Opposition to toll collection without completing the highway widening work

Padubidri, August 23rd, 2018: At a press conference held in the presence of Hejamady, Sastan, Suratkal and Talapady anti-toll protesters, at the Amantrana hall of Hotel Amar Comforts on Thursday, Undivided DK District National Highway Horata Samiti President Dr. Deviprasad Shetty said that toll collection without completing the four-laning work of NH-66 will not be allowed at any cost. “If the company ignores this warning and collects toll forcibly, strong protest will be staged by uniting school and college students and various associations and organizations, he warned.

Token protest on Sept. 20th: Samiti member Shekhar Hejmady said that a token protest will be staged from morning 8 to noon 12 at Talapady, Suratkal, Hejamady and Sastan toll plazas.

Full news in Kannada …

ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ-ಡಾ.ದೇವಿಪ್ರಸಾದ್ ಶೆಟ್ಟಿ

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ.ಇದನ್ನು ಉಲ್ಲಂಘಿಸಿ ಬಲಾತ್ಕಾರವಾಗಿ ಟೋಲ್ ಸಂಗ್ರಹಿಸಿದಲ್ಲಿ ವಿವಿಧ ಸಂಘ ಸಂಸ್ಥೆಗಳು,ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸಮಿತಿಯ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು.ಇದರಿಂದಾಗುವ ತೊಂದರೆಗಳಿಗೆ ಜಿಲ್ಲಾಡಳಿತವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಅವಿಭಜಿತ ದಕ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಗುರುವಾರ ಪಡುಬಿದ್ರಿಯ ಅಮರ್ ಕಂಫಟ್ರ್ಸ್‍ನ ಆಮಂತ್ರಣ ಸಭಾಂಗಣದಲ್ಲಿ ಹೆಜಮಾಡಿ,ಸಾಸ್ತಾನ,ಸುರತ್ಕಲ್ ಮತ್ತು ತಲಪಾಡಿ ಟೋಲ್ ವಿರೋಧಿ ಹೋರಾಟಗಾರರ ಸಮ್ಮುಖ ಅವಿಭಜಿತ ದಕ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸೆ.20.ಸಾಕೇತಿಕ ಪ್ರತಿಭಟನೆ: ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸದೆ ಕಾನೂನುಬಾಹಿರವಾಗಿ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಸೆಪ್ಟೆಂಬರ್ 20 ರ ಬೆಳಿಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ತಲಪಾಡಿ,ಸುರತ್ಕಲ್,ಹೆಜಮಾಡಿ ಮತ್ತು ಸಾಸ್ತಾನ ಟೋಲ್ ಸಂಕೀರ್ಣಗಳಲ್ಲಿ ಸಾಕೇತಿಕ ಪ್ರತಿಭಟನೆ ನಡೆಸಲು ಸಮಿತಿ ತೀರ್ಮಾನಿಸಿದೆ ಎಂದು ಸಮಿತಿ ಸದಸ್ಯ ಶೇಖರ್ ಹೆಜ್ಮಾಡಿ ತಿಳಿಸಿದರು.
ಸಾರ್ವಜನಿಕ ಹಿತಾಸಕ್ತಿ ದಾವೆ: ತಲಪಾಡಿಯಿಂದ ಕುಂದಾಪುರದವರೆಗೆ ಮೂಲ ವಿನ್ಯಾಸಕ್ಕೆ ವಿರುದ್ಧವಾಗಿ ಚತುಷ್ಪಥ ಕಾಮಗಾರಿ ನಡೆಸಿರುವ ಗುತ್ತಿಗೆದಾರ ನವಯುಗ ಕಂಪೆನಿ ವಿರುದ್ಧ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ದೇವಿಪ್ರಸಾದ್ ಹೇಳಿದರು.ಸಮಗ್ರ ದಾಖಲೆಗಳು ಲಭ್ಯವಾದ ತಕ್ಷಣ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಲಾಗುವುದು ಎಂದವರು ಹೇಳಿದರು.

ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಉಲ್ಲಂಘಿಸಿ ಟೋಲ್ ಸಂಗ್ರಹಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಹಕಾರ ನೀಡಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.ಜಿಲ್ಲಾಡಳಿತ ಹಾಗೂ ಪೊಲೀಸರು ಗುತ್ತಿಗೆದಾರರ ಪರವಾಗಿರದೆ ಜನಪರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಅಪಘಾತದ ತಕ್ಷಣ ಪ್ರಕರಣ ದಾಖಲು: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಅಪೂರ್ಣ ಕಾಮಗಾರಿಯಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಲೇ ಇದೆ. ಮುಂದಿನ ದಿನಗಳಲ್ಲಿ ಯಾವುದೇ ಅಪಘಾತ ನಡೆದರೂ ಮೊದಲಾಗಿ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲಿಸುವುದೆಂದು ಹೋರಾಟ ಸಮಿತಿ ನಿರ್ಣಯಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರ ಕಂಪೆನಿ ಶಾಮೀಲಾಗಿ ಕಾನೂನು ಉಲ್ಲಂಘಿಸಿ ಶೇಕಡ 80 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರ ಹಾಗೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇನ್ನೂ ಕೂಡಾ 6 ಸೇತುವೆ, ಕೆಲವೆಡೆ ಹೆದ್ದಾರಿ ಕಾಮಗಾರಿಗಳು, ಸರ್ವಿಸ್ ರಸ್ತೆ ಪೂರ್ಣಗೊಂಡಿಲ್ಲ ಎಂದು ದೂರಿದರು.

