ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ

ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ರಸ್ತೆ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ
ಪಡುಬಿದ್ರಿ: ವಿದೇಶೀ ಬೀಚ್‍ಗಳಿಗೆ ಸರಿಸಮಾನವಾಗಿ ನಮ್ಮ ಅತ್ಯುತ್ತಮ ಗುಣಮಟ್ಟದ ಬೀಚ್‍ಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಪಡುಬಿದ್ರಿ ಬೀಚ್ ಎಂಡ್ ಪಾಯಿಂಟ್‍ನಿಂದ ನಡಿಪಟ್ಣದವರೆಗೆ ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ ಉಪ ವಿಭಾಗದ ಮೂಲಕ ಒಂದು ಕೋಟಿ ರೂ. ವೆಚ್ಚದಲ್ಲಿ ವಿಸ್ತಾರಗೊಳಿಸಿ ನಿರ್ಮಾಣವಾಗಲಿರುವ ಮೀನುಗಾರಿಕಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮೆಂಡನ್ ಮಾತನಾಡಿದರು.

ಕೇಂದ್ರ ಸರ್ಕಾರದ ಮೂಲಕ ಸುಮಾರು 8 ಕೋಟಿ ವೆಚ್ಚದಲ್ಲಿ ಬ್ಲೂ ಫ್ಲ್ಯಾಗ್ ಬೀಚ್ ಅನುಷ್ಠಾನವಾಗುತ್ತಿದ್ದು, ಮೀನುಗಾರಿಕಾ ಮತ್ತು ಬಂದರು ಇಲಾಖೆ ಮೂಲಕ ಇಲ್ಲಿನ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೆ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ವಿನಂತಿಸಲಾಗಿದ್ದು, ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದರು.

ಹೆಜಮಾಡಿ ಬಂದರು, ಪಡುಬಿದ್ರಿ ಬಸ್ ನಿಲ್ದಾಣ, ಎಸ್‍ಎಲ್‍ಆರ್‍ಎಂ ಘಟಕ, ಎಸ್‍ಟಿ ಕಾಲನಿ, ಪಡುಬಿದ್ರಿ-ಕಾಪು-ಕಟಪಾಡಿಯ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳ ಪರಿಶೀಲನೆಗಾಗಿ ಸೆಪ್ಟಂಬರ್ 4 ರಂದು ಜಿಲ್ಲಾಧಿಕಾರಿ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿ ಭೇಟಿಗೆ ದಿನಾಂಕ ಗೊತ್ತುಪಡಿಸಲಾಗಿದೆ ಎಂದವರು ಹೇಳಿದರು.
ಉಡುಪಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಉಪಾಧ್ಯಕ್ಷ ವೈ. ಸುಕುಮಾರ್, ಸದಸ್ಯರಾದ ಸೇವಂತಿ ಸದಾಶಿವ, ಅಶೋಕ್ ಸಾಲ್ಯಾನ್, ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ, ಬಂದರು ಇಲಾಖೆಯ ಉದಯಕುಮಾರ್, ಜೈರಾಮ್, ಪಡುಬಿದ್ರಿ ಬೀಚ್ ನಿರ್ವಹಣಾ ಸಮಿತಿಯ ಮನೋಹರ ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಅಶೋಕ್, ಬ್ಲೂ ಫ್ಲ್ಯಾಗ್ ಬೀಚ್ ವ್ಯವಸ್ಥಾಪಕ ಬಿಸ್ವನಾಥ್ ನಾಯಕ್, ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ, ಇಂಜಿನಿಯರ್ ಕೃಷ್ಣಪ್ರತಾಪ್, ಭದ್ರತಾ ಅಧಿಕಾರಿ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.

ಫೋಟೋ:ಕ್ಯಾ: ಬಂದರು ಮತ್ತು ಮೀನುಗಾರಿಕಾ ಇಲಾಖೆ ಉಡುಪಿ ಉಪ ವಿಭಾಗದ ಮೂಲಕ ರೂ. 1 ಕೋಟಿ ವೆಚ್ಚದಲ್ಲಿ ಪಡುಬಿದ್ರಿ ಬೀಚ್ ಎಂಡ್ ಪಾಯಿಂಟ್‍ನಿಂದ ನಡಿಪಟ್ಣದವರೆಗೆ ವಿಸ್ತಾರಗೊಳಿಸಿ ನಿರ್ಮಾಣವಾಗಲಿರುವ ಮೀನುಗಾರಿಕಾ ರಸ್ತೆ ಕಾಮಗಾರಿಗೆ ಶಾಸಕ ಲಾಲಾಜಿ ಆರ್. ಮೆಂಡನ್ ಗುದ್ದಲಿಪೂಜೆ ನೆರವೇರಿಸಿದರು.