ಮಹತ್ತರ ಸಾಧನೆಗೆ ಗುರಿ ಮತ್ತು ಸಮಯಪ್ರಜ್ಞೆ ಅತ್ಯಗತ್ಯ-ಡಾ ಸುಪ್ರಭಾ ಹರೀಶ್

ಮೂಲ್ಕಿ: ನಾವು ಯಾವುದೇ ಮಹತ್ತರ ಸಾಧನೆಗೈಯಲು ಗುರಿ ಮತ್ತು ಸಮಯಪ್ರಜ್ಞೆ ಅತ್ಯಗತ್ಯವಾಗಿದೆ.ವಿದ್ಯಾರ್ಥಿ ದೆಸೆಯಿಂದಲೇ ಇವುಗಳನ್ನು ಬೆಳೆಸಿಕೊಂಡಲ್ಲಿ ಮುಂದೆ ಜೀವನದಲ್ಲಿ ಸಾಧನೆಗೈಯಲು ಸಾಧ್ಯವಿದೆ ಎಂದು ಸ್ಪೆಕ್ಟ್ರಮ್ ಔಟ್‍ಲುಕ್ ಅಸೋಸಿಯೇಟ್ ಎಡಿಟರ್ ಡಾ.ಸುಪ್ರಭಾ ಹರೀಶ್ ಹೇಳಿದರು.

ಮೂಲ್ಕಿಯ ಒಡೆಯರಬೆಟ್ಟು ಮೊಗವೀರ ಮಹಾಸಭಾ ಆಡಳಿತದ ಒಡೆಯರಬೆಟ್ಟು ಶ್ರೀ ಬೊಬ್ಬರ್ಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಸನ್ಮಾನ: ಇತ್ತೀಚೆಗೆ ಮಂಗಳೂರು ವಿವಿಯಿಂದ ಫಿಲಾಸಫಿ ಆಫ್ ಡಾಕ್ಟರೇಟ್ ಪಡೆದ ಡಾ.ಸುಪ್ರಭಾ ಹರೀಶ್‍ರವರನ್ನು ಒಡೆಯರಬೆಟ್ಟು ಮೊಗವೀರ ಮಹಾಸಭಾ,ಮುಂಬೈ ಸಮಿತಿ,ಮಹಿಳಾ ವಿಭಾಗಗಳ ವತಿಯಿಂದ ಸನ್ಮಾನಿಸಲಾಯಿತು.ಇದೇ ಸಂದರ್ಭ ಈ ಬಾರಿಯ ನೇಮೋತ್ಸವ ಸಂದರ್ಭ ಅನ್ನ ಸಂತರ್ಪಣೆ ಸೇವೆ ಸಲ್ಲಿಸಿದ ಚಂದ್ರಶೇಖರ ಕೇಶವ ದೇವೂಜಿ,ಹೂವಿನ ಅಲಂಕಾರ ಸೇವೆ ಸಲ್ಲಿಸಿದ ಪುರುಷೋತ್ತಮ ಸುವರ್ಣರನ್ನು ಸನ್ಮಾನಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿ ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾದ ನಿಕಟ ಪೂರ್ವಾಧ್ಯಕ್ಷ ನಾಗೇಶ್ ಡಿ.ಬಂಗೇರ ಮಾತನಾಡಿ,ಸಂಘಟನೆಗಳು ಬಲಯುತವಾಗಲು ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಸರ್ವರ ಭಾಗವಹಿಸುವಿಕೆ ಅತ್ಯಂತ ಪ್ರಮುಖವಾದುದು ಎಂದರು.

ಒಡೆಯರಬೆಟ್ಟು ಮೊಗವೀರ ಮಹಾಸಭಾ ಅಧ್ಯಕ್ಷ ಸುಜಿತ್ ಎಸ್.ಸಾಲ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಒಡೆಯರಬೆಟ್ಟು ಮೊಗವೀರ ಮಹಾಸಭಾದ ಗುರಿಕಾರರುಗಳಾದ ಗಿರೀಶ್ ಗುರಿಕಾರ, ಸುರೇಶ್ ಗುರಿಕಾರ ಮತ್ತು ವಿಜಯ ಗುರಿಕಾರ, ಮುಂಬೈ ಸಮಿತಿಯ ಉಪಾಧ್ಯಕ್ಷ ಸುಧೀರ್ ಪುತ್ರನ್, ಮಹಿಳಾ ವಿಭಾಗದ ಅಧ್ಯಕ್ಷೆ ನೀರಜಾಕ್ಷಿ ಅಗರ್‍ವಾಲ್, ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಅಧ್ಯಕ್ಷ ಗುರುವಪ್ಪ ಕೋಟ್ಯಾನ್, ಮೂಲ್ಕಿ ಉದ್ಯಮಿ ಕೃಷ್ಣ ಆರ್.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಮುಂಬೈ ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ್ ಎಸ್.ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.