ಪಡುಬಿದ್ರಿಯ ಕಟ್ಟದಪ್ಪಕ್ಕೆ ಸಹಸ್ರಾರು ಭಕ್ತರ ಆಗಮನ ನಿರೀಕ್ಷೆ

ಆ.10: ಶ್ರೀ ಮಹಾ ಗಣಪತಿಗೆ ವಿಶೇಷ ಕಟಾಹಾಪೂಪ ಸೇವೆ

— ಎಚ್ಕೆ ಹೆಜ್ಮಾಡಿ, ಪಡುಬಿದ್ರಿ

ಪಡುಬಿದ್ರಿ ಎರಡು ಕಾರಣಿಕ ಕ್ಷೇತ್ರಗಳಲ್ಲಿ ಆಷಾಢ ಮಾಸದಲ್ಲಿ ವಿಶೇಷ ಸೇವೆ ನಡೆಯುತ್ತದೆ. ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಅಜಕಾಯಿ ಸೇವೆ ಈಗಾಗಲೇ ನಡೆದಿದೆ. ಅಗಸ್ಟ್ 10 ಶನಿವಾರ ಸಂಜೆ ಶ್ರೀ ಮಹಾಗಣಪತಿಗೆ ಸಾರ್ವಜನಿಕ ಕಟಾಹಾಪೂಪ(ಕಟ್ಟದಪ್ಪ) ಸೇವೆ ಸಂಪನ್ನಗೊಳ್ಳಲಿದೆ.

ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ. ಇಲ್ಲಿ ಮಹೇಶ್ವರನು ಪ್ರಧಾನ ದೇವರಾಗಿದ್ದು ಉಪಸ್ಥಾನ ಅಪತಿಯಾಗಿ ವಿನಾಯಕನಿರುವನು. ಪಡುಬಿದ್ರಿ ಗಣಪತಿಯು `ಕಟ್ಟದಪ್ಪ'(ಕಟಾಹಾಪೂಪ) ಪ್ರಿಯನಾಗಿದ್ದು ಸಾರ್ವಜನಿಕ ನೆಲೆಯಲ್ಲಿ ನಡೆಯುವ ಕಟ್ಟದಪ್ಪ ಸೇವೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸುವರು.

ರೈತ ರ ಕಟ್ಟ ಉಳಿಸಲು ಸೇವೆ: ಪುರಾತನ ಕಾಲದಲ್ಲಿ ಮಳೆಗಾಲದ ಸಂದರ್ಭ ಪಡುಬಿದ್ರಿ ಕಾಮಿನಿ ಹೊಳೆಯ ನೀರನ್ನು ಕಟ್ಟ(ಒಡ್ಡು) ಕಟ್ಟಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದರು. ಅಕ ಮಳೆಯ ಸಂದರ್ಭ ರೈತರು ಕಟ್ಟದ ಕಟ್ಟ ಕುಸಿಯುತ್ತಿತ್ತು. ಇದನ್ನು ಉಳಿಸಲು ರೈತಾಪಿ ಜನರು ಸಾಮೂಹಿಕ ನೆಲೆಯಲ್ಲಿ ಗ್ರಾಮ ದೇವಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಕಟ್ಟದಪ್ಪ ಸೇವೆ ಸಲ್ಲಿಸಿದ ಬಳಿಕ ಕಟ್ಟ ನಿಂತಿತು ಎಂಬುದು ಪ್ರಚಲಿತ ಮಾತು. ಅಂದಿನಿಂದ ವರ್ಷಂಪ್ರತಿ ಆಷಾಢ ಮಾಸದಲ್ಲಿ ರೈತಾಪಿ ಜನರು ಕಟ್ಟದಪ್ಪ ಸೇವೆ ಸಲ್ಲಿಸುತ್ತಾ ಬಂದಿದ್ದು, ಇಂದು ಸಾಮೂಹಿಕ ನೆಲೆಯಲ್ಲಿ ಸಹಸ್ರಾರು ಭಕ್ತರು ಸೇವೆ ಸಲ್ಲಿಸುವ ಮೂಲಕ ಸೇವೆಯು ಜಗತ್‍ಪ್ರಸಿದ್ಧಿ ಪಡೆದಿದೆ. ಕೃಷಿ ಕಾಯಕಕ್ಕಾಗಿ ಕಟ್ಟಗಳನ್ನು ಕಟ್ಟಿದ ಬಳಿಕ ಒಡ್ಡುಗಳ ರಕ್ಷಣೆ ಮತ್ತು ಹೇರಳ ನೀರಿನಾಶ್ರಯಕ್ಕಾಗಿ ಗ್ರಾಮ ದೇವರಿಗೆ ಸಮರ್ಪಣೆಯಾಗುವ ಅಪ್ಪ ಸೇವೆಯೇ ಕಟ್ಟದಪ್ಪ ಸೇವೆ ಎಂದೂ ಪ್ರಚಲಿದಲ್ಲಿದೆ.

