ಮೂಲ್ಕಿ ಶಾಂಭವಿ ಹೊಳೆಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಜನ ಸಂದಣಿ: ತಿನ್ನಲು ಬಲುರುಚಿ

— ಎಚ್ಕೆ ಹೆಜ್ಮಾಡಿ

ಮೂಲ್ಕಿ: ಮೂಲ್ಕಿಯ ಶಾಂಭವಿ ಹೊಳೆ ಮತ್ತು ನಂದಿನಿ ಹೊಳೆ ಸಂಗಮ ಸ್ಥಳದಲ್ಲಿ ಕಳೆದ ಒಂದು ತಿಂಗಳಿಂದ ಕಪ್ಪೆಚಿಪ್ಪು(ಮರುವಾಯಿ ಅಥವಾ ಕ್ಲ್ಯಾಮ್ಸ್) ಬಿದ್ದಿದ್ದು, ದೂರದೂರುಗಳಿಂದ ಮಹಿಳೆಯರು, ಮಕ್ಕಳು ಸೇರಿ ಸಾರ್ವಜನಿಕರು ಬರುತ್ತಿದ್ದಾರೆ.

ರಜಾ ದಿನಗಳ ಮಜಾ ಅನುಭವಿಸಿದಂತೆಯೂ ದೂರದೂರುಗಳಿಂದ ವಾಹನ ಮೂಲಕ ಆಗಮಿಸುವ ಜನರು ಕಪ್ಪೆಚಿಪ್ಪು ಹೆಕ್ಕಲು ಹೊಳೆಗಿಳಿಯುತ್ತಿದ್ದಾರೆ.

ಬಲು ರುಚಿ: ಮೂಲ್ಕಿ ಶಾಂಭವಿ ಹೊಳೆಯ ಮೀನುಗಳಿಗೆ ಬಹಳ ಬೇಡಿಕೆಯಿದೆ.ಇಲ್ಲಿ ಸುಗುವ ಕಾಣೆ ಮೀನು ಅಥವಾ ಲೇಡೀಸ್ ಫಿಶ್ ಬಲು ರುಚಿಕರ. ಅದನ್ನು ಖರೀದಿಸಲು ದೂರದೂರುಗಳಿಂದ ಮೂಲ್ಕಿಗೆ ಆಗಮಿಸುವವರಿದ್ದಾರೆ. ಅದೇ ರೀತಿ ಇತರ ಮೀನುಗಳಿಗೂ ಬಹುಬೇಡಿಕೆ ಇದೆ. ಇದೀಗ ಮೂಲ್ಕಿ ಶಾಂಭವಿ ಹೊಳೆಯ ಕಪ್ಪೆ ಚಿಪ್ಪು ಬಲು ರುಚಿಕರವಾಗಿದೆ ಎಂದು ಅಲ್ಲಿಗೆ ಬಂದವರು ಹೇಳುತ್ತಾರೆ.

ದೂರದೂರುಗಳಿಂದ ಆಗಮಿಸುವ ಜನಸಂದಣಿ: ಪಾಣೆ ಮಂಗಳೂರು, ಬಂಟ್ವಾಳ, ಮೂಡಬಿದಿರೆ, ಬೆಳ್ಮಣ್ಣು, ಮುದರಂಗಡಿ,ಕಿನ್ನಿಗೋಳಿ,ಕೃಷ್ಣಾಪುರ, ಹಳೆಯಂಗಡಿ, ಸುರತ್ಕಲ್, ಪಡುಬಿದ್ರಿ ಕಡೆಗಳಿಂದಲೂ ಸಾರ್ವಜನಿಕರು ಶಾಂಭವಿ ಹೊಳೆಯಲ್ಲಿ ಕಪ್ಪೆಚಿಪ್ಪು ಹೆಕ್ಕುತ್ತಾರೆ.ಬೆಳ್ಳಂಬೆಳಗ್ಗೆಯೇ ಸಾರ್ವಜನಿಕರು ಮೂಲ್ಕಿಗೆ ಆಗಮಿಸಿ ಹೊಳೆಗಿಳಿಯುತ್ತಿದ್ದಾರೆ. ಮೊಣಕಾಲವರೆಗಿನ ನೀರಿನಲ್ಲಿ ಕುಳಿತುಕೊಂಡು ಕೈಗೆ ಬಂದಷ್ಟು ಕಪ್ಪೆ ಚಿಪ್ಪುಗಳನ್ನು ಹೆಕ್ಕಿ ಗೋಣಿಗೆ ತುಂಬಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ.

