ಮುಟ್ಟಳಿವೆಯಲ್ಲಿ ಸಮುದ್ರ ಕೊರೆತ: ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ಗಾಳಿಮರ, ರಸ್ತೆ ನೀರುಪಾಲು

ಪಡುಬಿದ್ರಿ: ಹೆಜಮಾಡಿ ಮತ್ತು ಪಡುಬಿದ್ರಿ ಗ್ರಾಮಗಳನ್ನು ಸಮುದ್ರ ತೀರದಲ್ಲಿ ವಿಭಜಿಸುವ ಮುಟ್ಟಳಿವೆಯ ನೀರಿನ ಹರಿವು ವಿಪರೀತವಾದ ಕಾರಣ ಪಡುಬಿದ್ರಿ ಭಾಗದ ಬ್ಲೂ ಫ್ಲ್ಯಾಗ್ ಬೀಚ್‍ನ ಗಾಳಿಮರಗಳು ಮತ್ತು ರಸ್ತೆಯು ಸಮುದ್ರ ಪಾಲಾಗಿದೆ.

ವಿಪರೀತ ಮಳೆಯ ಕಾರಣ ಕಾಮಿನಿ ಹೊಳೆಯ ನೀರಿನ ಹೊರ ಹರಿವು ಹೆಚ್ಚಳವಾಗಿ ಸಮುದ್ರ ಸೇರುವ ಮುಟ್ಟಳಿವೆಯು ವಕ್ರವಾಗಿ ಹರಿದು ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿದ್ದ 50 ಕ್ಕೂ ಅಧಿಕ ಗಾಳಿಮರಗಳು ಸಮುದ್ರ ಪಾಲಾಗಿದ್ದು, ಇನ್ನಷ್ಟು ಗಾಳಿಮರಗಳು ನೀರು ಪಾಲಾಗುವ ಭೀತಿ ಎದುರಾಗಿದೆ. ಅಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿದ ರಸ್ತೆಯೂ ಕಡಿತಗೊಂಡಿದೆ.

ಮುಟ್ಟಳಿವೆಯ ಹೆಜಮಾಡಿ ಭಾಗದ ಸಮುದ್ರ ತಡೆಗೋಡೆಯೂ ಭಾಗಶಃ ಕುಸಿದು ಸಮುದ್ರ ಪಾಲಾಗಿದೆ. ಅಲ್ಲದೆ ನೀರಿನ ಹರಿವಿನ ವೇಗ ಹೆಚ್ಚಾದಂತೆ ಮತ್ತಷ್ಟು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ರಸ್ತೆಗುಂಟ ಹಕಲಗಿದ್ದ ತಡೆಗೋಡೆಯೂ ಸಮುದ್ರ ಪಾಲಾಗಿದೆ.

ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿ ಸಂದರ್ಭ ಇಲ್ಲಿ ಗಾಳಿ ಮರಗಳನ್ನು ಸಂರಕ್ಷಿಸಿ ಹೊಸ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅಳಿವೆಯ ನೀರಿನ ಹರಿವಿನ ವ್ಯತ್ಯಯದಿಂದ ಇದೀಗ ಗಾಳಿ ಮರಗಳು ಸಮುದ್ರ ಪಾಲಾಗಿದೆ.

ಮುಟ್ಟಳಿವೆ ಬಳಿ ಕಾಮಿನಿ ಹೊಳೆ ಮತ್ತು ಸಮುದ್ರದ ಮಧ್ಯೆ ನೇರವಾಗಿ ಹರಿಯುತ್ತಿದ ನೀರಿನ ದಾರಿ ವಕ್ರವಾಗಿ ಸಾಗಿದ ಕಾರಣ ಎರಡೂ ಬದಿಗಳಲ್ಲಿ ಕೊರೆತ ಉಂಟಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಕಾರಣ ಈ ಕೊರೆತ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಬ್ಲೂ ಫ್ಲ್ಯಾಗ್ ಬೀಚ್‍ನ ಕಾಮಗಾರಿ ಆರಂಭಗೊಂಡ ಬಳಿಕ ಇಲ್ಲಿ ನದಿ ಕೊರೆತ ಮತ್ತು ಸಮುದ್ರ ಕೊರೆತದಿಂದ ಸಾಕಷ್ಟು ಹಾನಿಯಾಗಿದೆ.