ಮೈಸೂರು ದೀಪ್ತಿ ಕ್ರಿಕೆಟರ್ಸ್‍ಗೆ ಪಡುಬಿದ್ರಿ ಜೈ ಭೀಮ್ ಟ್ರೋಫಿ-2019

ಪಡುಬಿದ್ರಿ: ರಾಜ್ಯದ ಎಸ್‍ಸಿ-ಎಸ್‍ಟಿ ಯುವ ಪ್ರತಿಭೆಗಳಿಗಾಗಿ ಪಡುಬಿದ್ರಿಯ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಗ್ರಾಮ ಶಾಖೆಯ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಮೈಸೂರು ಅಶೋಕಪುರಂ ದೀಪ್ತಿ ಕ್ರಿಕೆಟರ್ಸ್ ಜೈ ಭೀಮ್ ಟ್ರೋಫಿ-2019 ಪಡೆಯಿತು.

ಭಾನುವಾರ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಏಕಪಕ್ಷೀಯವಾಗಿ ನಡೆದ ಫೈನಲ್ ಪಂದ್ಯದಲ್ಲಿ ಪಡುಬಿದ್ರಿ ಬೇಂಗ್ರೆಯ ಮೀರಾ ಕ್ರಿಕೆಟರ್ಸ್ ತಂಡವನ್ನು 17 ರನ್‍ಗಳಿಂದ ಸೋಲಿಸಿ ಮೈಸೂರು ತಂಡವು ಜೈ ಭೀಮ್ ಟ್ರೋಫಿ ಸಹಿತ ನಗದು ರೂ.50,000 ಪಡೆಯಿತು. ಫೈನಲ್‍ನಲ್ಲಿ ಸೋತ ಮೀರಾ ಬೇಂಗ್ರೆ ತಂಡವು ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ.30,000 ಪಡೆಯಿತು.

ಸೆಮಿಫೈನಲ್‍ಗಳಲ್ಲಿ ಮೀರಾ ಬೇಂಗ್ರೆ ತಂಡವು ಹಾಸನದ ಹಾಸನಾಂಬಾ ಕ್ರಿಕೆಟರ್ಸ್ ತಂಡವನ್ನೂ, ಮೈಸೂರು ದೀಪ್ತಿ ತಂಡವು ಅಲೆವೂರು ಕೆ.ಎಫ್.ಕೆ. ತಂಡನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಮೈಸೂರು ತಂಡದ ವಿಕಾಸ್, ಬೆಸ್ಟ್ ಬ್ಯಾಟ್ಸ್‍ಮೆನ್ ಆಗಿ ಮೈಸೂರು ತಂಡದ ಸಿಂಚನ್, ಬೆಸ್ಟ್ ಬೌಲರ್ ಆಗಿ ಮೈಸೂರು ತಂಡದ ರವಿ ಹಾಗೂ ಸರಣಿ ಶ್ರೇಷ್ಠರಾಗಿ ಮೀರಾ ಬೇಂಗ್ರೆ ತಂಡದ ನಾಗರಾಜ್ ವೈಯಕ್ತಿಕ ಪ್ರಶಸ್ತಿ ಪಡೆದರು.

ಸನ್ಮಾನ: ಇದೇ ಸಂದರ್ಭ ದಲಿತ ಪ್ರತಿಭೆಗಳಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಧು ಪಾಣಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯುವ ಪ್ರತಿಭೆಗಳಾದ ಸನ್ನಿಧಿ, ಅನುಷ್, ಶೃಜನ್ಯಾ, ಶ್ರೇಯಸ್ ಆರ್.ಕೆ., ಅನುರಾಗ್‍ರವರನ್ನು ಸನ್ಮಾನಿಸಲಾಯಿತು.

ಅನಾರೋಗ್ಯ ಪೀಡಿತರಿಗೆ ನೆರವು: ಪಂದ್ಯಾಟದ ಮುಖ್ಯ ಉದ್ದೇಶದಂತೆ ವಿವಿಧ ಸಮಾಜದ ಅನಾರೋಗ್ಯ ಪೀಡಿತರಿಗೆ ಸಂಘಟಕರ ವತಿಯಿಂದ ಸಹಾಯಧನ ವಿತರಿಸಲಾಯಿತು. ಕಳೆದೆರಡು ವರ್ಷಗಳಿಂದ ಸಮಿತಿಯ ವತಿಯಿಂದ ರೂ.2.27 ಲಕ್ಷ ಸಹಾಯಧನ ವಿತರಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಬಹುಮಾನ ವಿತರಣೆ: ದಸಂಸ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕ ಸುಂದರ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಜೀವನ್ ಕುಮಾರ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಲ್ಲಟ್ಟೆ ಜಾರಂದಾಯ ದೈವಸ್ಥಾನದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬಿಜೆಪಿ ಪ್ರಕೋಷ್ಠ ಜಿಲ್ಲಾಧ್ಯಕ್ಷ ಮಿಥುನ್ ಆರ್.ಹೆಗ್ಡೆ, ಕೇಶವ ಸಾಲ್ಯಾನ್ ಹೆಜಮಾಡಿ, ಯೋಗೀಶ್ ಸಾಲ್ಯಾನ್, ಕೃಷ್ಣ ಬಂಗೇರ, ಮುನ್ನ ಪಾಣಾರ, ಸುಂದರ ಗುಜ್ಜರಬೆಟ್ಟು, ಶ್ಯಾಮ್‍ರಾಜ್ ಬಿರ್ತಿ, ಭಾಸ್ಕರ ಮಾಸ್ಟರ್, ಶಂಕರದಾಸ್ ಚೆಂಡ್ಕಳ, ಶಿವರಾಮ್ ಕಾಪು, ಜಗದೀಶ್ ಕಾಪು, ಸುಖೇಶ್ ಎರ್ಮಾಳ್, ಸುರೇಶ್ ಮುನ್ನ ಕಲ್ಲಟ್ಟೆ, ರಾಘವೇಂದ್ರ, ಬುಡಾನ್ ಸಾಹೇಬ್, ಸುಖೇಶ್ ಪಡುಬಿದ್ರಿ, ವಸಂತಿ ಶಿವಾನಂದ್, ಕಾಪು ತಾಲೂಕು ದಸಂಸ ಪ್ರಧಾನ ಸಂಚಾಲಕ ಲೋಕೇಶ್ ಅಂಚನ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಸಂತೋಷ್ ನಂಬಿಯಾರ್ ಮತ್ತು ಪ್ರಕಾಶ್ ಕೆರೆಮನೆ ಕಾರ್ಯಕ್ರಮ ನಿರ್ವಹಿಸಿದರು. ಕೀರ್ತಿಕುಮಾರ್ ಕ್ರಾಂತಿಗೀತೆ ಹಾಡಿದರು.