ಸಮಾಜಮುಖಿ ಚಿಂತನೆಯ ಕೋಡಿ ಕ್ರಿಕೆಟರ್ಸ್‍ನಿಂದ ಹೆಜಮಾಡಿ ಬೀಚ್ ಕ್ಲೀನ್

ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಿಂದ ಮನೆಮಾತಾಗಿರುವ ಹೆಜಮಾಡಿ ಕೋಡಿಯ ಕೋಡಿ ಕ್ರಿಕೆಟರ್ಸ್ ಸದಸ್ಯರು ಹೆಜಮಾಡಿಯ ಯಾರ್ಡ್‍ನಿಂದ ದಕ್ಷಿಣಕ್ಕೆ ಸುಮಾರು 2 ಕಿಮೀನಷ್ಟು ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಗಮನ ಸೆಳೆದರು.

ಹೆಜಮಾಡಿಯಲ್ಲಿ ನಿರಂತರ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಅರ್ಹ ಫಲಾನುಭವಗಳಿಗೆ ಮನೆ ಕಟ್ಟಲು, ಮದುವೆಗಾಗಿ ಆರ್ಥಿಕ ನೆರವು, ಗ್ರಾಮ ವ್ಯಾಪ್ತಿಯ 10ನೇ ತರಗತಿಯ ಟೋಪರ್ಸ್‍ಗೆ ನಗದು ರೂ.10ಸಾವಿರ, ಆಂಗ್ಲ ಮಾಧ್ಯಮ ಶಾಲೆಗೆ ನೆರವು,ಹಿರಿಯ ನಾಗರಿಕರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಉಚಿತ ಪ್ರವಾಸ ಆಯೋಜನೆ, ರಸ್ತೆ ದಾರಿದೀಪ ಅಳವಡಿಕೆ ಇತ್ಯಾದಿ ಸಮಾಜಮುಖಿ ಕಾರ್ಯಗಳಿಂದ ಕೋಡಿ ಕ್ರಿಕೆಟರ್ಸ್ ಪ್ರಸಿದ್ದಿ ಪಡೆದಿದೆ.

ಹೆಜಮಾಡಿಯ ಬೀಚ್‍ನಲ್ಲಿ ಅತೀ ಹೆಚ್ಚು ತ್ಯಾಜ್ಯ ಸಂಗ್ರಹಗೊಂಡಿದ್ದು, ಕೋಡಿ ಕ್ರಿಕೆಟರ್ಸ್ ಸದಸ್ಯರು 3 ಜೆಸಿಬಿ ಬಳಸಿ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಗ್ರಾಪಂ ಹಾಗೂ ಗ್ರಾಮಸ್ಥರ ಗಮನ ಸೆಳೆದಿದ್ದಾರೆ.

ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್, ಹೆಜಮಾಡಿಯ ಕರಾವಳಿ ತೀರದಲ್ಲಿ ಎಣಿಕೆಗೂ ಮೀರಿ ತ್ಯಾಜ್ಯ ಸಂಗ್ರಹವಾಗಿದೆ.ಸ್ಥಳೀಯಾಡಳಿತ ಸೂಕ್ತವಾಗಿ ಸ್ಪಂದಿಸಿದಲ್ಲಿ ಮತ್ತಷ್ಟು ಸ್ವಚ್ಛತಾ ಅಭಿಯಾನವನ್ನು ಕೋಡಿ ಕ್ರಿಕೆಟರ್ಸ್ ಮೂಲಕ ಹಮ್ಮಿಕೊಳ್ಳಲಿದ್ದೇವೆ ಎಂದಿದ್ದಾರೆ.
ಕೋಡಿ ಕ್ರಿಕೆಟರ್ಸ್ ಅಧ್ಯಕ್ಷ ಕಿರಣ್ ಪುತ್ರನ್,ಭೂಪಾಲ್ ಮೆಂಡನ್ ದುಬಾಯಿ,ಗಿರೀಶ್ ಮುಂಬೈ ಮತ್ತಿತರರು ಉಪಸ್ಥಿತರಿದ್ದರು.