Mulki Yuvavahini celebrates 16th year ‘Aatidonji Dina-2018’

16ನೇ ವರ್ಷದ ಮೂಲ್ಕಿ ಯುವವಾಹಿನಿಯ ಆಟಿಡೊಂಜಿ ದಿನ-2018

ನಿರಂತರ ಕಾರ್ಯಕ್ರಮಗಳ ಮೂಲಕ ಸಂಘಟನೆ ಬಲಿಷ್ಠ-ಪದ್ಮನಾಭ ಕೋಟ್ಯಾನ್

ಸಾಮಾಜಿಕ ಜವಾಬ್ದಾರಿಯೊಂದಿಗೆ ಸದಸ್ಯರನ್ನು ಒಗ್ಗೂಡಿಸಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಂಘಟನೆ ಬಲಿಷ್ಠವಾಗುತ್ತದೆ.ಸಮಾಜವೂ ಅಭಿವೃದ್ಧಿಯಾಗುತ್ತದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.

ಮೂಲ್ಕಿಯ ಬಿಲ್ಲವರ ಸಭಾಗೃಹದಲ್ಲಿ ಭಾನುವಾರ ಮೂಲ್ಕಿ ಯುವವಾಹಿನಿಯ 16ನೇ ವರ್ಷದ ಆಟಿಡೊಂಜಿ ದಿನ-2018ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಬಾರಿ ವಿಶೇಷತೆಗಳೊಂದಿಗೆ ಆಟಿಡೊಂಜಿ ದಿನ ಆಚರಿಸಿದ ಯುವವಾಹಿನಿಯ ಕಾರ್ಯಕ್ರಮದಲ್ಲಿ ಉದ್ಘಾಟಕರು ವೇದಿಕೆಯಲ್ಲಿ ತೆಂಗಿನ ಕಾಯಿ ಹೆರೆದು,ತರಕಾರಿ ಕೊಚ್ಚುವ ಮೂಲಕ ಚಾಲನೆ ನೀಡಿದರು.

ಹಿಂದಿನ ದಿನಗಳಲ್ಲಿ ಕೃಷಿ ಅವಲಂಬಿತರಾಗಿ ಜೀವನ ನಿರ್ವಹಣೆ ನಡೆಯುತ್ತಿದ್ದು ಮಳೆಗಾಲದ ಆಟಿ ತಿಂಗಳಿನಲ್ಲಿ ಪ್ರಕೃತಿಯಲ್ಲಿ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿ ಬದುಕು ಸಾಗಿಸುತ್ತಿದ್ದರು. ಆಧುನಿಕತೆಯ ಇಂದಿನ ದಿನಗಳಲ್ಲಿ ಎಲ್ಲರೂ ಆರ್ಥಿಕವಾಗಿ ಸದೃಢರಾಗುತ್ತಿದ್ದು ಆಟಿ ಆಚರಣೆ ಮೂಲಕ ನಮ್ಮ ಸಂಸ್ಕ್ರತಿಯನ್ನು ನೆನಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಫನೀಯವೆಂದು ಪದ್ಮನಾಭ ಕೋಟ್ಯಾನ್ ಹೇಳಿದರು.

ಮೂಲ್ಕಿಯ ಯುವವಾಹಿನಿಯ ಘಟಕವು ಆಟಿ ಆಚರಣೆಯನ್ನು ಮೂಲ್ಕಿಯಲ್ಲಿ ಪ್ರಥಮವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದು ಇದೀಗ 16ನೇ ವರ್ಷವನ್ನು ಪೂರೈಸಿದ್ದು ಇನ್ನು ಉತ್ತಮ ಕಾರ್ಯಗಳು ಮೂಡಿ ಬರಲೆಂದು ಹಾರೈಸಿದರು.
ಸನ್ಮಾನ:ಹಿರಿಯ ಕೃಷಿಕರಾಗಿದ್ದು ಇಂದಿಗೂ ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಳೆಯಂಗಡಿ ತಿಮ್ಮಪ್ಪ ಅಮೀನ್ ನಾಣಿಲ್‍ರವರನ್ನು ಆಟಿದ ತಮ್ಮನದೊಂದಿಗೆ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಪತ್ರಕರ್ತ ನರೇಶ್‍ಕುಮಾರ್ ಸಸಿಹಿತ್ಲು ಮಾತನಾಡಿ,ನಮ್ಮ ಯಾವುದೇ ಆಚರಣೆಗಳು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು.ನಮ್ಮ ವಿಶಿಷ್ಟ ಆಚರಣೆಗಳ ವೈಜ್ಞಾನಿಕ ಮಹತ್ವಗಳನ್ನು ಎಳೆಯರಿಗೆ ತಿಳಿಸಿಕೊಡಬೇಕು ಎಂದರು.

