ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯಲ್ಲಿ ಪಡುಬಿದ್ರಿ ಜೆಸಿಐ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಗೋಲ್ ಸೆಟ್ಟಿಂಗ್ ತರಬೇತಿ

ಪಡುಬಿದ್ರಿ : ವಿದ್ಯಾರ್ಥಿ ದೆಸೆಯಿಂದಲೇ ಐಎಎಸ್, ಐಪಿಎಸ್, ಭಾರತೀಯ ಯೋಧರು, ವಿಜ್ಞಾನಿಗಳಾಗುವ ಗುರಿಯೊಂದಿಗೆ ಮಕ್ಕಳು ಮುಂದಡಿ ಇರಿಸಬೇಕು. ಅಧ್ಯಾಪಕರು, ಪೋಷಕರು ಈ ಬಗ್ಗೆ ಹೆಚ್ಚು ಒಲವು ತೋರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಪತ್ರಕರ್ತ ಹರೀಶ್ ಹೆಜ್ಮಾಡಿ ಕರೆ ನೀಡಿದರು.

ಅವರು ಬುಧವಾರ ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯಲ್ಲಿ ಪಡುಬಿದ್ರಿ ಜೆಸಿಐ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ನಡೆದ ಗೋಲ್ ಸೆಟ್ಟಿಂಗ್ ತರಬೇತಿ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಉಡುಪಿ-ಮಂಗಳೂರು ಜಿಲ್ಲೆಯು ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆಯುವುದು ಗಮನಾರ್ಹ. ಆದರೆ ಆನಂತರ ಆ ವಿದ್ಯಾರ್ಥಿಗಳ ಭವಿಷ್ಯ ಏನು ಎಂಬುದು ಯಕ್ಷ ಪ್ರಶ್ನೆಯಗುಳಿದಿದೆ. ಅತ್ಯಂತ ಹಿಂದುಳಿದ ಬಿಹಾರದಂತಹ ರಾಜ್ಯಗಳಿಂದ ಹಲವರು ಮಂದಿ ಐಎಎಸ್, ಐಪಿಎಸ್ ಮುಗಿಸಿ ಉನ್ನತ ಉದ್ಯೋಗದ ಸ್ಥಾನಮಾನ ಗಿಟ್ಟಿಸಿಕೊಳ್ಳುತ್ತಾರೆ. ಭಾರತೀಯ ಸೈನ್ಯಕ್ಕೂ ಸೇರಿಕೊಳ್ಳುತ್ತಾರೆ. 18 ವರ್ಷದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಬೇಕೆಂಬ ಇಸ್ರೇಲ್ ದೇಶದಂತೆ ನಮ್ಮ ದೇಶದಲ್ಲೂ ಕಾನೂನು ಪ್ರಕ್ರಿಯೆ ಜಾರಿಗೊಂಡಲ್ಲಿ ಭಾರತ ಮತ್ತಷ್ಟು ಉನ್ನತಿಯನ್ನು ಕಾಣುತ್ತದೆ. ಇಂದಿಲ್ಲಿ ಆ ಮಟ್ಟದಲ್ಲಿ ವಿದ್ಯಾರ್ಥಿಗಳು ಬೆಳೆದು ನಿಂತು ಸುಂದರ ಬದುಕನ್ನು ರೂಪಿಸಿಕೊಳ್ಳುವಂತಹ ತರಬೇತಿ ನೀಡಿದ್ದು, ಆದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಸಲಹೆಯನ್ನು ಪಾಲಿಸಿ ಅನುಸರಿಸಿ ಸಾಧಕರಾಗಿರಿ:

ಸಮಾರಂಭವನ್ನು ಉದ್ಘಾಟಿಸಿದ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಮಾತನಾಡಿ, ಜನರಿಗೆ ಉಪಯುಕ್ತ ಕೆಲಸ ಮಾಡುವ ಜೇಸಿ ಸಂಸ್ಥೆಯು ನಡೆಸುವ ಇಂತಹ ತರಬೇತಿ ಕಾರ್ಯಾಗಾರವು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಸಾಧಕರಾಗುವಲ್ಲಿ ಪರಿಣಾಮಕಾರಿಯಾಗ ಬಲ್ಲುದು. ಆ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಪಡೆದ ಸಲಹೆಯನ್ನು ಪಾಲಿಸಿ ಅನುಸರಿಸಿ ಸಾಧಕರಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಅಭಿಲಾಷೆಯನ್ನು ವ್ಯಕ್ತಪಡಿಸಿದರು.


ಗುರಿ ನಿರ್ಧರಿಸಿ. ಕÀಲಿಕೆ ಹಿಂಬಾಲಿಸುತ್ತದೆ:
ಸಂಪನ್ಮೂಲ ವ್ಯಕ್ತಿಯಾಗಿದ್ದ ಜೆಸಿಐ ಇದರ ರಾಷ್ಟ್ರೀಯ ತರಬೇತುದಾರರಾದ ಸುಧಾಕರ ಕಾರ್ಕಳ ಮಾತಣಾಡಿ, ಪರಿಸರದ ಒತ್ತಡದಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ ಎಂಬುದು ಆಘಾತಕಾರಿಯಾದ ಅಂಶವಾಗಿದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಸರಕಾರದ ಮಟ್ಟದಲ್ಲಿ ಆಗಬೇಕಿದ್ದು, ಸರಕಾರಗಳಿಗೆ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಇಂದಿನ ತರಬೇತಿ ಕಾರ್ಯಾಗಾರವು ನಿಮ್ಮ ಜೀವನದ ಉದ್ದೇಶವನ್ನು ನೀವೇ ಕಂಡುಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಜೀವನದ ಗುರಿಯನ್ನು ನೀವೇ ನಿರ್ಧರಿಸಿದಲ್ಲಿ ಕಲಿಕೆಯು ನಿಮ್ಮನ್ನು ಹಿಂಬಾಲಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಡುಬಿದ್ರಿ ಜೆಸಿಐ ಅಧ್ಯಕ್ಷರಾದ ಅನಿಲ್ ಶೆಟ್ಟಿ ಸ್ವಾಗತಿಸಿದರು. ಪ್ರಜ್ವಲ್, ಶಿವರಾಜ್ ಪರಿಚಯಿಸಿದರು. ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು. ಪೂರ್ವಾಧ್ಯಕ್ಷ ಜಯ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.