ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಯಥಾಸ್ಥಿತಿ ಮುಂದುವರಿಕೆಗೆ ನಿರ್ಧಾರ

ಪಡುಬಿದಿ: ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ್ ಟೋಲ್ ಪ್ಲಾಝಾದಲ್ಲಿ ಏಕಾಏಕಿ ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ವಾಹನ ಸವಾರರಿಗೆ ಟೋಲ್ ಸಂಗ್ರಹಕ್ಕೆ ನಿರ್ಧರಿಸುವುದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಭಾನುವಾರ ಪಡುಬಿದ್ರಿ ಪೋಲೀಸ್ ಠಾಣೆಯಲ್ಲಿ ಕರೆದ ಸಮಾಲೋಚನಾ ಸಭೆಯಲ್ಲಿ ಟೋಲ್ ಸಂಗ್ರಹ ನಿಲ್ಲಿಸಿ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಯಿತು.

ಠಾಣಾಧಿಕಾರಿ ಸಬ್ಬಣ್ಣ, ಪ್ರೊಬೆಷನರಿ ಎಸ್‍ಐ ಉದಯರವಿ ಮತ್ತು ಹೆಜಮಾಡಿ ನವಯುಗ್ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಸಾರ್ವಜನಿಕರೊಂದಿಗೆ ಕರೆದ ಸಭೆಯಲ್ಲಿ ಟೋಲ್ ಸಂಗ್ರಹಕ್ಕೆ ತೀವ್ರ ವಿರೋಧವಾದ ಹಿನ್ನೆಲೆಯಲ್ಲಿ ಈ ಹೀಂದಿನಂತೆ ಪಡುಬಿದ್ರಿ ಮತ್ತು ಹೆಜಮಾಡಿ ಗ್ರಾಪಂ ವ್ಯಾಪ್ತಿಯ ಎಲ್ಲಾ ವಾಹನ ಸವಾರರಿಗೆ ಮತ್ತು ಮೂಲ್ಕಿ ಟ್ಯಾಕ್ಸಿ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲು ನಿರ್ಧರಿಸಲಾಯಿತು.

ಸುಮಾರು 6 ತಿಂಗಳ ಹಿಂದೆ ಸಾರ್ವಜನಿಕ ಪ್ರತಿಭಟನೆಗೆ ಮಣಿದು ಪಡುಬಿದ್ರಿ ವ್ಯಾಪ್ತಿಯ ವಾಹನ ಸವಾರರಿಗೆ ಟೋಲ್ ವಿನಾಯಿತಿ ನೀಡಲಾಗುತ್ತಿತ್ತು.ಅದಕ್ಕೆ ಮುನ್ನ ಟೋಲ್ ಆರಂಭದಿಂದಲೂ ಸ್ಥಳೀಯ ಹೆಜಮಾಡಿ ವಾಹನ ಸವಾರರಿಗೆ ಟೋಲ್ ವಿನಾಯಿತಿ ನೀಡಲಾಗುತ್ತಿತ್ತು. ಟೋಲ್ ಆಡಳಿತ ಹೇಳುವಂತೆ 6 ತಿಂಗಳಿಂದ ಪಡುಬಿದ್ರಿ ಭಾಗದ ವಾಹನಗಳು ಸುಮಾರು 600 ಟ್ರಿಪ್‍ಗಳನ್ನು ನಡೆಸುತ್ತಿದ್ದು, ವಾರದ ಹಿಂದೆ ನಿತ್ಯ 900 ವಾಹನಗಳಿಗೆ ಏರಿಕೆಯಾಗಿತ್ತು.ಈ ಹಿನ್ನೆಲೆಯಲ್ಲಿ ವಾರದ ಹಿಂದೆ ಟೋಲ್ ಆಡಳಿತ ಪೂರ್ವಮಾಹಿತಿ ನೀಡದೆ ಪಡುಬಿದ್ರಿ ವಾಹನಗಳಿಂದ ಟೋಲ್ ಸಂಗ್ರಹಕ್ಕೆ ನಿರ್ಧರಿಸಿತ್ತು.

ಇದರಿಂದ ಆಕ್ರೋಷಿತರಾದ ವಾಹನ ಸವಾರರು ಪ್ರತಿಭಟನೆಗೆ ಮುಂದಾಗಿದ್ದರು.ಪ್ರತಿಭಟನೆಗೆ ಮಣಿದು ಪೋಲೀಸರ ಮನವಿಯಂತೆ ಭಾನುವಾರ ಸಮಾಲೋಚನಾ ಸಭೆಗೆ ನಿರ್ಧರಿಸಲಾಗಿತ್ತು. ಈ ಸಂದರ್ಭ ಹೈದರಾಬಾದ್‍ನಲ್ಲಿರುವ ಟೋಲ್ ಅಧಿಕಾರಿ ರಾಮಕೃಷ್ಣ ಬರುವರೆಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು.ಆದರೆ ಭಾನುವಾರದ ಸಭೆಗೆ ರಾಮಕೃಷ್ಣ ಬರಲು ಅಸಾಧ್ಯವಾಗಿದ್ದು, ಸ್ಥಳೀಯ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ನಡೆದು ಸಮಸ್ಯೆ ಇತ್ಯರ್ಥ ಪಡಿಸಲಾಯಿತು.

ಈ ಸಂದರ್ಭ ಸಾರ್ವಜನಿಕರನೇಕರು ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಸಲ್ಲದು. ಪಡುಬಿದ್ರಿಯಲ್ಲಿ ಸರ್ವಿಸ್ ರಸ್ತೆ, ಕಲ್ಸಂಕ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಸಮಸ್ಯೆ ಉಂಟಾಗಿದೆ. ಕಲ್ಸಂಕದಲ್ಲಿ ಕಳೆದ ವರ್ಷ ನೆರೆ ನೀರು ನಿಂತು ಶಾಲಾ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಈ ಬಾರಿ ಕಲ್ಸಂಕ ಸೇತುವೆಯಡಿ ಮಳೆ ನೀರು ಸರಾಗ ಹರಿಯುವಿಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಗುತ್ತಿಗೆದಾರರೇ ಕಾರಣರಾಗುತ್ತಾರೆ. ಸರ್ವಿಸ್ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗೆ ನಡೆದಾಡಲೂ ಕಷ್ಟವಾಗುತ್ತದೆ-ಇತ್ಯಾದಿ ದೂರುಗಳ ಸರಮಾಲೆಯನ್ನೇ ಮುಂದಿಟ್ಟರು. ಈ ಬಗ್ಗೆ ಇಲಾಖೆಯೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಲಾಯಿತು.

ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ರವೀಂದ್ರನಾಥ ಜಿ.ಹೆಗ್ಡೆ, ಅವಿಭಜಿತ ದಕ ಜಿಲ್ಲಾ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ, ಯುಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಲೋಕೇಶ್ ಕಂಚಿನಡ್ಕ, ಗ್ರಾಪಂ ಸದಸ್ಯರಾದ ನವೀನ್ ಎನ್.ಶೆಟ್ಟಿ, ಹಸನ್‍ಬಾವ ಮತ್ತು ಕರುಣಾಕರ ಸಾಲ್ಯಾನ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಹಿರಿಯರಾದ ಶಬ್ಬೀರ್ ಸಾಹೇಬ್, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಕಾಪು ತಾಲೂಕು ಅಧ್ಯಕ್ಷ ನಿಝಾಮುದ್ದೀನ್, ಕರವೇ ಜಿಲ್ಲಾ ಯುವಸೇನೆ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಚ್ಚಿಲ ಗ್ರಾಪಂ ಅಧ್ಯಕ್ಷೆ ಶರ್ಮಿಳಾ ಡಿ.ಸಾಲ್ಯಾನ್, ಆಸಿಫ್ ಆಪತ್ಬಾಂಧವ, ಮೈಯದ್ದಿ, ಸತೀಶ್ ಸಾಲ್ಯಾನ್ ಎರ್ಮಾಳು,ರವೀನ್ ಪಡುಬಿದ್ರಿ, ಕೌಸರ್ ಮತ್ತಿತರರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.