ಪ್ರಕಾಶ್ ರಾವ್‍ಗೆ ಎಜುಕೇಶನ್ ಐಕಾನ್ ಪ್ರಶಸ್ತಿ

ಪಡುಬಿದ್ರಿ: ಕಾರ್ಕಳ ತಾಲೂಕು ಇನ್ನ ಗ್ರಾಮದ ಆಯುರ್ವೇದ ಭೂಷಣ ಎಮ್.ವಿ.ಶಾಸ್ತ್ರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಮೂಲತಃ ಪಡುಬಿದ್ರಿಯವರಾದ ಪ್ರಕಾಶ್ ರಾವ್ ಪಿ.ಎನ್.ರವರಿಗೆ ಇಂಟರ್‍ನ್ಯಾಷನಲ್ ಎಜುಕೇಶನ್ ಐಕಾನ್ ಪ್ರಶಸ್ತಿ ಲಭಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಮತ್ತು ಶಾಲೆಯಲ್ಲಿ ಶೈಕ್ಷಣಿಕ ತಂತ್ರಜ್ಞಾನ(ಡಿಜಿಟಲ್ ಸ್ಮಾರ್ಟ್ ಕ್ಲಾಸ್) ಅಳವಡಿಕೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ದೆಹಲಿಯ ವೈಭವೋಪೇತ ತಾಜ್ ವಿವಾಂತಾ ಹೋಟೆಲ್ ಸಭಾಂಗಣದಲ್ಲಿ ವಿವಿಧ ದೇಶಗಳ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳ ಸಮ್ಮುಖದಲ್ಲಿ ಅರ್ಜೆಂಟೈನಾದ ರಾಯಭಾರಿ ಡೇನಿಯಲ್ ಚೂಬೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಿದರು.
ಹೋವರ್ ರೋಬೋಟಿಕ್ಸ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಮೀನಿಶ್ ಜಿಂದಾಲ್, ಟೆಕೋ ಪ್ರೊಲ್ಯಾಬ್ ಸಂಸ್ಥೆಯ ಸ್ಥಾಪಕ ವಿವೇಕಾನಂದ ಪ್ರಸಾದ್, ಎಮ್.ಎಚ್.ಆರ್.ಡಿ ಸಂಸ್ಥೆಯ ಸಲಹೆಗಾರ ವಿಶಾಲ್ ಗುಪ್ತಾ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜರ್ಮನಿ, ಜಪಾನ್, ಸ್ಪೈನ್, ಕೊರಿಯಾ, ಅರ್ಜೆಂಟೈನಾ ಮತ್ತು ಭಾರತದ ವಿವಿಧ ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇವರು ಈ ವರ್ಷ ಈ ಪ್ರಶಸ್ತಿಗೆ ಪಾತ್ರವಾದ ಏಕೈಕ ಕನ್ನಡಿಗರಾಗಿದ್ದಾರೆ. 2018ರಲ್ಲಿ ಪ್ರಕಾಶ್ ರಾವ್‍ರವರು ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದರು.