JCI Padubidri celebrates Independence Day-2018

Padubidri, August 15th, 2018: JCI Padubidri celebrated Independence day by organizing various competitions for school children, felicitation of meritorious students and distributing scholarships.

Full news in Kannada:

ಸೃಜನಶೀಲ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ-ವೈ.ಸುಧೀರ್ ಕುಮಾರ್

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಸ್ಪರ್ಧೆಗಳ ಅವಕಾಶವಿದ್ದು,ಸೃಜನಶೀಲ ವಿದ್ಯಾರ್ಥಿಗಳು ಅವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಉನ್ನತರಾಗಿ ಮೂಡಿಬರಬೇಕು ಎಂದು ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಹೇಳಿದರು.

ಜೇಸಿಐ ಪಡುಬಿದ್ರಿ ವತಿಯಿಂದ ಪಡುಬಿದ್ರಿ ನಾರಾಯಣ ಗುರು ಸಭಾಗೃಹದಲ್ಲಿ ಆಸುಪಾಸಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ ಪ್ರತಿಭಾ ಸ್ಪರ್ಧೆ,ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜೇಸಿಐ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯಾಧಿಕಾರಿ ಅಶೋಕ್ ಜೆ. ಮುಖ್ಯ ಅತಿಥಿಯಾಗಿ ಮಾತನಾಡಿ,ವಲಯದಲ್ಲಿ ಹಿರಿಯ ಜೇಸೀ ಸಂಸ್ಥೆ ಈ ಬಾರಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಮಾದರಿ ಸಂಸ್ಥೆಯಾಗಿದೆ ಎಂದರು.

ಬಿಜೆಪಿ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾತನಾಡಿ,ಯುವ ಜನತೆಗೆ ಅವಕಾಶಗಳನ್ನು ಮಾಡಿಕೊಡುವ ಮೂಲಕ ಜೇಸಿಐ ಸಂಸ್ಥೆ ಮಾದರಿ ಸಂಸ್ಥೆಯಾಗಿದೆ ಎಂದರು.

 

ಸನ್ಮಾನ: ಇದೇ ವೇಳೆ ಸಮಾಜ ಸೇವಕ ಸಾಧು ಪೂಜಾರಿ,ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡೆಗಳಿಗೆ ಆಯ್ಕೆಯಾದ ಸ್ಥಳೀಯ ಪ್ರತಿಭೆಗಳಾದ ಶ್ರಾವ್ಯ ಆರ್.ಅಂಚನ್,ಉನ್ನತಿ ಎಚ್.ಪುತ್ರನ್,ಶ್ರಾವ್ಯ ಗುರುರಾಜ್ ಪೂಜಾರಿ,ಅಂಕಿತ್ ವಿ.ಪೂಜಾರಿ ಮತ್ತು ಯತೀಶ್ ವಿ.ಭಂಡಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ: ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಮುದರಂಗಡಿ ಸೈಂಟ್ ಫ್ರಾನ್ಸಿಸ್ ಶಾಲೆ,ಉಚ್ಚಿಲ ಮಹಾಲಕ್ಷ್ಮೀ ಶಾಲೆ ಮತ್ತು ಪಡುಬಿದ್ರಿ ಸಾಗರ್ ವಿದ್ಯಾ ಮಂದಿರ್ ಶಾಲೆಗಳಿಗೆ ಪಾರಿತೋಷಕ ನೀಡಲಾಯಿತು.ಅತೀ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದ ಮುದರಂಗಡಿ ಸೈಂಟ್ ಫ್ರಾನ್ಸಿಸ್ ಶಾಲೆಗೆ ಜೇಸಿಐ ಪಡುಬಿದ್ರಿಯ ಸ್ಥಾಪಕಾಧ್ಯಕ್ಷ ದಿ.ವಿಜಯಕುಮಾರ್ ಶೆಟ್ಟಿ ಸ್ಮರಣಾರ್ಥ ನೀಡಲಾಗುವ ಪರ್ಯಾಯ ಫಲಕವನ್ನು ಅವರ ಸಹೋದರ ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ ವಿತರಿಸಿದರು.

ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರತಿಭಾ ಸ್ಪರ್ಧೆ: ಆಸುಪಾಸಿನ ಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ,ಆಶು ಭಾಷಣ,ಸಮೂಹ ನೃತ್ಯ,ದೇಶ ಭಕ್ತಿ ಗೀತೆ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಚಲನಚಿತ್ರ ಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು,ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜೇಸಿಐ ಪಡುಬಿದ್ರಿ ಅಧ್ಯಕ್ಷ ಮಕರಂದ್ ಎಸ್.ಅಧ್ಯಕ್ಷತೆ ವಹಿಸಿದ್ದು,ಸ್ವಾಗತಿಸಿದರು.

ಜೇಸೀರೆಟ್ ಅಧ್ಯಕ್ಷೆ ಹರ್ಷಿತಾ ಮಕರಂದ್,ನಿಕಟ ಪೂರ್ವಾಧ್ಯಕ್ಷ ಪ್ರಸನ್ನ ಕುಮಾರ್,ಕಾರ್ಯಕ್ರಮ ನಿರ್ದೇಶಕಿ ಪ್ರೀತಿ ಸುವರ್ಣ ವೇದಿಕೆಯಲ್ಲಿದ್ದರು.
ಜೇಸಿಐ ಪೂರ್ವಾಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮ ನಿರ್ದೇಶಕ ಪ್ರದೀಪ್ ಆಚಾರ್ಯ ಜೇಸೀವಾಣಿ ಉದ್ಘೋಷಿಸಿದರು.