೊಳ್ಳಬೇಕು- ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಹಲವು ವರ್ಷಗಳ ಬೇಡಿಕೆಯನ್ನು ಸರಕಾರ ಈಡೇರಿಸಿದ್ದು, ಆಧುನಿಕ ಬದಲಾವಣೆಗೆ ಪೂರಕವಾಗಿ ರಾಜ್ಯದಾದ್ಯಂತ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭಗೊಂಡಿದೆ. ಬದಲಾವಣೆ ಅನಿವಾರ್ಯವಾಗಿದ್ದು ನಾವದಕ್ಕೆ ಒಗ್ಗಿಕೊಳ್ಳಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

ಪಡುಬಿದ್ರಿ ಬೋರ್ಡ್ ಶಾಲೆ( ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ)ಯಲ್ಲಿ ಸೋಮವಾರ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ್ನು ಶುಭಾರಂಭಗೊಳಿಸಿ ಅವರು ಮಾತನಾಡಿದರು.

ಶಾಲಾ ಅಭಿವೃದ್ಧಿಗೆ ಈ ಹಿಂದೆ 1.90 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿತ್ತು. ಪ್ರಸ್ತುತ ಮರಳಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ದೊರಕಿದ್ದು ಆಂಗ್ಲ ಮಾಧ್ಯಮ ಶಾಲಾ ಕಟ್ಟಡ ರಚನೆಗೆ ಒಂದು ಕೋಟಿ ರೂ. ಮರು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಶಾಲಾ ಅಭಿವೃದ್ಧಿಗೆ 30 ವಿದ್ಯಾರ್ಥಿಗಳ ಕಡ್ಡಾಯ ದಾಖಲಾತಿ ಅವಶ್ಯವಾಗಿದೆ. ಪಡುಬಿದ್ರಿ ಶಾಲೆಯ ಎಲ್‍ಕೆಜಿಗೆ 6, ಯುಕೆಜಿಗೆ 10 ಮತ್ತು ಒಂದನೇ ತರಗತಿಗೆ 7 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು(ಒಟ್ಟು 23), ಸಾರ್ವಜನಿಕರ ಸಹಕಾರದೊಂದಿಗೆ ಶೀಘ್ರ 30 ದಾಖಲಾತಿ ಮಾಡಬೇಕು ಎಂದರು. ಸರಕಾರವು ಅತ್ಯುತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು, ತರಬೇತುಗೊಳಿಸಿದ ಶಿಕ್ಷಕರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸರಕಾರಿ ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ನಮ್ಮೆಲ್ಲರ ಜವಾಬ್ದಾರಿ ಇದೆ ಎಂದರು.

ಸಮಾರಂಭದ ಅಧ್ಯಕ್ಷೆ ವಹಿಸಿದ್ದ ಜಿಲ್ಲಾ ಪರಿಷತ್ ಮಾಜಿ ಸದಸ್ಯ ರವೀಂದ್ರನಾಥ ಜಿ.ಹೆಗ್ಡೆ ಮಾತನಾಡಿ, 1950-56ರಲ್ಲಿ ತಾನು ಈ ಶಾಲಾ ವಿದ್ಯಾರ್ಥಿಯಾಗಿದ್ದ ಸಂದರ್ಭ ಮಕ್ಕಳ ಸಂಖ್ಯೆ 1500 ದಾಟಿತ್ತು. ಕಳೆದ ಬಾರಿ 90 ರಷ್ಟಿತ್ತು. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದು, ನಾವೆಲ್ಲರೂ ಒಂದಾಗಿ ಸಹಕರಿಸಬೇಕಿದೆ ಎಂದರು.

ನೂತನವಾಗಿ ದಾಖಲಾದ ಮಕ್ಕಳಿಗೆ ಬೆಲೂನ್‍ಗಳನ್ನು ವಿತರಿಸುವ ಮೂಲಕ ಶಾಲಾ ಉದ್ಘಾಟನೆ ನಡೆಯಿತು.

ಜಿಪಂ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ, ತಾಪಂ ಸದಸ್ಯೆ ನೀತಾ ಗುರುರಾಜ್, ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬೋರ್ಡ್ ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಉಮಾ ಮುಖ್ಯ ಅತಿಥಿಗಳಾಗಿದ್ದರು.

ಸರಕಾರಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲೆ ಯಶೋದಾ ಸ್ವಾಗತಿಸಿದರು. ಶಿಕ್ಷಕಿ ಫ್ಲೋರಿನ್ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಸರಕಾರಿ ಪ್ರೌಢ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರಸನ್ನ ವಂದಿಸಿದರು.