ಕಟಾಹದಲ್ಲಿನ ಅಪ್ಪ-ಕಟಾಹಾಪೂಪ: ಈ ಕಟ್ಟದಪ್ಪ ಸೇವೆಯ ದಿನ ರಾತ್ರಿ ಪೂಜೆಯ ಸಂ:ದರ್ಭ ಊರ ಪ್ರಮುಖರ ಸಹಿತ ಕೃಷಿಕರೆಲ್ಲರೂ ದೇವಳದಲ್ಲಿ ಸೇರುತ್ತಾರೆ. ಸಾಮೂಹಿಕವಾಗಿ ಮಹಾಲಿಂಗೇಶ್ವರ ಹಾಗೂ ಪ್ರಧಾನವಾಗಿ ಮಹಾಗಣಪತಿಗೆ ಧನ ಧಾನ್ಯ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶ್ರೀ ದೇವರ ಸಮರ್ಪಣೆಗಾಗಿ ಬೆಳಿಗ್ಗಿನಿಂದಲೇ ಬಾಣಸಿಗರು ದೊಡ್ಡ, ದೊಡ್ಡ ಬಾಣಲೆಯಲ್ಲಿ ಕಾಯಿಸಿ ತಯಾರಿಸಿ ದೊಡ್ಡ ದೊಡ್ಡ ಕಟಾಹಗಳಲ್ಲಿ ಸಮರ್ಪಣೆಗಾಗಿ ಶ್ರೀ ದೇವರ ಮುಂದಿಡುವ ಅಪ್ಪಗಳನ್ನು `ಕಟಾಹಾಪೂಪ’ವೆಂದೂ ಕರೆಯಲಾಗುತ್ತದೆ.


ಕಟ್ಟದಪ್ಪ ಹೀಗೆ ತಯಾರಾಗುತ್ತದೆ: ಸಾರ್ವಜನಿಕ ಅಪ್ಪ ಸೇವೆಯಂದು ಈ ಬಾರಿ 80ಮುಡಿ ಅಕ್ಕಿಯ ಅಪ್ಪವು ಗಣಪತಿಗೆ ಸಮರ್ಪಿತವಾಗಲಿದೆ. ಈ ಅಕ್ಕಿಗೆ 180ಕೆಜಿ ಅರಳು, ಸುಮಾರು 700ಕೆಜಿಗಳಷ್ಟು ಬಾಳೆಹಣ್ಣು, ಸುಮಾರು 2000 ತೆಂಗಿನಕಾಯಿ, 10ಕೆಜಿ ಏಲಕ್ಕಿ, 2.5ಟನ್ ಬೆಲ್ಲದೊಂದಿಗೆ ಮಿಶ್ರಣವನ್ನು ತಯಾರಿಸಿಕೊಂಡು ಸುಮಾರು 50 ಡಬ್ಬಿ ಎಣ್ಣೆಯಿಂದ ಕಬ್ಬಿಣದ ಬಾಣಲೆಗಳಲ್ಲಿ ಅಪ್ಪಗಳನ್ನು ಬೆಳಿಗ್ಗಿಂದ ಸಾಯಂಕಾಲದ ಆರೇಳು ಗಂಟೆಯವರೆಗೂ ಕಾಯಿಸಿ ಸುಮಾರು 1.50ಲಕ್ಷಗಳಷ್ಟು ಅಪ್ಪಗಳನ್ನು ತಯಾರಿಸಲಾಗುತ್ತದೆ.

