Hindu religion has survived because of daiva devasthanas – Kemaru Shree

ಬಡ ದೈವ-ದೇವಸ್ಥಾನ,ಬಡ ಜನರಿಂದ ಹಿಂದೂ ಧರ್ಮ ಉಳಿದಿದೆ: ಕೇಮಾರು ಶ್ರೀ

ಇಂದು ದೇಶದಲ್ಲಿ ಹಿಂದೂ ಸಂಸ್ಕøತಿ,ಹಿಂದೂ ಧರ್ಮ ಉಳಿದಿದ್ದರೆ ಅದಕ್ಕೆ ಬಡಜನರು ಮತ್ತು ಬಡವರ ದೈವ ದೇವಸ್ಥಾನಗಳೇ ಕಾರಣ ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಹೆಜಮಾಡಿ ಮೊಗವೀರ ಮಹಾಸಭಾ ಆಡಳಿತದ ಶ್ರೀ ಬಬ್ಬರ್ಯ ದೈವಸ್ಥಾನದಲ್ಲಿ ಮಂಗಳವಾರ ಶ್ರೀ ಬಬ್ಬರ್ಯ ದೈವದ ಬ್ರಹ್ಮಕಲಶಾಭಿಷೇಕ ಸಮಾರಂಭದ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚಿಸಿದರು.
ದೈವ ದೇವಸ್ಥಾನಗಳು ಭಕ್ತಿ ಭಜನೆಗೆ ಸೀಮಿತವಾಗದೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಿ ಕಾರ್ಯಾಚರಿಸಬೇಕು.ಕೇವಲ ಭಕ್ತಿಯಿಂದ ಯಾವುದೂ ಸಾಧ್ಯವಿಲ್ಲ.ಜ್ಞಾನಯುಕ್ತ ಭಕ್ತಿಯ ಅಗತ್ಯವಿದೆ.ಅದಕ್ಕಾಗಿ ಎಲ್ಲರಿಗೂ ಶಾಸ್ತ್ರಾಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು.ಈ ಮೂಲಕ ಹಿಂದೂ ಧರ್ಮಜಾಗೃತಿಗೆ ಕಾರಣೀಭೂತರಾಗಬೇಕು ಎಂದವರು ಹೇಳಿದರು.
ಸಮಾರಂಭ ಉದ್ಘಾಟಿಸಿದ ದಕ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಎಚ್.ಗಂಗಾಧರ ಕರ್ಕೇರ ಮಾತನಾಡಿ,ಸಹಕಾರ ನೀತಿ ಎಂಬುದು ಮೊಗವೀರರ ಆಸ್ತಿ.ಕೂಡುಕಟ್ಟು,ಪರಂಪರೆಗಳಿಂದ ಅವಿದ್ಯಾವಂತರಾಗಿದ್ದರೂ ನಮ್ಮ ಹಿರಿಯರು ಅದನ್ನು ಸಂಪಾದಿಸಿದ್ದರು.ಅದನ್ನು ಉಳಿಸಿ ಬೆಳೆಸಲು ಮೊಗವೀರ ಯುವ ಸಮಾಜ ಕಾರ್ಯಪ್ರವರ್ತರಾಗಬೇಕು ಎಂದರು.
ಸನ್ಮಾನ:ಇದೇ ಸಂದರ್ಭ ಹಿರಿಯರಾದ ದೀನನಾಥ ಸಾಲ್ಯಾನ್,ದಾನಿ ಹಾಗೂ ಉದ್ಯಮಿ ದಯಾನಂದ ಹೆಜ್ಮಾಡಿಯವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.
ಶ್ರೀ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗುರಿಕಾರ,ಹೆಜಮಾಡಿ ಮೊಗವೀರ ಮಹಾಸಭಾ ಅಧ್ಯಕ್ಷ ಜಗನ್ನಾಥ ಕುಂದರ್,ಮುಂಬೈ ಸಮಿತಿಯ ಅಧ್ಯಕ್ಷ ಕರುಣಾಕರ ಹೆಜ್ಮಾಡಿ,ಮಹಿಳಾ ಸಭಾ ಅಧ್ಯಕ್ಷೆ ಪಾರ್ವತಿ ಪಿ.ಕರ್ಕೇರ,ಗುರಿಕಾರ ರಾಘವ ಗುರಿಕಾರ,ಹೆಜಮಾಡಿ ರಂಪಣಿ ಫಂಡ್ ಆಡಳಿತ ಪಾಲುದಾರರಾದ ನಾರಾಯಣ ಕೆ.ಮೆಂಡನ್,ಅರ್ಚಕರಾದ ವೇದಮೂರ್ತಿ ರಂಗಣ್ಣ ಭಟ್,ವಾಸು ಕೆ.ಕೋಟ್ಯಾನ್ ಕಣ್ಣಂಗಾರು ಮುಖ್ಯ ಅತಿಥಿಗಳಾಗಿದ್ದರು.
ಪುರುಷೋತ್ತಮ ಗುರಿಕಾರ ಪ್ರಸ್ತಾವಿಸಿದರು.ಕೀರ್ತನ್ ಎಸ್.ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಇದಕ್ಕೆ ಮುನ್ನ ಕೇಮಾರು ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ಬಬ್ಬರ್ಯ ದೈವದ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಎಡಪದವು ಬ್ರಹ್ಮಶ್ರೀ ರಾಧಕೃಷ್ಣ ತಂತ್ರಿ ಹಾಗೂ ಹೆಜಮಾಡಿ ರಂಗಣ್ಣ ಭಟ್ ನೇತೃತ್ವದಲ್ಲಿ ನಡೆಯಿತು.