ವ್ಯಾಪಾರ ಬಲುಜೋರು: ಸ್ಥಳೀಯ ಯುವಕರು ಕಪ್ಪೆಚಿಪ್ಪು ಹೆಕ್ಕಿ ಮಾರಾಟ ಮಾಡುತ್ತಿದ್ದಾರೆ. ಗೋಣಿಯೊಂದಕ್ಕೆ ರೂ.300 ಇದ್ದು ದಿನವೊಂದಕ್ಕೆ ತಲಾ 10 ಕ್ಕೂ ಅಧಿಕ ಗೋಣಿ ಕಪ್ಪೆ ಚಿಪ್ಪು ಹೆಕ್ಕಿ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.ದೋಣಿಗಳ ಮೂಲಕ ಸಾಮೂಹಿಕವಾಗಿ ತೆರಳಿ ಕಪ್ಪೆಚಿಪ್ಪು ತೆಗೆದು ವ್ಯವಹಾರ ನಡೆಸುತ್ತಿದ್ದಾರೆ.

ಕುಂದಾಪುರಕ್ಕೆ, ಮಾರಾಟ: ಕುಂದಾಪುರದಿಂದ ಆಗಮಿಸುವ ಟೆಂಪೋಗಳು ಇಲ್ಲಿನ ಕಪ್ಪೆ ಚಿಪ್ಪುಗಳನ್ನು ಕೊಂಡೊಯ್ದು ಆ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಲ್ಪೆ ಮಾರುಕಟ್ಟೆಗೂ ಶಾಂಭವಿ ಹೊಳೆಯ ಕಪ್ಪೆಚಿಪ್ಪು ರವಾನೆಯಾಗುತ್ತಿದೆ.
ಶಾಂಭವಿ ಹೊಳೆಯಲ್ಲಿ ಏಳು ವರ್ಷಗಳ ಹಿಂದೆ ಧಾರಾಳ ಕಪ್ಪೆಚಿಪ್ಪು ದೊರಕುತ್ತಿತ್ತು. ಅದನ್ನೇ ವ್ಯವಹಾರವನ್ನಾಗಿಸಿದ ನೂರಾರು ಕುಟುಂಬಗಳಿದ್ದವು. ಆದರೆ ಇಲ್ಲಿನ ಜನರಲ್ಲಿ ಕಪ್ಪೆಚಿಪ್ಪು ಹೆಕ್ಕಲು ಕೆಲವೊಂದು ನಿಯಮಗಳು ಜಾರಿಯಲ್ಲಿದ್ದವು. ಮಂಗಳವಾರ ಯಾವುದೇ ಕಾರಣಕ್ಕೂ ಕಪ್ಪೆ ಚಿಪ್ಪು ತೆಗೆಯಬಾರದು. ಮತ್ತು ಹಾರೆ ಅಥವಾ ಇತರ ಕಬ್ಬಿಣದ ಸಾಮಾಗ್ರಿಗಳನ್ನು ಬಳಸಿ ತೆಗೆಯುವಂತಿಲ್ಲ ಎಂಬ ನಿಯಮಗಳು ಚಾಲ್ತಿಯಲ್ಲಿತ್ತು. ಆದರೆ ಹೇರಳ ಕಪ್ಪೆಚಿಪ್ಪು ದೊರಕುತ್ತಿದ್ದ ಸಂದರ್ಭ ಇತರೆಡೆಯಿಂದ ಬಂದವರು ಈ ನಿಯಮಗಳನ್ನು ಮೀರಿ ಕಪ್ಪೆಚಿಪ್ಪು ತೆಗೆದ ಪರಿಣಾಮ ಕೆಲವೇ ದಿನಗಳಲ್ಲಿ ಕಪ್ಪೆಚಿಪ್ಪು ನಾಶವಾಗಿತ್ತು.