ಈಗಾಗಲೇ ಹೆದ್ದಾರಿಯ ಅಪೂರ್ಣ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತಗಳು ನಡೆದು ನೂರಾರು ಮಂದಿ ಜೀವ ಕಳೆದು, ಕುಟುಂಬಗಳು ಬೀದಿಪಾಲಾಗಿವೆ. ಹಲವಾರು ಮಂದಿ ಅಂಗವೈಕಲ್ಯ ಹೊಂದಿದ್ದಾರೆ. ಯಾರೂ ಪರಿಹಾರ ನೀಡಿಲ್ಲ. ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಕಳೆದ 2 ವರ್ಷಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 8 ಬಾರಿ ಸಭೆ ನಡೆದರೂ ಕೇವಲ ಟೋಲ್ ವಿನಾಯಿತಿ ಮಾತ್ರ ದೊರಕಿದೆ. ಉಳಿದ ಯಾವುದೇ ಬೇಡಿಕೆಗಳಿಗೆ ಪರಿಹಾರ ದೊರಕಿಲ್ಲ ಎಂದರು.

60 ಕಿಮೀಗಳಿಗೆ ಒಂದು ಟೋಲ್ ಇರಬೇಕೆಂಬ ಕಾನೂನಿದ್ದರೂ, ತಲಪಾಡಿಯಿಂದ ಸಾಸ್ತಾನದವರೆಗಿನ 120 ಕಿಮೀ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಟೋಲ್‍ಗಳು ಕಾರ್ಯಾಚರಿಸುತ್ತಿವೆ. ಸುರತ್ಕಲ್ ಟೋಲ್ ಹೆಜಮಾಡಿ ಟೋಲ್‍ನೊಂದಿಗೆ ವಿಲೀನ ಮಾಡಲಾಗುತ್ತದೆ ಎಂದು ಹೇಳಿದ್ದರೂ ಇನ್ನೂ ಆಗಿಲ್ಲ. ಈಗಾಗಲೇ ಸುರತ್ಕಲ್ ಟೋಲ್ ಇನ್ನೊಬ್ಬರಿಗೆ ಟೆಂಡರ್ ಆಗಿದೆ. ಶಾಸಕರು, ಸಂಸದರು ಸಹಿತ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಹೆಜಮಾಡಿ ಟೋಲ್ ಅವೈಜ್ಞಾನಿಕ: ಹೆಜಮಾಡಿಯಲ್ಲಿ ಟೋಲ್ ಸಂಕೀರ್ಣವನ್ನು ಬೇರೆಡೆ ಸ್ಥಳಾಂತರಿಸುವಂತೆ ಆರಂಭದಲ್ಲಿ ಪರಿಪರಿಯಾಗಿ ವಿನಂತಿಸಲಾಗಿತ್ತು.ಆದರೆ ಅವೈಜ್ಞಾನಿಕವಾಗಿ ಹೆಜಮಾಡಿಯಲ್ಲಿ ಟೋಲ್ ಸಂಕೀರ್ಣ ನಿರ್ಮಾಣಗೊಂಡ ಕಾರಣ ಹೆಜಮಾಡಿ ಒಳ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡು ಟೋಲ್ ನಷ್ಟಕ್ಕೆ ಕಾರಣವಾಗಿದೆ.ಇದೀಗ ಎಚ್ಚೆತ್ತ ಟೋಲ್ ಕಂಪನಿಯು ಹೆಜಮಾಡಿ ಒಳ ರಸ್ತೆಗೆ ಪ್ರತ್ಯೇಕ ಟೋಲ್ ಸಂಕೀರ್ಣ ನಿರ್ಮಿಸುವ ಮೂಲಕ ಒಂದೇ ಕಡೆ ಎರಡು ಟೋಲ್ ನಿರ್ಮಿಸಿ ಮುಜುಗರಪಟ್ಟುಕೊಂಡಿದೆ ಎಂದು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ ಹೇಳಿದರು.

ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಹೋರಾಟ ಸಮಿತಿಯ ಸಂಚಾಲಕ ಪ್ರತಾಪ್ ಶೆಟ್ಟಿ ಸಾಸ್ತಾನ, ಚಿತ್ತರಂಜನ್ ಭಂಡಾರಿ ಸುರತ್ಕಲ್, ದಿವಾಕರ ಶೆಟ್ಟಿ ಕಾಪು, ಮಧು ಆಚಾರ್ಯ ಮೂಲ್ಕಿ, ತಾಪಂ ಸದಸ್ಯರಾದ ಮೈಕೆಲ್ ರಮೇಶ್ ಡಿಸೋಜಾ, ಯು.ಸಿ. ಶೇಖಬ್ಬ, ಅಬ್ದುಲ್ ಅಜೀಜ್, ಶೇಖರ್ ಹೆಜಮಾಡಿ, ಲೋಕೇಶ್ ಕಂಚಿನಡ್ಕ, ಸುಧೀರ್ ಕರ್ಕೇರ, ಮಿಥುನ್ ಆರ್.ಹೆಗ್ಡೆ, ಗುಲಾಂ ಮೊಹಮ್ಮದ್, ಪಾಂಡುರಂಗ ಕರ್ಕೇರ ಇದ್ದರು.