ಜೇಸಿಐ ಪಡುಬಿದ್ರಿ ವತಿಯಿಂದ ಸಂಸ್ಥಾಪಕರ ದಿನಾಚರಣೆ

ಪಡುಬಿದ್ರಿ: ಸುಮಾರು 44 ವರ್ಷಗಳ ಹಿಂದೆ ಸ್ಥಳೀಯ ಯುವಕರನ್ನು ಒಗ್ಗೂಡಿಸಿ ವ್ಯಕ್ತಿತ್ವ ವಿಕಸನಗೊಳ್ಳುವ ಉದ್ದೇಶದೊಂದಿಗೆ ಪಡುಬಿದ್ರಿಯ ಉದ್ಯಮಿ ದಿ.ವಿಜಯಕುಮಾರ್ ಶೆಟ್ಟಿ ಪ್ರಾರಂಭಿಸಿದ ಜೇಸಿಐ ಪಡುಬಿದ್ರಿ ಇಂದು ನೂರಾರು ಯುವ ನಾಯಕರನ್ನು ಸಮಾಜಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜೇಸಿಐ ಪಡುಬಿದ್ರಿಯು ಸಂಸ್ಥೆಯನ್ನು ಸ್ಥಾಪಿಸಿದ ದಿ.ವಿಜಯಕುಮಾರ್ ಶೆಟ್ಟಿಯವರ ಸವಿನೆನಪಿಗಾಗಿ ಭಾನುವಾರ ರಾತ್ರಿ ಪಡುಬಿದ್ರಿ ಹೋಟೆಲ್ ಪಲ್ಲವಿಯ ಸಭಾಂಗಣದಲ್ಲಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನಡೆಸಿತು.
ಕಾರ್ಕಳ ಉದ್ಯಮಿ ಕೆ.ಪಿ.ಶೆಣೈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದಿ.ವಿಜಯಕುಮಾರ್ ಶೆಟ್ಟಿಯವರ ದೂರಾಲೋಚನೆಯಿಂದ ಜೇಸಿಐ ಪಡುಬಿದ್ರಿ ಇಂದು ವಲಯದ ಅತ್ಯಂತ ಬಲಿಷ್ಠ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇದರ ಜತೆಗೆ ಸಮಾಜಕ್ಕೆ ನೂರಾರು ನಾಯಕರನ್ನು ನೀಡಿದ ಹೆಮ್ಮೆ ಪಡೆದಿದೆ. ನಮ್ಮ ಮೂಲ ಯಾವುದು ಎಂದು ತಿಳಿದರೆ ಭವಿಷ್ಯತ್ತಿಗೆ ಒಳ್ಳೆಯದು. ಜೇಸಿಐ ಪಡುಬಿದ್ರಿಯ ಕಾರ್ಯಕ್ರಮ ಇತರ ಸಂಸ್ಥೆಗಳಿಗೆ ಮಾದರಿ ಎಂದರು.

ಸಂಸ್ಥಾಪಕ ಸದಸ್ಯರಿಗೆ ಗೌರವ: ಇದೇ ಸಂದರ್ಭ ಜೇಸಿಐ ಪಡುಬಿದ್ರಿಯ ಸ್ಥಾಪಕ ಸದಸ್ಯರಾದ ಮಾಧವ ಸುವರ್ಣ, ವೈ.ದಾಮೋದರ್, ಪಿ.ಸದಾಶಿವ ಆಚಾರ್, ಡಾ. ಎನ್.ಟಿ.ಅಂಚನ್, ಮತ್ತು ಪಿ.ಕೆ.ಜಯರಾಮ್ ಪರವಾಗಿ ಅವರ ಪತ್ನಿ ನಳಿನಿ ಜಯರಾಮ್‍ರವರನ್ನು ಗೌರವಿಸಲಾಯಿತು.

ಬಹುಮಾನ ವಿತರಣೆ: ಜೇಸಿಐ ಕುಟುಂಬೋತ್ಸವದ ಅಂಗವಾಗಿ ಸದಸ್ಯರಿಗೆ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನಿಕಟ ಪೂರ್ವಾಧ್ಯಕ್ಷ ಮಕರಂದ್ ಸಾಲ್ಯಾನ್, ಜೇಸಿರೆಟ್ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ, ಕೋಶಾಧಿಕಾರಿ ಪ್ರೀತಿ ಸುವರ್ಣ ವೇದಿಕೆಯಲ್ಲಿದ್ದರು.

ಡಾ.ಮನೋಜ್‍ಕುಮಾರ್ ಶೆಟ್ಟಿ ಮತ್ತು ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.