ಆ ಬಳಿಕ ಶಾಂಭವಿ ಹೊಳೆಯಲ್ಲಿ ಇದುವರೆಗೆ ಒಂದೇ ಒಂದು ಕಪ್ಪೆಚಿಪ್ಪು ಕಂಡುಬಂದಿಲ್ಲ. ಹಲವಾರು ವರ್ಷಗಳ ಬಳಿಕ ಈ ಬಾರಿ ಶಾಂಭವಿ ಹೊಳೆಯಾದ್ಯಂತ ಕಪ್ಪೆಚಿಪ್ಪು ಬಿದ್ದಿದ್ದು, ಸಹಸ್ರಾರು ಜನರು ಸಮರೋಪಾದಿಯಲ್ಲಿ ಕಪ್ಪೆಚಿಪ್ಪು ತೆಗೆಯುತ್ತಿದ್ದಾರೆ. ಸಾಕಷ್ಟು ದೊಡ್ಡದಾಗದಿದ್ದರೂ ಮಳೆಗಾಲದ ಸಂದರ್ಭ ತೆಗೆಯಲು ಕಷ್ಟಕರವಾಗುವ ಹಿನ್ನೆಲೆಯಲ್ಲಿ ಸಣ್ಣ ಸೈಜ್‍ನ ಕಪ್ಪೆಚಿಪ್ಪುಗಳನ್ನೇ ಎಲ್ಲರೂ ತೆಗೆಯುತ್ತಿದ್ದಾರೆ.

ಶಾಂಭವಿ-ನಂದಿನ ಸಂಗಮ ಸ್ಥಳದಲ್ಲಿ ಅಧಿಕ: ಶಾಂಭವಿ ಮತ್ತು ನಂದಿನಿ ಹೊಳೆಗಳು ಸಂಗಮಿಸಿ ಸಮುದ್ರ ಸೇರುವ ಸ್ಥಳದಲ್ಲಿ ಹೇಋಳವಾಗಿ ಕಪ್ಪೆಚಿಪ್ಪು ದೊರೆಯುತ್ತಿದೆ. ಅಲ್ಲಿಯೇ ಅಧಿಕ ಪುರುಷರು, ಮಹಿಳೆಯರು ಮತ್ತು ಮಕ್ಕಳು ಜಾತಿ ಮತ ಬೇಧವಿಲ್ಲದೆ ಕಪ್ಪೆಚಿಪ್ಪು ತೆಗೆಯುವುದರಲ್ಲಿ ಮಗ್ನರಾಗಿದ್ದಾರೆ.ಪ್ರತಿದಿನ ಗೋಣಿಗೆ ತುಂಬಿಸಿ ಮನೆಗೆ ಕೊಂಡೊಯ್ದು ಇತರರಿಗೂ ಹಂಚಿ ಪದಾರ್ಥ ಮಾಡಿ ತಿನ್ನುತ್ತಿದ್ದಾರೆ.

