Padubidri Grama Panchayat members visit solid waste management unit in Nitte

Members of  Padubidri Grama Panchayat visited Nitte Grama  Panchayat’s successfully operational  solid waste management unit in order to implement the same  system in Padubidri.

Full news in Kannada:

ಪಡುಬಿದ್ರಿ ಗ್ರಾಪಂ ಸದಸ್ಯರಿಂದ ನಿಟ್ಟೆ ಗ್ರಾಪಂ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ                 

ಶೀಘ್ರ ಪಡುಬಿದ್ರಿಯಲ್ಲೂ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭ-ದಮಯಂತಿ ವಿ.ಅಮೀನ್

ಸುಮಾರು ಆರೂವರೆ ಸಾವಿರ ಮನೆಗಳಿರುವ ಪಡುಬಿದ್ರಿ ಗ್ರಾಪಂನಲ್ಲಿ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಸಮಸ್ಯೆ ನಿರ್ವಹಿಸಲಾಗದಷ್ಟು ಅಧಿಕವಾಗಿದ್ದು,ಉಡುಪಿ ಜಿಲ್ಲಾಧಿಕಾರಿ ನಿರ್ದೇಶನದಂತೆ ಪಡುಬಿದ್ರಿಯ ಗ್ರಾಪಂ ಸದಸ್ಯರು ಬುಧವಾರ ನಿಟ್ಟೆ ಗ್ರಾಪಂ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದರು.
ಹೆದ್ದಾರಿ ಪಕ್ಕದಲ್ಲೇ ಇರುವ ನಿಟ್ಟೆ ಗ್ರಾಪಂ ಕಟ್ಟಡದ ಆವರಣದಲ್ಲೇ ಅತ್ಯಂತ ಸುವ್ಯಸ್ಥಿತವಾಗಿ ಕೇವಲ ಐವರು ಸ್ವಯಂಸೇವಕರ ನೆರವಿನೊಂದಿಗೆ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ವಹಿಸುತ್ತಾ ಜಿಲ್ಲೆಯಲ್ಲಿಯೇ ಪೈಲೆಟ್ ಗ್ರಾಪಂ ಆಗಿ ಆಯ್ಕೆಯಾದ ಹೆಗ್ಗಳಿಕೆ ಹೊಂದಿದೆ.

