ಬಂಟ ಸ್ವರ್ಣ ಮುಖವಾಡ, ಕಡ್ಸಲೆ ಪರಿಕರಗಳ ಭವ್ಯ ಮೆರವಣಿಗೆ

ಪಡುಬಿದ್ರಿ: ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಸಮರ್ಪಿತವಾಗಲಿರುವ ಸುಮಾರು 50 ಲಕ್ಷ ರೂ. ಗಳ ಸ್ವರ್ಣ ಮುಖ, ಕಡ್ಸಲೆ ಹಾಗೂ ಪರಿಕರಗಳ ವೈಭವಯುತ, ಭವ್ಯ ಮೆರವಣಿಗೆಯು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನಕ್ಕೆ ಜ. 23ರಂದು ಸಾಗಿ ಬಂದಿತು.

ಭಜನೆ, ಚೆಂಡೆ ವಾದನ, ಜಾನಪದ ವಾದ್ಯಗಳು, ಕಹಳೆ, ವಾದ್ಯಗಳಿಂದೊಡಗೂಡಿದ ಈ ಮೆರವಣಿಗೆಯಲ್ಲಿ ಮುಖವಾಡವನ್ನು ಸುಂದರ ಟ್ಯಾಬ್ಲೋದಲ್ಲಿರಿಸಿ ದೈವಸ್ಥಾನಕ್ಕೆ ತಂದಿರಿಸಲಾಯಿತು. ಈ ಮುಖವಾಡವನ್ನು ಜ. 25ರಂದು ಬೆಳಿಗ್ಗೆ 8ಗಂಟೆಗೆ ಬಂಟ ದೈವಕ್ಕೆ ಸಮರ್ಪಿಸಲಾಗುವುದು.

ಪಡುಬಿದ್ರಿಯ ಶ್ರೀ ದೇವಸ್ಥಾನದಲ್ಲಿ ಅರ್ಚಕ ವೇ.ಮೂ. ವೈ. ಗುರುರಾಜ ಭಟ್ಟರು ಮಹಾಲಿಂಗೇಶ್ವರ ಮಹಾಗಣಪತಿ ಸನ್ನಿಧಾನದಲ್ಲಿ ಭಕ್ತಾದಿಗಳ ಪರವಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು. ಶ್ರೀ ದೈವಸ್ಥಾನಕ್ಕೆ ಆಗಮಿಸಿದಾಗ ಕೃಷ್ಣಾಪುರ ಶಾಖಾ ಮಠದ ವೇ.ಮೂ. ಶ್ರೀನಿವಾಸ ಭಟ್ಟರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆಯನ್ನು ಸಲ್ಲಿಸಿ ಸ್ವರ್ಣ ಬಿಂಬವನ್ನು ಬರಮಾಡಿಕೊಂಡರು.

ಈ ಸಂದರ್ಭ ಕುಡುಪು ವೇ.ಮೂ. ನರಸಿಂಹ ತಂತ್ರಿ, ಕೊರ್ನಾಯ ಪದ್ಮನಾಭ ರಾವ್, ಕಾರ್‍ದಾಂಡ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುರುಷೋತ್ತಮ ಭಟ್, ಸ್ವರ್ಣ ಮುಖ ಸಮರ್ಪಣಾ ಮುಂಬಯಿ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ, ಪಡುಬಿದ್ರಿ ಸಮಿತಿಯ ಅಧ್ಯಕ್ಷ ಸಂತೋಷ್‍ಕುಮಾರ್ ಶೆಟ್ಟಿ, ಗುತ್ತಿನಾರ್ ವಿಶುಕುಮಾರ್ ಶೆಟ್ಟಿವಾಲ್, ರಮೇಶ್ ಶೆಟ್ಟಿ, ಎರ್ಮಾಳ ಉದಯ ಕೆ. ಶೆಟ್ಟಿ, ಭಾಸ್ಕರ ಶೆಟ್ಟಿ ಗುಂಡ್ಲಾಡಿ, ಹೇಮಚಂದ್ರ, ಸದಾಶಿವ ಪಡುಬಿದ್ರಿ, ಪಿ. ಕೆ. ಸದಾನಂದ, ಭಾಸ್ಕರ್ ಕೆ., ಹರೀಶ್ ಪಿ. ಆರ್., ಕಲ್ಲಟ್ಟೆಗುತ್ತು ರಾಮಕೃಷ್ಯ ಶೆಟ್ಟಿ, ದೈವಸ್ಥಾನದ ಅರ್ಚಕ ರಮೇಶ್ ಪೂಜಾರಿ, ಪಾತ್ರಿ ಗಣೇಶ್ ಪೂಜಾರಿ ಮತ್ತಿತರರಿದ್ದರು.