ಅಪಾಯಕಾರಿ ಪ್ರದೇಶ: ಪ್ರಸ್ತುತ ಕಪ್ಪೆಚಿಪ್ಪು ಹೆಕ್ಕುವ ಸ್ಥಳ ಅತ್ಯಂತ ಅಪಾಯಕಾರಿಯಾದುದು. ಕಳೆದ ಹಲವು ವರ್ಷಗಳಲ್ಲಿ ಹಲವಾರು ಮಾರಣಾಂತಿಗ ದುರ್ಘಟನೆಗಳು ಜಾಗವಿದು. ಆದರೆ ಇಲ್ಲಿಗೆ ಆಗಮಿಸುವ ಅನೇಕರಿಗೆ ಇದರ ಬಗ್ಗೆ ಯಾವುದೇ ಪೂರ್ವ ಮಾಹಿತಿಯಿಲ್ಲ. ಹೊಳೆಯಲ್ಲಿ ನೀರಿನ ಇಳಿತ ಸಂದರ್ಭ ಇಲ್ಲಿ ಮಣಕಾಲಿನವರೆಗೆ ಮಾತ್ರ ನೀರಿರುತ್ತದೆ.ಕೆಲವು ಪ್ರದೇಶಗಳು ಮೈದಾನದಂತೆ ನೀರು ಇಳಿಯುತ್ತದೆ. ಆದರೇ ನೀರಿನ ಏರಿಕೆ ಸಂದರ್ಭ ಈ ಪ್ರದೇಶ ಅತ್ಯಂತ ಅಪಾಯಕಾರಿಯಾದುದು. ಈ ಬಗ್ಗೆ ಎಚ್ಚರಿಸಿದರೂ ಪ್ರಯೋಜನವಿಲ್ಲ.ಸ್ಥಳೀಯರು ಈ ಬಗ್ಗೆ ಎಚ್ಚರಿಸಿದರೆ ಅವರನ್ನೇ ಗದರಿಸಿದ ಘಟನೆ ನಡೆದಿದೆ.

ಶಾಂಭವಿ ಹೊಳೆಯಲ್ಲಿ ಮಳೆಯ ಬಳಿಕ ನೆರೆ ಬಂದರೆ ನೆರೆ ನೀರಿಗೆ ಎಲ್ಲಾ ಕಪ್ಪೆಚಿಪ್ಪುಗಳು ಸಮುದ್ರ ಸೇರುವ ಸಾಧ್ಯತೆ ಇರುವ ಕಾರಣ ಅನೇಕರು ಬೆಳಿಗ್ಗೆಯಿಂದ ಸಂಜೆ ತನಕವೂ ಕಪ್ಪೆಚಿಪ್ಪು ಹೆಕ್ಕುವುದರಲ್ಲಿ ಮಗ್ನರಾಗಿದ್ದಾರೆ.

ಎರಡು ವರ್ಷಗಳ ಹಿಂದೆ ಕೇರಳ ಮತ್ತು ತಮಿಳುನಾಡು ನದಿಗಳಿಂದ ಕಪ್ಪೆಚಿಪ್ಪು ಹೆಕ್ಕಿ ಅಲ್ಲಿಂದ ಮೂಲ್ಕಿಗೆ ತಂದು ಶಾಂಭವಿ ಹೊಳೆಯಲ್ಲಿ ನಾಲ್ಕೈದು ದಿನವಿರಿಸಿ ಬಳಿಕ ಅದನ್ನು ತೆಗೆದು ಗೋಣಿಗೆ ತುಂಬಿಸಿ ಕುಂದಾಪರದಿಂದ ಗೋವಾ ಮುಂಬಯಿ ಕಡೆಗೆ ಕೊಂಡೊಯ್ದು ಮಾರಾಟ ಮಾಡುವ ವ್ಯಾಪಾರ ನಡೆಯುತ್ತಿತ್ತು. ಕೇರಳದ ವ್ಯಾಪಾರಿಯೊಬ್ಬರು ಈ ವ್ಯವಹಾರ ನಡೆಸುತ್ತಿದ್ದರು. ಆ ಸಂದರ್ಭ ಹೊಳೆಯಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಕಪ್ಪಚಿಪ್ಪು ಸಂಗ್ರಹಿಸಿದ ಸಂದರ್ಭ ಅವುಗಳು ಮರಿಯಿಟ್ಟಿರಬಹುದು ಎಂದು ಸ್ಥಳೀಯ ಹಿರಿಯ ಮೀನುಗಾರರ ಅಭಿಮತ.