ಪಾದೆಬೆಟ್ಟು ಹೊಯಿಗೆತೋಟ ಜಲಾವೃತ

ಪಡುಬಿದ್ರಿ: ಶುಕ್ರವಾರ ಬೆಳಿಗ್ಗೆಯಿಂದ ಸುರಿದ ಮಳೆಯಿಂದ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಹೊಯಿಗೆತೋಟ ಪ್ರದೇಶ ಜಲಾವೃತವಾಗಿದೆ. ಮಧ್ಯಾಹ್ನ ನೆರೆ ನೀರು ಮನೆಯಂಗಳಕ್ಕೆ ನುಗ್ಗಿದ ಪರಿಣಾಮ ಇಲ್ಲಿನ ಆರು ಮನೆಗಳವರು ತೊಂದರೆ ಅನುಭವಿಸಿದರು.ನಾಟಿ ಕೆಲಸಕ್ಕೆ ತೆರಳಿದ್ದ ಇಲ್ಲಿನ ಹಿರಿಯ ನಿವಾಸಿ ಮೀನಾಕ್ಷಿಯವರನ್ನು ಮನೆಯವರೆಲ್ಲ ಸೇರಿ ನೆರೆ ನೀರಿನಲ್ಲಿಯೇ ಮನೆಗೆ ಕರೆ ತಂದರು.

ಮಳೆ ನೀರು ಹರಿದು ಕಾಮಿನಿ ನದಿ ಸೇರುವ ಬೃಹತ್ ತೋಡುಗಳ ಮಧ್ಯದ ಪ್ರದೇಶದಲ್ಲಿರುವ ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ನೆರೆ ಹಾವಳಿ ಉಂಟಾಗುತ್ತಿದೆ. ಅದಕ್ಕೆ ಈವರೆಗೂ ಶಾಶ್ವತ ಪರಿಹಾರ ಲಭಿಸಿಲ್ಲ. ಇದೀಗ ನೆರೆಯ ಪರಿಣಾಮ ಜನ ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಗಿದೆ.

ಸಂಪರ್ಕ ರಸ್ತೆ ಕೊರತೆಯಿಂದ ಇಲ್ಲಿನ ನಿವಾಸಿಗಳು ದೈನಂದಿನ ಕೆಲಸ ಕಾರ್ಯಕ್ಕೆ ಸಾಗಬೇಕಾದರೆ ಗದ್ದೆ ಬದುಗಳೇ ರಸ್ತೆಯಾಗಿದೆ. ಮಳೆಯಂದ ನೆರೆ ನೀರು ತುಂಬಿ ಗದ್ದೆ ಬದುಗಳು ಮುಳುಗಡೆಯಾಗಿ ಸಂಚಾರಕ್ಕೆ ಭವಣೆಪಡುವಂತಾಗಿದೆ.