Mogaveera Beauty Contest in Uchila

ಉಚ್ಚಿಲ ಮೊಗವೀರ ಸೌಂದರ್ಯ ಸ್ಪರ್ಧೆ-2019
ಮಿಥಿಲೇಶ್ ಉಪ್ಪೂರು-ಮಿಸ್ಟರ್ ಮೊಗವೀರ, ಕೃತಿ ಬಂಗೇರ-ಮಿಸ್ ಮೊಗವೀರ, ನಿಮಿತಾ- ಮಿಸೆಸ್ ಮೊಗವೀರ, ತನ್ವಿತಾ-ಪ್ರಿನ್ಸೆಸ್ ಮೊಗವೀರ

ಪಡುಬಿದ್ರಿ: ಇದೇ ಮೊದಲ ಬಾರಿಗೆ ಮೊಗವೀರ ಸಮಾಜದ ಪ್ರತಿಭಾವಂತರಿಗಾಗಿ ಉಚ್ಚಿಲದಲ್ಲಿ ಹಮ್ಮಿಕೊಂಡ ಮೊಗವೀರ ಸೌಂದರ್ಯ ಸ್ಪರ್ಧೆ-2018-19ರ ಗ್ರ್ಯಾಂಡ್ ಫೈನಲ್‍ನಲ್ಲಿ ಮುಂಬಯಿಯ ಮಿಥಿಲೇಶ್ ಉಪ್ಪೂರು ಮಿಸ್ಟರ್ ಮೊಗವೀರ, ಮಲ್ಪೆಯ ಕೃತಿ ಬಂಗೇರ ಮಿಸ್ ಮೊಗವೀರ, ಬೆಂಗಳೂರಿನ ನಿಮಿತಾ ಮಿಸೆಸ್ ಮೊಗವೀರ ಮತ್ತು ಉಡುಪಿಯ ತನ್ವಿತಾ ಪ್ರಿನ್ಸೆಸ್ ಮೊಗವೀರ ಪ್ರಶಸ್ತಿಗೆ ಪಾತ್ರರಾದರು.

ದ.ಕ. ಮೊಗವೀರ ಮಹಾಜನ ಸಂಘ, ಮೊಗವೀರ ವ್ಯವಸ್ಥಾಪನಾ ಮಂಡಳಿ ಮತ್ತು ಮೊಗವೀರ ಹಿತಸಾಧನಾ ವೇದಿಕೆಯ ಸಹಭಾಗಿತ್ವದಲ್ಲಿ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಸ್ಪರ್ಧೆಯ ಅಂತಿಮ ಚರಣದಲ್ಲಿ ಭಾಗವಹಿಸಿದ್ದ 31 ಸ್ಪರ್ಧಾಳುಗಳಲ್ಲಿ ಇವರು ವಿಜೇತರಾದರು.

ಇದಕ್ಕೆ ಮುನ್ನ ಬೆಂಗಳೂರು, ಮುಂಬಯಿ ಮತ್ತು ಉಚ್ಚಿಲಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಉಡುಪಿ, ಕುಂದಾಪುರ, ಮಂಗಳೂರು, ಬೆಂಗಳೂರು, ಬಾಗಲಕೋಟೆ, ಮುಂಬಯಿ, ಶಿವಮೊಗ್ಗ, ತೀರ್ಥಹಳ್ಳಿಗಳಿಂದ 31 ಸ್ಪರ್ಧಾಳುಗಳು ಅಂತಿಮ ಚರಣದಲ್ಲಿ ತಮ್ಮ ಸೌಂದರ್ಯ ಪ್ರತಿಭೆ ಪ್ರದರ್ಶಿಸಿದರು.

ಕೃತಿಕಾ ಬಾಗಲಕೋಟೆ, ಜಯಶ್ರೀ ಕಟಪಾಡಿ ಸೇರಿದಂತೆ ಹಲವರ ಸಹಕಾರದೊಂದಿಗೆ ನಡೆದ ಅದ್ದೂರಿ ಸಮಾರಂಭದಲ್ಲಿ ಅಂತಿಮ ಹಂತದ ಸ್ಪರ್ಧಾಳುಗಳು ಆಕರ್ಷಕ ರ್ಯಾಂಪ್ ವಾಕ್ ಮೂಲಕ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಎಸ್.ಕೋಟ್ಯಾನ್, ಮೊಗವೀರ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಭರತ್ ಎರ್ಮಾಳ್, ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಶಾಸಕ ಯು.ಆರ್.ಸಭಾಪತಿ, ಶಾಮಿಲಿ ಶಂಕರ್, ದಕ ಸಹಕಾರ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ.ಅಮೀನ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿಯ ಪರಿಸರ ನಿರ್ದೇಶಕ ಯತೀಶ್ ಬೈಕಂಪಾಡಿ, ಉದ್ಯಮಿ ರೂಪೇಶ್ ಕಲ್ಮಾಡಿ, ಜಯಶ್ರೀ ಕಟಪಾಡಿ, ಕೃತಿಕಾ ಬಾಗಲಕೋಟೆ, ಕಾರ್ಯಕ್ರಮ ನಿರ್ದೇಶಕ ಗುರುಪ್ರಸಾದ್ ಕೋಟ್ಯಾನ್ ಮತ್ತಿತರ ಗಣ್ಯರು ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಸಾಗರ್ ಬೆಂಗಳೂರು ಕಾರ್ಯಕ್ರಮ ನಿರ್ವಹಿಸಿದರು.

ಫೋಟೋ: ಮೊಗವೀರ ಸೌಂದರ್ಯ ಸ್ಪರ್ಧೆ-2018-19ರ ವಿಜೇತರಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು.