ಮಾ.12 ಕಡೇ ಢಕ್ಕೆಬಲಿ:ಮಾ. 5,8,9,12ರಂದು ಢಕ್ಕೆಬಲಿ ಸೇವೆ

ಪಡುಬಿದ್ರಿ: ಜನವರಿ 18ರಿಂದ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಆರಂಭಗೊಂಡ ದ್ವೈವಾರ್ಷಿಕ ಢಕ್ಕೆಬಲಿ ಸೇವೆಗೆ ಮಾರ್ಚ್ 12 ರಂದು ಸಾರ್ವಜನಿಕ ನೆಲೆಯಲ್ಲಿ ನಡೆಯುವ ಢಕ್ಕೆಬಲಿ ಸೇವೆ ಮತ್ತು ಮಂಡಲ ವಿಸರ್ಜನೆಯೊಂದಿಗೆ ತೆರೆಬೀಳಲಿದೆ.

ಈಗಾಗಲೇ 30 ಢಕ್ಕೆಬಲಿ ಸೇವೆಗಳು ಮತ್ತು ಒಂದು ನಾಗಮಂಡಲ ಸೇವೆ ಯಶಸ್ವಿಯಾಗಿ ಜರುಗಿದ್ದು,ಮಾರ್ಚ್ 5(ಮಂಗಳವಾರ)ರಂದು ಹಗಲು ತಂಬಿಲ ಸೇವೆ ಬರೆಸಿದ(ಜ.22ರಿಂದ ಮಾರ್ಚ್5ರವರೆಗೆ) ಭಕ್ತರ ವತಿಯಿಂದ ಢಕ್ಕೆಬಲಿ ಸೇವೆ,ಮಾರ್ಚ್ 8 ಶುಕ್ರವಾರ,ಮಾರ್ಚ್ 9 ಶನಿವಾರಗಳಂದು ಸೇವಾಕರ್ತರ ವತಿಯಿಂದ ಢಕ್ಕೆಬಲಿ ಸೇವೆ ಹಾಗೂ ಮಾರ್ಚ್ 12 ಮಂಗಳವಾರ ಸಾರ್ವಜನಿಕ ನೆಲೆಯಲ್ಲಿ(ಹಗಲು ತಂಬಿಲ ಸೇವೆ ಬರೆಸಿದ ಭಕ್ತರ ವತಿಯಿಂದ) ಢಕ್ಕೆಬಲಿ ಸೇವೆ ಮತ್ತು ಮಂಡಲ ವಿಸರ್ಜನೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಬ್ರಹ್ಮಸ್ಥಾನ ಆಡಳಿತದ ಶ್ರೀ ವನದುರ್ಗಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ದ ದಿನಗಳಲ್ಲಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಶಿಸ್ತುಬದ್ಧ ಸಾರ್ವಜನಿಕ ಅನ್ನಸಂತರ್ಪಣೆಗಳಲ್ಲಿ ಲಕ್ಷಾಂತರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.ಅಷ್ಟಮಠದ ಯತಿಗಳ ಸಮೇತ ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ವಿವಿಧ ದಿನಗಳಲ್ಲಿ ನಡೆದ ಹೊರೆಕಾಣಿಕೆ ಮೆರವಣಿಗೆ,ಢಕ್ಕೆಬಲಿ ಮತ್ತು ನಾಗಮಂಡಲ ಸೇವೆಗಳಲ್ಲಿ ಭಾಗವಹಿಸಿದ್ದಾರೆ.

ಢಕ್ಕೆಬಲಿ ಸೇವೆಯ ಅಂಗವಾಗಿ ಮಾರ್ಚ್ 9 ಮತ್ತು 12 ರಂದು ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.