ಈಗಾಗಲೇ ಎರಡು ಹಂತದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗ ನಿರ್ವಹಿಸಿದ ನಿಟ್ಟೆ ಗ್ರಾಪಂ ಮೂರನೇ ಹಂತದಲ್ಲಿ ಸರಕಾರದಿಂದ ಒದಗಿಸಲಾದ ಒಂದೂವರೆ ಎಕ್ರೆ ಜಾಗದಲ್ಲಿ ಬ್ರಹತ್ ಮಟ್ಟದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅಡಿಯಿಟ್ಟಿದ್ದು,ವಿವಿಧ ಅನುದಾನಗಳನ್ನು ಕ್ರೋಢೀಕರಿಸಿ 40 ಲಕ್ಷ ರೂ ತೆಗೆದಿರಿಸಿದೆ.ಈ ಆಧುನಿಕ ಘಟಕ ಆರಂಭಗೊಂಡಲ್ಲಿ ನಿಟ್ಟೆಯಲ್ಲದೆ ಆಸುಪಾಸಿನ ಗ್ರಾಮಗಳ ತ್ಯಾಜ್ಯಗಳನ್ನೂ ಸ್ವೀಕರಿಸುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಗ್ರಾಪಂ ಪಿಡಿಒ ಮಾಧವರಾವ್ ದೇಶಪಾಂಡೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುಮಾರು 3 ಸಾವಿರ ಮನೆಗಳಿರುವ ನಿಟ್ಟೆಯಲ್ಲಿ ಪ್ರಥಮ ಹಂತವಾಗಿ 300 ಅಂಗಡಿ ಮತ್ತು ಮನೆಗಳನ್ನು ಆರಿಸಿ ಅಲ್ಲಿಂದ ದಿನಕ್ಕೆ 2 ಬಾರಿ ಕಸ ಸಂಗ್ರಹಿಸಿ ಪಂಚಾಯಿತಿ ಆವರಣದಲ್ಲಿಯೇ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತಿದೆ.2ನೇ ಹಂತದಲ್ಲಿ ನಿಟ್ಟೆ ವಿವಿ ವ್ಯಾಪ್ತಿಯನ್ನು ಆರಿಸಿ ಅವರದೇ ಅನುದಾನ ಬಳಸಿ ತ್ಯಾಜ್ಯ ವಿಲೇವಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಗ್ರಾಪಂ ವತಿಯಿಂದಲೇ ಗೋಶಾಲೆಯೊಂದನ್ನು ಆರಂಭಿಸಿದ್ದು,ತರಕಾರಿ ಮತ್ತಿತರ ತ್ಯಾಜ್ಯಗಳನ್ನು ಬಳಸಲಾಗುತ್ತಿದೆ.ಕೋಳಿ ಸಾಕಣಿಕೆಯನ್ನು ಮಾಡಲಾಗಿದೆ.ಗ್ರಾಪಂ ಕಟ್ಟಡದ ತಾರಸಿಯಲ್ಲಿ ತರಕಾರಿ ಬೆಳೆಗಳನ್ನು ನಡೆಸಲಾಗಿದೆ.ಪ್ಲಾಸ್ಟಿಕ್‍ಗಳನ್ನು ವಿಂಗಡಿಸಿ ಗುಜರಿ ಅಥವಾ ಪ್ಲಾಸ್ಟಿಕ್ ಕಂಪನಿಗಳಿಗೆ ನೀಡಲಾಗುತ್ತಿದೆ.
ಈವರೆಗೆ ಕಸ ಸಂಗ್ರಹಕ್ಕೆ ಯಾವುದೆ ದರ ಪಡೆಯುತ್ತಿಲ್ಲ.ಆದರೆ ಜುಲೈ ಒಂದರಿಂದ ಪ್ರತಿ ಮನೆಗೆ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿ ತಿಂಗಳಗೆ ಸುಮಾರು 43 ಸಾವಿರ ರೂ.ಪಡೆಯುವ ನಿರೀಕ್ಷೆ ಹೊಂದಿದ್ದೇವೆ ಎಂದು ಮಾಧವರಾವ್ ದೇಶಪಾಂಡೆ ಹೇಳಿದ್ದಾರೆ.

ಜಿಲ್ಲಾಧಿಕಾರಿಯವರಿಗೂ ಇಲ್ಲಿನ ಘಟಕದ ಬಗ್ಗೆ ಮೆಚ್ಚುಗೆ ಇದ್ದು ಇತರ ಗ್ರಾಪಂಗಳಿಗೆ ಪೈಲೆಟ್ ಗ್ರಾಮವನ್ನಾಗಿ ಗುರುತಿಸಿದ್ದಾರೆ.ಇದೇ ಹಿನ್ನೆಲೆಯಲ್ಲಿ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ನಿಟ್ಟೆ ಗ್ರಾಮದ ಮದನಾಡು ಎಂಬಲ್ಲಿ ಒಂದೂವರೆ ಎಕ್ರೆ ಜಾಗವನ್ನು ಗ್ರಾಪಂಗೆ ಒದಗಿಸಲಾಗಿದೆ.ಆ ಬಳಿಕ ಗ್ರಾಮದ ಪ್ರತಿಯೊಂದು ಮನೆಯಿಂದಲೂ ಕಸ ಸಂಗ್ರಹ ಆರಂಬಿಸಲಾಗುವುದು ಎಂದಿದ್ದಾರೆ.

ಗ್ರಾಮದ ನಾಗರಿಕರು ಹಾಗೂ ಪಂಚಾಯಿತಿ ಸದಸ್ಯರು ಘಟಕ ಆರಂಭಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು ಯೋಜನೆ ಯಶಸ್ಸಿಗೆ ಪೂರಕವಾಗಿದೆ ಎಂದು ದೇಶಪಾಂಡೆ ಹೇಳಿದರು.
ಗೊಬ್ಬರಗಳಿಗೆ ಬೇಡಿಕೆ: ಕಸದಿಂದ ತಯಾರಿಸಿದ ವಿವಿಧ ಬಗೆಯ ಕ್ಯಾಲ್ಶಿಯಂ,ಮ್ಯಾಟ್,ತಲೆದಿಂಬು,ಪೌಡರ್, ಗೊಬ್ಬರಗಳಿಗೆ ಹೆಚ್ಚು ಬೇಡಿಕೆಯಿದೆ ಎಂದು ಅವರು ಹೇಳಿದ್ದು,ಅದಕ್ಕಾಗಿ ಪ್ರತ್ಯೇಕ ಮಾರಾಟ ಕೌಂಟರ್ ಆರಂಭಿಸಲಾಗಿದೆ.
ಪಡುಬಿದ್ರಿ ಗ್ರಾಪಂ ಸದಸ್ಯರ ಮೆಚ್ಚುಗೆ:ಘಟಕವನ್ನು ಸಮಗ್ರವಾಗಿ ಅಭ್ಯಸಿಸಿದ ಪಡುಬಿದ್ರಿ ಗ್ರಾಪಂ ಸದಸ್ಯರು ಪಡುಬಿದ್ರಿಯಲ್ಲಿ ಶೀಘ್ರ ಘಟಕ ಸ್ಥಾಪನೆಯತ್ತ ಆಸಕ್ತಿ ತೋರಿದ್ದಾರೆ.ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮಾತನಾಡಿ,ಪಡುಬಿದ್ರಿಯಲ್ಲಿ ಸರಕಾರಿ ಜಾಗದ ಕೊರತೆಯಿದೆ.ಸರಕಾರ ಆಸಕ್ತಿ ವಹಿಸಿ ಸೂಕ್ತ ಜಾಗ ನೀಡಿದಲ್ಲಿ ಅತೀ ಶೀಘ್ರದಲ್ಲಿ ಘಟಕ ಆರಂಭಿಸಲಾಗುವುದು ಎಂದಿದ್ದಾರೆ.
ಪಿಡಿಒ ಪಂಚಾಕ್ಷರಿ ಸ್ವಾಮಿ ಮಾತನಾಡಿ,ಪಡುಬಿದ್ರಿಯ ಎನ್‍ಟಿಪಿಸಿ ಗೋಡೌನ್ ಹಾಗೂ ಅದರ ಪಕ್ಕ 42 ಸೆಂಟ್ಸ್ ಸರಕಾರಿ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಪಡುಬಿದ್ರಿ ಗ್ರಾಪಂ ವತಿಯಿಂದ ಮನವಿ ಮಾಡಲಾಗಿದೆ.ಅದು ದೊರೆತಲ್ಲಿ ನಿಟ್ಟೆ ಘಟಕ ಮಾದರಿಯಲ್ಲಿ ಸುವ್ಯವಸ್ಥಿತ ಘನ ತ್ಯಾಜ್ಯ ಘಟಕ ಆರಂಭಿಸಲಿದ್ದೇವೆ.ಅಲ್ಲಿವರೆಗೆ ಪಂಚಾಯಿತಿ ಆವರಣ ಅಥವಾ ಮಾರ್ಕೆಟ್ ಬಳಿಯ ಸರಕಾರಿ ಜಾಗದಲ್ಲಿ ಶೀಘ್ರ ತ್ಯಾಜ್ಯ ಘಟಕ ಆರಂಭಿಸಲಿದ್ದೇವೆ.ಇಲ್ಲಿ ಸುಮಾರು 6500 ಮನೆಗಳಿದ್ದು ಘನ ತ್ಯಾಜ್ಯ ಅಧಿಕವಾಗಿ ಹೊರಬರುತ್ತಿದೆ.ಅದಕ್ಕೆ ಪೂರಕವಾಗಿ ಘಟಕ ಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ.
ಗ್ರಾಪಂ ಸದಸ್ಯರಾದ ನವೀನ್ ಎನ್.ಶೆಟ್ಟಿ,ಶ್ರೀನಿವಾಸ ಶರ್ಮ,ರವಿ ಶೆಟ್ಟಿ,ಸೇವಂತಿ ಸದಾಶಿವ್,ಲಕ್ಷ್ಮಣ ಅಮೀನ್,ಜಾನಕಿ,ಸುಮಿತ್ರಾ,ಸಾಧನಾ,ಸಂಜೀವಿ ಪೂಜಾರ್ತಿ ಭಾಗವಿಸಿದ್ದರು.

News and pictures by:

HK  Hejmady

One thought on “Padubidri Grama Panchayat members visit solid waste management unit in Nitte

  • July 10, 2018 at 5:53 pm
    Permalink

    Nice.

Comments are closed.