ಆಟಿ ಆಚರಣೆ ಬಗ್ಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕ್ರತೆ ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ ಉಪನ್ಯಾಸ ನೀಡಿದರು.
ಕಿನ್ನಿಗೋಳಿಯ ವಿಜಯ ಕಲಾವಿದರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ,ಆಟಿ ಆಚರಣೆಯೊಂದಿಗೆ ಸಮಾಜವನ್ನು ಸಂಕೀರ್ಣ ಕಾಲಘಟ್ಟದಲ್ಲಿ ಕಟ್ಟಿ ಬೆಳೆಸಿದ ಹಿರಿಯರನ್ನು ನೆನೆಯುವುದು ಮುಖ್ಯವಾದುದು.ಆಚರಣೆಗಳು ಮನೋರಂಜನೆಗೆ ಸೀಮಿತವಾಗದೆ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಬೇಕು ಎಂದರು.
ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಕ್ರಮ ನಿರ್ದೇಶಕರುಗಳಾದ ಭಾಸ್ಕರ ಪಿ.ಕೋಟ್ಯಾನ್ ಮತ್ತು ರಾಜೇಶ್ವರೀ ನಿತ್ಯಾನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆನಂದ್ ಬೋಳಾರ್‍ರ ಮಗ ಸೂರಜ್ ಬೋಳಾರು ನೇತೃತ್ವದಲ್ಲಿ “ಪತ್ತೀಸ್ ಗ್ಯಾಂಗ್” ಕಲಾವಿದರು, ರಂಗ್ ಖ್ಯಾತಿಯ ವಿಸ್ಮಯ ವಿನಾಯಕ್,ಲವ್ ಬಾಬಾ ಚಿತ್ರದ ರೆಹಮಾನ್ ಉಡುಪಿ,ಅಗ್ನಿ ಸಾಕ್ಷಿ ಧಾರವಾಹಿಯ ಸಂದೀಪ್ ಪಣಿಯೂರು,ಕೋಟಿ ಚೆನ್ನಯ ಧಾರವಾಹಿಯ ಕ್ಯಾಮರಾಮೆನ್ ಅರುಣ್ ಕನ್ಯಾನ,ಮೀನಾ ಚಿತ್ರದ ನೃತ್ಯ ಸಂಯೋಜಕಿ ಬಬಿತಾ ನರೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ರಂಗು ತುಂಬಿದರು.ಈ ಸಂದರ್ಭ ವಿಸ್ಮಯ ವಿನಾಯಕ್ ಹಾಸ್ಯ ತುಣುಕುಗಳ ಮೂಲಕ ರಂಜಿಸಿದರು.
ಮೂಲ್ಕಿಯ ಯುವವಾಹಿನಿ ಕಲಾವಿದರಿಂದ ಆಟಿದ ತೆಲಿಕೆ-ನಲಿಕೆ-ಪದರಂಗಿತ,ಮೂಲ್ಕಿಯ ಎಕ್ಸ್‍ಟ್ರೀಮ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಬಂದ ಸಭಿಕರಿಗೆ ಬೆಳಿಗ್ಗೆ ಅರೆಪುದಡ್ಡೆ,ಚಾ,ಕಾಫಿ,ಬಳಿಕ ಹಪ್ಪಳ,ಕಡ್ಲೆ,ಸಾಂತಾನಿ,ಕೆರೆಂಗ್‍ದ ಪೂಲ್,ಮಧ್ಯಾಹ್ನ ಆಟಿದ ಅಟಿಲ್‍ದ ಕಮ್ಮೆನದಲ್ಲಿ ಕುಕ್ಕುದ ಉಪ್ಪಡ್,ತಿಮರೆ ಚಟ್ನಿ,ಉಪ್ಪಡ್ ಪಚ್ಚೀರ್,ತೆಕ್ಕರೆದ ತಲ್ಲಿ,ಕುಡುತ್ತ ಚಟ್ನಿ,ಕುಕ್ಕುದ ಚಟ್ನಿ,ತೊಜಂಕ್ ನುರ್ಗೆ ತೊಪ್ಪು,ತೇವು ತೇಟ್ಲ,ಪದೆಂಗಿ ಗಸಿ,ತೇವು ಪದ್ಪೆ,ಬಂಬೆ ಕುಡು ಗಸಿ,ಉರ್ಪೆಲ್ ನುಪ್ಪು,ಕುಡುತ ಸಾರ್,ಪೆಲಕಾಯಿದ ಗಟ್ಟಿ,ಪೆಲಕಾಯಿದ ಗಾರ್ಯ,ಮೆತ್ತೆದ ಗಂಜಿ ಮುಂತಾದ ರುಚಿಕರ ಖಾದ್ಯಗಳಿಂದ ಕೂಡಿದ ಭೋಜನ ನಡೆಯಿತು.
ಸುಮಾರು 2000 ಕ್ಕೂ ಮಿಕ್ಕ ಮಂದಿ ಭಾಗವಹಿಸಿದ್ದರು.

ಮೂಲ್ಕಿಯ ಯುವವಾಹಿನಿ ಘಟಕದ ಅಧ್ಯಕ್ಷೆ ಕುಶಲ ಎಸ್ ಕುಕ್ಯಾನ್ ಸ್ವಾಗತಿಸಿದರು.ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್ ಪ್ರಸ್ತಾವನೆಗೈದರು.ಚರಿಷ್ಮಾ ಶ್ರೀನಿವಾಸ್ ವಂದಿಸಿದರು.ನರೇಂದ್ರ ಕೆರೆಕಾಡು ಮತ್ತು ಉದಯ ಅಮೀನ್ ಮಟ್ಟು ನಿರೂಪಿಸಿದರು.