ಸಮಾಜದ ಪ್ರತಿಭೆಗಳಿಗೆ ಜೇಸಿಐನಿಂದ ಉತ್ತಮ ಅವಕಾಶ-ಅಶೋಕ್ ಚೂಂತಾರು

ಮೂಲ್ಕಿ: ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಉತ್ತಮವಾಗಿ ತರಬೇತಿಗೊಳಿಸುವ ಮೂಲಕ ಜೇಸಿಐ ಸಂಸ್ಥೆಯು ದೇಶದ ಅಭಿವೃದ್ಧಿಗೆ ತನ್ನದೇ ಆದ ಕಾಣಿಕೆಯನ್ನು ನೀಡುತ್ತಿದೆ ಎಂದು ಜೇಸಿಐ ವಲಯ 15ರ ಅಧ್ಯಕ್ಷ ಅಶೋಕ್ ಚೂಂತಾರು ಹೇಳಿದರು.

ಮೂಲ್ಕಿಯ ಶಾಂಭವಿ ಜೇಸಿಐ ವತಿಯಿಂದ ಲಿಂಗಪ್ಪಯ್ಯಕಾಡು ಶ್ರೀ ಚೆನ್ನಮಲ್ಲಿಕಾರ್ಜುನ ಮಠದ ಬಳಿ ನಡೆದ ಜೇಸಿ ಸಂಭ್ರಮ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನತೆ ಜೇಸಿಐ ಸಂಸ್ಥೆಗೆ ಸೇರುವ ಮೂಲಕ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಸಮಾರಂಭದ ಮುಖ್ಯ ಅತಿಥಿ ಜೇಸಿಐ ಪೂರ್ವ ವಲಯಾಧಿಕಾರಿ ಹರೀಶ್ ಕುಮಾರ್ ಮಾತನಾಡಿ, ಮೂಲ್ಕಿ ನಗರ ವ್ಯಾಪ್ತಿಯ ಅತೀ ಹೆಚ್ಚು ಜನಸಂದಣಿಯ ಲಿಂಗಪ್ಪಯ್ಯ ಕಾಡು ಪ್ರದೇಶವು ಕೊಳಚೆ ಪ್ರದೇಶವಾಗಿ ಸರಕಾರದ ಕಡತಗಳಲ್ಲಿ ದಾಖಲೆಗೊಂಡಿದ್ದು, ಅದನ್ನು ತೆಗೆಯುವಂತಾಗಲು ಈ ಪ್ರದೇಶವನ್ನು ಸ್ವಯಂ ಅಭಿವೃದ್ಧಿಗೊಳಿಸಬೇಕು. ಅಥವಾ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಸಿಗಬೇಕಾದ ಅವಶ್ಯಕ ಸೌಲಭ್ಯಗಳನ್ನು ಪಡೆಯಲು ಸಂಘ ಸಂಸ್ಥೆಗಳು ಸಂಘಟಿತವಾಗಿ ಕಾರ್ಯಾಚರಿಸಬೇಕು ಎಂದರು.
ಮೂಲ್ಕಿ ಶಾಂಭವಿ ಜೇಸಿಐ ಅಧ್ಯಕ್ಷ ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.

ಜೇಸಿಐ ವಲಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ಕೊಲ್ನಾಡು ಕೈಗಾರಿಕಾ ಪ್ರಾಂಗಣದ ಕೈಗಾರಿಕೋದ್ಯಮಿ ಅರ್ಜುನ್ ಹಿರೇಮಠ, ಮೂಲ್ಕಿ ನಪಂ ಸದಸ್ಯೆ ಲಕ್ಷ್ಮೀ ಎಮ್, ಲಿಂಗಪ್ಪಯ್ಯಕಾಡು ಆದರ್ಶ ಯುವಕ ಸಂಘದ ಅಧ್ಯಕ್ಷ ಭೀಮಾಶಂಕರ್ ಆರ್.ಕೆ., ಜೇಸಿಐ ವಲಯಾಧಿಕಾರಿ ಹಾಗೂ ಕಾರ್ಯಕ್ರಮ ಸಂಘಟಕ ಮಲ್ಲಿಕಾರ್ಜುನ ಆರ್.ಕೆ., ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅರ್ಚಕ ಬಸವರಾಜ್ ಹಂದರಗಿ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕಲ್ಲಪ್ಪ ಟಿ. ವಂದಿಸಿದರು.
ಬಳಿಕ ಸಾರ್ವಜನಿಕರಿಗಾಗಿ ಕ್ರೀಡಾಕೂಟ ನಡೆಯಿತು.