Udupi DC holds meeting with Grama Panchayat members regarding waste management problems in Padubidri

ಹಸಿ ಕಸ ನಿರ್ವಹಣೆ ಸಂಬಂಧಿತರೇ ಮಾಡಬೇಕು-ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್        

ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯಾಡಳಿತದೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು,ಹಸಿ ಕಸ ನಿರ್ವಹಣೆಗೆ ಸಂಬಂಧಿತರೇ ನಿರ್ವಹಿಸುವಂತೆ ಮನವೊಲಿಸಬೇಕು.ಹಸಿ ಕಸ ಒಂದೇ ಕಡೆ ಒಟ್ಟುಗೂಡಿಸಿದರೆ ಪರಿಹಾರ ಅಸಾಧ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.

ಶುಕ್ರವಾರ ಪಡುಬಿದ್ರಿ ಗ್ರಾಪಂ ಸಭಾಂಗಣದಲ್ಲಿ ತ್ಯಾಜ್ಯ ನಿರ್ವಹಣೆ ಬಗ್ಗೆ ಕರೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸಮಸ್ಯೆ ಗಂಭೀರ ಪರಿಣಾಮ ಬೀರುವ ಮುನ್ನ ಸ್ಥಳೀಯಾಡಳಿತ ಕಾರ್ಯಪ್ರವರ್ತರಾಗಬೇಕೆಂದು ತಿಳಿಸಿದ ಅವರು,ಇರುವ ಸ್ಥಳಾವಕಾಶ ಬಳಸಿಕೊಂಡು ಒಣ ತ್ಯಾಜ್ಯಗಳನ್ನು ಮಾತ್ರ ಸಂಗ್ರಹಿಸಿ ವಿಲೇವಾರಿ ಮಾಡುವಂತೆ ಹೇಳಿದರು.
ಈಗಿಂದೀಗಲೇ ಗ್ರಾಮದ ಎಲ್ಲಾ ಮನೆ,ಅಂಗಡಿ ಹಾಗೂ ವಸತಿ ಸಂಕೀರ್ಣಗಳಿಗೆ ತೆರಳಿ ಹಸಿ ಕಸವನ್ನು ಸ್ವಯಂ ಅವರೇ ಸಂಗ್ರಹಿಸಿ ಸಂಸ್ಕರಣೆ ಮಾಡುವಂತೆ ಮನವೊಲಿಸಿ.ಅಸಾಧ್ಯವಾದವುಗಳನ್ನು ಮಾತ್ರ ಸಂಗ್ರಹಿಸಿ ಗ್ರಾಪಂ ವತಿಯಿಂದ ಸಂಸ್ಕರಿಸಿ ಎಂದ ಅವರು,ಪ್ರತಿ ಮನೆಗಳಿಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಬೇಕೆಂದರು.

ಜಾಗದ ಕೊರತೆ: ಪಡುಬಿದ್ರಿ ಗ್ರಾಪಂನಲ್ಲಿ ಕಸ ವಿಲೇವಾರಿಗೆ ಜಾಗದ ಕೊರತೆ ಬಗ್ಗೆ ಅವರ ಗಮನ ಸೆಳೆದಾಗ,ನಿಟ್ಟೆ ಸಹಿತ 13 ಗ್ರಾಪಂಗಳು ಲಭ್ಯವಿರುವ ಅಲ್ಪ ಜಾಗದಲ್ಲೇ ಅತ್ಯುತ್ತಮವಾಗಿ ಕಸ ವಿಲೇವಾರಿ ಮಾಡಿದೆ.ಅದೇ ರೀತಿ ಇಲ್ಲಿಯೂ ವಿಲೇವಾರಿ ಮಾಡಿ.ಮುಂದೆ ಯಶಸ್ವಿಯಾದರೆ ಸರಕಾರಿ ಜಾಗ ನೀಡಬಹುದೆಂದರು.ಸುಜ್ಲಾನ್ ಪಕ್ಕದ ಕೆಐಡಿಬಿ ಜಾಗ ಒದಗಿಸುವಂತೆ ಕೇಳಿಕೊಂಡದ್ದಕ್ಕೆ,ಆ ಜಾಗ ನೀಡಬಾರದೆಂದು ಪಂಚಾಯಿತಿಯೇ ಹೇಳಿದೆ ಎಂದರು.ಈ ಜಾಗ ಮೊಗವೀರ ಸಮುದಾಯದವರಿಗೆ ಮೀಸರಿಸಿದ ಜಾಗವಾಗಿರುವ ಬಗ್ಗೆ ಮೊಗವೀರ ಮುಖಂಡ ಸದಾಶಿವ ಪಡುಬಿದ್ರಿ ಜಿಲ್ಲಾಧಿಕಾರಿ ಗಮನ ಸೆಳೆದರು.ಪಾದೆಬೆಟ್ಟು ಬಳಿಯ ಎನ್‍ಟಿಪಿಸಿ ಜಾಗವನ್ನು ಡಿನೋಟಿಫಿಕೇಶನ್ ಮಾಡಿಕೊಡಲು ಜಿಲ್ಲಾಧಿಕಾರಿ ಬಳಿ ವಿನಂತಿಸಲಾಯಿತು.ಮೊದಲು ತ್ಯಾಜ್ಯ ವಿಲೇವಾರಿ ಆರಂಭಿಸಿ.ಬಳಿಕ ಜಾಗ ನೀಡೋಣವೆಂದು ಜಿಲ್ಲಾಧಿಕಾರಿ ಹೇಳಿದರು.
ಹೆದ್ದಾರಿ ಸಮಸ್ಯೆ:ಪಡುಬಿದ್ರಿಯಲ್ಲಿ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ಅವರ ಗಮನ ಸೆಳೆಯಲಾಯಿತು.ಈ ಬಗ್ಗೆ ಇಲಾಖಾ ಸಭೆ ನಡೆಸುವ ಬಗ್ಗೆ ಹೇಳಿದರು.

