ವೇತನ ಪಾವತಿಗಾಗಿ ಹೆಜಮಾಡಿ ನವಯುಗ್ ಟೋಲ್‍ಗೇಟ್ ಸಿಬಂದಿ ಮಿಂಚಿನ ಮುಷ್ಕರ ಸಂಜೆ ವೇಳೆಗೆ ಸಂಬಳ ಜಮಾ ಭರವಸೆ

ಪಡುಬಿದ್ರಿ: ವೇತನ ದೊರೆಯದ ಹಿನ್ನೆಲೆಯಲ್ಲಿ ಹೆಜಮಾಡಿಯಲ್ಲಿ ಕಾರ್ಯಾಚರಿಸುತ್ತಿರುವ ನವಯುಗ ಟೋಲ್ ಪ್ಲಾಝಾ ಸಿಬಂದಿಗಳು ಶುಕ್ರವಾರ ಸಂಜೆ ಮಿಂಚಿನ ಮುಷ್ಕರ ನಡೆಸಿದರು.

ಜುಲೈ ತಿಂಗಳ ವೇತನವು ಈ ಸಿಬಂದಿ ಖಾತೆಗೆ ಜಮಾ ಆಗದಿರುವುದನ್ನು ಖಂಡಿಸಿ ಹೆಜಮಾಡಿ ಹಾಗೂ ಸಾಸ್ತಾನದ ಸುಮಾರು 180 ಮಂದಿ ಸಿಬಂದಿಗಳು ಸಂಜೆ 4ರಿಂದ ಮುಷ್ಕರ ನಿರತರಾಗಿದ್ದು ಹೆದ್ದಾರಿ ವಾಹನಗಳು ಟೋಲ್‍ನಲ್ಲಿ ಮುಕ್ತವಾಗಿ ಸಂಚರಿಸಿದವು.
ಆಗಸ್ಟ್ ಒಂದರಿಂದ ಟಿಬಿಆರ್ ಕಂಪನಿಯು ಕಾರ್ಮಿಕರ ನೇಮಕ ಗುತ್ತಿಗೆ ವಹಿಸಿಕೊಂಡಿದೆ. ಈ ಹಿಂದೆ ಇಲ್ಲಿ ಗುತ್ತಿಗೆ ಕಾರ್ಯ ನಿರ್ವಹಿಸುತ್ತಿದ್ದ ಮಾರ್ಕೋಲೈನ್ ಕಂಪೆನಿಯು ನವಯುಗ ಕಂಪೆನಿಯಿಂದ ಜುಲೈವರೆಗಿನ ತನ್ನೆಲ್ಲಾ ಪಾವತಿಗಳನ್ನು ಪಡೆದುಕೊಂಡಿದೆ. ಹಾಗಾಗಿ ಸಿಬಂದಿಗಳ ವೇತನ ಪಾವತಿಯನ್ನೂ ಆದೇ ಸಂಸ್ಥೆಯು ಮಾಡಬೇಕಿದ್ದು ಇಂದು ಅಪರಾಹ್ನದವರೆಗೂ ಪಾವತಿಯ ಹುಸಿ ಭರವಸೆಯನ್ನಷ್ಟೇ ನೀಡಿತ್ತು. ಆದರೆ ಆ.16ರವರೆಗೂ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕಾರ್ಮಿಕರು ಮುಷ್ಕರ ಆರಂಭಿಸಿದ್ದರು.

ಬಳಿಕ ಟೋಲ್‍ಗೇಟ್‍ನ ಪ್ರಬಂಧಕ ಶಿವಪ್ರಸಾದ್ ರೈ ಅವರು ನವಯುಗದೊಂದಿಗೆ ಸಂಪರ್ಕ ಸಾಧಿಸಿ ಸಂಜೆಯ 7 ಗಂಟೆಯೊಳಗಾಗಿ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‍ಗಳ ಸುಮಾರು 180 ಸಿಬಂದಿಗಳ ಸಂಬಳವನ್ನು ಮಾರ್ಕೋಲೈನ್ ಸಂಸ್ಥೆಯ ಸೆಕ್ಯೂರಿಟಿ ಡಿಪಾಸಿಟ್‍ನಿಂದ ಕಳಚಿ ಸುಮಾರು 40ಲಕ್ಷ ರೂ.ಗಳನ್ನು ಸಿಂಬದಿಗಳ ಸಂಬಳದ ಖಾತೆಗಳಿಗೆ ಜಮಾ ಮಾಡುವುದಾಗಿ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.