ದೇಶ, ವಿದೇಶಗಳಲ್ಲಿ ಪ್ರಸಿದ್ಧ
ಪಡುಬಿದ್ರಿ ಗಣಪತಿಯನ್ನು ಮನಸಾರೆ ಆರಾಸುವ ಉದ್ಯಮಪತಿಗಳಿಂದ ತೊಡಗಿ ರಾಜ್ಯ, ದೇಶ ವಿದೇಶಗಳಿಂದಲೂ ಈ ವಿಶೇಷ ಅಪ್ಪ ಸೇವೆಗಾಗಿ ಬೇಡಿಕೆಗಳಿರುತ್ತವೆ. ದಿನನಿತ್ಯದ ಅಪ್ಪ ಸೇವೆಯೂ ಇಲ್ಲಿ ನಡೆಯುತ್ತಲಿದ್ದರೂ ವರ್ಷಕೊಮ್ಮೆ ನಡೆವ ಈ ಕಟ್ಟದಪ್ಪ ಅಥವಾ ಕಟಾಹಾಪೂಪ ಸೇವೆಗೆ ವಿಶೇಷ ಮಹತ್ವವಿದೆ. ಸುಮಾರು 10,000 ಸೇವಾಕರ್ತರು ಈ ಸೇವೆಗಾಗಿ ಪ್ರತೀ ಬಾರಿಯೂ ಕಾದಿರುತ್ತಾರೆ.

ಪೊಟ್ಟಪ್ಪ ಸೇವೆ: ಬ್ರಿಟಿಷ್ ದೊರೆಯೊಬ್ಬ ಕುದುರೆಯೇರಿ ದೇವಳದ ಮುಂಭಾಗದಲ್ಲಿ ಬಂದ ಸಂದರ್ಭ ದೇವರಿಗೆ ಅಗೌರವ ತೋರಿದ. ಈ ಸಮಯ ಆತನ ಕುದುರೆ ಮುಂದುವರಿಯದೆ ಅಲ್ಲೇ ನಿಂತಿತು. ಈ ಬಗ್ಗೆ ಸ್ಥಳೀಯ ಹಿರಿಯರಲ್ಲಿ ವಿಚಾರಿಸಿದಾಗ ಶ್ರೀ ಗಣಪತಿಗೆ ಪೊಟ್ಟಪ್ಪ ಸೇವೆ ಸಲ್ಲಿಸಿದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದ ಮೇರೆಗೆ ಆತ ಪೊಟ್ಟಪ್ಪ ಸೇವೆ ಸಲ್ಲಿಸಿ ಮುಂದುವರಿದ ಎಂಬ ಉಲ್ಲೇಖವಿದೆ. ಬಳಿಕ ಈ ಪೊಟ್ಟಪ್ಪ ಸೇವೆಯು ನಿರಂತರ ನಡೆಯಲಾರಂಭಿಸಿತು. ಈಗ ಯಾವುದೇ ದಿನ ಪೊಟ್ಟಪ್ಪ ಸೇವೆ ಸಲ್ಲಿಸಬಹುದಾಗಿದೆ. ಬರೀ ತೆಂಗಿನಕಾಯಿ, ಅಕ್ಕಿ, ಉಪ್ಪುಗಳ ಮಿಶ್ರಣದಿಂದ ತಯಾರಿಸುವ `ಪೆÇಟ್ಟಪ್ಪ’ ತಯಾರಿಸಲಾಗುತ್ತದೆ. ಈ ಸೇವೆಯಲ್ಲದೇ ಪಡುಬಿದ್ರಿ ಗಣಪತಿಗೆ ಪಂಚಕಜ್ಜಾಯ ಸೇವೆ ಅಚ್ಚುಮೆಚ್ಚು.

ಫೋಟೋ: ಶ್ರೀ ಮಹಾಲಿಂಗೇಶ್ವರ,1ಎ-ಶ್ರೀ ಮಹಾಗಣಪತಿ, 1ಬಿ-ಕಟ್ಟದಪ್ಪ ರಾಶಿಯನ್ನು ಭಕ್ತರಿಗೆ ಹಂಚಲು ಸಜ್ಜಾಗಿರುವುದು, 1ಸಿ- ಕಟ್ಟದಪ್ಪ ತಯಾರಿಯಲ್ಲಿ ಬಾಣಸಿಗರು.