ದ್ರವ ತ್ಯಾಜ್ಯ ಸಮಸ್ಯೆ:ಪಡುಬಿದ್ರಿಯಲ್ಲಿ ಹಲವಾರು ಹೋಟೆಲ್‍ಗಳು,ವಾಣಿಜ್ಯ ಸಂಕೀರ್ಣಗಳು,ವಸತಿ ಸಂಕೀರ್ಣಗಳಿದ್ದು,ಒಳ ಚರಂಡಿ ವ್ಯವಸ್ಥೆಯಿಲ್ಲದೆ ದ್ರವ ತ್ಯಾಜ್ಯಗಳು ರಸ್ತೆಯಲ್ಲಿಯೇ ಹರಿಯುವ ಬಗ್ಗೆ ಹಲವರು ಧ್ವನಿ ಎತ್ತಿದರು.ಈ ಬಗ್ಗೆ ಇಲ್ಲಿನ ಎಲ್ಲಾ ಹೋಟೆಲ್‍ಗಳಿಗೆ ನೋಟೀಸ್ ನೀಡಲಾಗಿದ್ದು,ಒಳಚರಂಡಿ ವ್ಯವಸ್ಥೆಗೆ ತಾವೇ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಇಲಾಖೆ ಮೂಲಕ ಕ್ರಿಯಾಯೋಜನೆ ರೂಪಿಸಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.
ಪ್ಲಾಸ್ಟಿಕ್ ನಿಷೇಧ:ಜಿಲ್ಲೆಯಲ್ಲಿನ ಹಂತಹಂತವಾಗಿ ಪ್ಲಾಸ್ಟಿಕ್ ನಿಷೇಧ ಜಾರಿಯಾಗಲಿದ್ದು,ಆರಂಭಿಕ ಹಂತವಾಗಿ ವಾಣಿಜ್ಯ ಸಂಕೀರ್ಣಗಳ ಆಸುಪಾಸಿನ ಶಾಲಾ ಮಕ್ಕಳನ್ನು ಬಳಸಿ ಪ್ಲಾಸ್ಟಿಕ್ ಬಳಸದಿರುವಂತೆ ಮನವೊಲಿಸಲಾಗುವುದು.ಬಳಿಕವೂ ಮಾರಾಟ ಮುಂದುವರಿದಲ್ಲಿ ದಂಡ ವಿಧಿಸಲಾಗುವುದು.ಜುಲೈ ಏಳರಿಂದ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದವರು ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ನೀಡಿ: ಒಣ ಕಸ ಸಂಗ್ರ ವೇಳೆ ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸಿ ಮರು ಸಂಸ್ಕರಣಾ ಘಟಕಗಳಿಗೆ ನೀಡುವಂತೆ ಅವರು ತಿಳಿಸಿದರು.ಈಗಾಗಲೇ ನಂದಿಕೂರಿನ ಆಯುಷ್ ವೈದ್ಯಕೀಯ ವೇಸ್ಟ್ ಪ್ರಾಸೆಸಿಂಗ್ ಯೂನಿಟ್‍ನವರ ಬಳಿ ಮಾತುಕತೆ ನಡೆಸಿದ್ದು,ಅವರು ಪ್ಲಾಸ್ಟಿಕ್ ತ್ಯಾಜ್ಯ ಪಡೆಯಲು ಒಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಯಿತು.ಈ ಬಗ್ಗೆ ಸ್ಥಳೀಯಾಡಳಿತ ಅವರನ್ನು ಮತ್ತೆ ಸಂಪರ್ಕಿಸಿ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳುವಂತೆ ಆದೇಶಿಸಿದರು.

ಕಸ ಸಂಗ್ರಹ ಮತ್ತು ನಿರ್ವಹಣೆ ಬಗ್ಗೆ ಬೈಲಾ ತಯಾರಿಸಿರುವ ಬಗ್ಗೆ ಜಿಲ್ಲಾಧಿಕಾರಿಯವರು ಪ್ರಶ್ನಿಸಿದಾಗ ಈವರೆಗೂ ಬೈಲಾ ತಯಾರಿಸಿಲ್ಲ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ಹೇಳಿದರು.ಮೊದಲು ಬೈಲಾ ತಯಾರಿಸುವಂತೆ ಹೇಳಿದರು.
ಪ್ರತಿಯೋಮದು ಕಡೆ ಕಸ ಸಂಗ್ರಹ ವೇಳೆ ಕಸಗಳನ್ನು ಪ್ರತ್ಯೇಕಿಸಿಕೊಡುವಂತೆ ಮನವೊಲಿಸುವಂತೆ ಹಾಗೂ ಪ್ರತಿದಿನ ಕಸ ಸಂಗ್ರಹಿಸಿ ಅಂದೇ ವಿಲೇವಾರಿ ಮಾಡುವಂತೆ ಅವರು ಆದೇಶಿಸಿದರು.
ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯರಾದ ನೀತಾ ಗುರುರಾಜ್ ಮತ್ತು ದಿನೇಶ್ ಕೋಟ್ಯಾನ್ ಪಲಿಮಾರು,ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್,ಜಿಪಂ ಯೋಜನಾಧಿಕಾರಿ ಶ್ರೀನಿವಾಸ ರಾವ್,ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‍ರಾಜ್ ಉಪಸ್ಥಿತರಿದ್ದರು.ಪಿಡಿಒ ಪಂಚಾಕ್ಷರಿ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.

 

HK Hejmady