ಕಾರ್ಮಿಕರ ವೇತನ ರೂ.40 ಲಕ್ಷವನ್ನು ನವಯುಗ್ ಕಂಪನಿ ಮುಂಬೈ ಮೂಲದ ಮಾರ್ಕೋಲೈನ್ ಕಂಪನಿಗೆ ಈಗಾಗಲೇ ಪಾವತಿಸಿದೆ. ಆದರೆ ಕಾರ್ಮಿಕರಿಗೆ ವೇತನ ಪಾವತಿಸಿಲ್ಲ. ಮುಷ್ಕರದ ಬಳಿಕ ನವಯುಗ್ ಮುಖ್ಯಸ್ಥರು ಮಾರ್ಕೋಲೈನ್ ಕಂಪನಿ ಜತೆ ಮಾತುಕತೆ ನಡೆಸಿದ್ದು, ಅವರು ಪಾವತಿ ಮಾಡದಿದ್ದರೆ ನವಯುಗ್ ಕಂಪನಿಯೇ ಕಾರ್ಮಿಕರಿಗೆ ವೇತನ ಪಾವತಿಸಲಿದೆ ಎಂದು ನವಯುಗ್ ಕಂಪನಿ ಮೂಲಗಳು ಪತ್ರಿಕೆಗೆ ಮಾಹಿತಿ ನೀಡಿದೆ.

ಸಿಬಂದಿಗಳು, ಪೆÇಲೀಸರು ಹಾಗೂ ಹೆಜಮಾಡಿಯ ಪಾಂಡುರಂಗ ಕರ್ಕೇರರ ಸಮಕ್ಷಮ ನಡೆದಿದ್ದ ಅನೌಪಚಾರಿಕ ಸಭೆಯಲ್ಲಿ ಟೋಲ್ ಪ್ರಬಂಧಕರ ಈ ಭರವಸೆಯ ಮಾತುಗಳಿಗೆ ಒಪ್ಪಿರುವ ಸಿಬಂದಿ ತಮ್ಮ ಖಾತಾ ಜಮಾವಣೆಗಾಗಿ ಕಾದಿದ್ದಾರೆ.
ಹೆಜಮಾಡಿಯ ಸಾಮಾಜಿಕ ಮುಂದಾಳು ಪಾಂಡುರಂಗ ಕರ್ಕೇರ, ಪಡುಬಿದ್ರಿ ಪೆÇಲೀಸ್ ಠಾಣಾ ಎಎಸ್‍ಐ ಗಂಗಾಧರ, ಎಎಸ್‍ಐ ಸುದೇಶ್ ಶೆಟ್ಟಿ ಕಾನೂನು ಸುರಕ್ಷೆಯ ಜವಾಬ್ದಾರಿಯನ್ನು ನಿರ್ವಹಿಸಿದರು. ಸುಮಾರು 3 ಗಂಟೆಗಳ ಮುಕ್ತ ವಾಹನ ಸಂಚಾರದಲ್ಲಿ ನವಯುಗ ಕಂಪೆನಿಗೆ ಸುಮಾರು 3 ಲಕ್ಷ ರೂ. ಗಳಷ್ಟು ನಷ್ಟವಾಗಿರುವುದಾಗಿ ಟೋಲ್‍ಗೇಟ್ ಪ್ರಬಂಧಕ ಶಿವಪ್ರಸಾದ್ ರೈ ತಿಳಿಸಿದ್ದಾರೆ.