Attempt to collect toll from Udupi registered vehicles stopped after protest

Padubidri, August 16th, 2018:  An attempt by highway contractors Navyug Constructions to collect toll from Udupi registered (KA-20) vehicles at Hejamady toll gate was stopped after protest by various organizations.  The toll collection started without any prior notice with the help of tight security by police from 8.30 in the morning.  Due to swift protest by various organizations, the toll collection was stopped pending the final decision to be taken after holding a meeting with the Deputy Commissioner scheduled for Friday.

Unaware of toll collection for the local vehicles, many people refused to pay the toll and informed the leaders of various organizations while others paid toll without any option.

Full news in Kannada ….

ಹೆಜಮಾಡಿ ಟೋಲ್‍ನಲ್ಲಿ ಉಡುಪಿ ಜಿಲ್ಲಾ ನೋಂದಣಿ ವಾಹನಗಳಿಂದ ಏಕಾಏಕಿ ಟೋಲ್ ಸಂಗ್ರಹ
ವಿವಿಧ ಸಂಘಟನೆಗಳಿಂದ ಕ್ಷಿಪ್ರ ಪ್ರತಿಭಟನೆ- ಮಧ್ಯಾಹ್ನದಿಂದ ಟೋಲ್ ಸಂಗ್ರಹ ಸ್ಥಗಿತ

ಹೆಜಮಾಡಿಯಲ್ಲಿ ಟೋಲ್ ಸಂಗ್ರಹ ಗುತ್ತಿಗೆದಾರರಾದ ನವಯುಗ್ ಕಂಪನಿಯು ಗುರುವಾರ ಬೆಳಿಗ್ಗೆ 8.30ರಿಂದ ಉಡುಪಿ ನೋಂದಣಿ(ಕೆಎ-20)ಯ ಎಲ್ಲಾ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಿಸಿದ್ದು,ವಿವಿಧ ಸಂಘಟನೆಗಳು ಕ್ಷಿಪ್ರ ಪ್ರತಿಭಟನೆ ನಡೆಸಿದ ಫಲವಾಗಿ ಮಧ್ಯಾಹ್ನದಿಂದ ಟೋಲ್ ಸಂಗ್ರಹ ಸ್ಥಗಿತಗೊಳಿಸಿದ ಘಟನೆ ನಡೆದಿದೆ.ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರೆದ ಸಭೆಯ ತನಕ ಟೋಲ್ ಸ್ಥಗಿತಕ್ಕೆ ನವಯುಗ್ ಒಪ್ಪಿಗೆ ನೀಡಿದೆ.


ಸಾರ್ವಜನಿಕರಿಗಾಗಲೀ,ಟೋಲ್ ಸಿಬ್ಬಂದಿಗಳಿಗಾಗಲೀ ಯಾವುದೇ ಪೂರ್ವ ಮಾಹಿತಿ ನೀಡದೆ ಗುರುವಾರ ಪೋಲಿಸ್ ಬಿಗಿ ಭದ್ರತೆಯಲ್ಲಿ ಉಡುಪಿ ಜಿಲ್ಲಾ ನೋಂದಣಿಯ ವಾಹನಗಳಿಗೂ ಟೋಲ್ ಸಂಗ್ರಹವಾಗಿತ್ತು.ಈ ಬಗ್ಗೆ ಕಿಂಚಿತ್ತೂ ಸುಳಿವರಿಯದ ಅನೇಕ ವಾಹನ ಚಾಲಕರು ಟೋಲ್ ನೀಡಲು ನಿರಾಕರಿಸಿದ್ದು,ವಿವಿಧ ಸಂಘಟನೆಗಳ ಮುಖಂಡರುಗಳಿಗೆ ಮಾಹಿತಿ ನೀಡಿದ್ದರು.ಕೆಲವರು ಅನಿವಾರ್ಯವಾಗಿ ಟೋಲ್ ನೀಡಿದರೆ ಇನ್ನು ಕೆಲವರು ಟೋಲ್ ನೀಡಲು ನಿರಾಕರಿಸಿದರು.
ಈ ಸಂದರ್ಭ ಹೆಜಮಾಡಿ ನಾಗರಿಕ ಸಮಿತಿಯ ಅಧ್ಯಕ್ಷ ಶೇಖರ್ ಹೆಜ್ಮಾಡಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಒಗ್ಗೂಡಿ,ಟೋಲ್ ಸಂಗ್ರಹಕ್ಕೆ ವಿರೋಧಿಸಿದರು.


ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ.ಕಾಮಗಾರಿ ಪೂರ್ಣಗೊಳಿಸಿದಲ್ಲಿ ಯಾವುದೇ ತಕರಾರಿಲ್ಲದೆ ಟೋಲ್ ನೀಡುತ್ತೇವೆ.ಅಲ್ಲಿವರೆಗೆ ಉಡುಪಿ ಜಿಲ್ಲಾ ನೋಂದಣಿಯ ವಾಹನಗಳಿಗೆ ವಿನಾಯತಿ ನೀಡಬೇಕೆಂದು ಆಗ್ರಹಿಸಿದರು.

ಕಾಪು ತಹಶೀಲ್ದಾರ್ ಗುರು ಸಿದ್ಧಯ್ಯ ಬಂದೋಬಸ್ತ್‍ನ ನೇತೃತ್ವ ವಹಿಸಿದ್ದು,ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಟೋಲ್ ಸಂಗ್ರಹ ಸ್ಥಳದಲ್ಲಿ ಪೋಲೀಸ್ ಭದ್ರತೆ ನೀಡಲಾಗಿದೆ.ಕಾನೂನು ವಿರುದ್ಧ ವರ್ತಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು.ಟೋಲ್ ನಿಲ್ಲಸಬೇಕಿದ್ದಲ್ಲಿ ಇಂದೇ ಜಿಲ್ಲಾಧಿಕಾರಿಯವರನ್ನು ಮುಖತ ಭೇಟಿಯಾಗಿ ಎಂದು ಹೇಳಿದರು.
ಕೆಲವು ವಾಹನಗಳನ್ನು ಟೋಲ್ ನೀಡದಂತೆ ಪ್ರತಿಭಟನಾಕಾರರೇ ಆಗ್ರಹಿಸಿದ್ದು,ಪೋಲೀಸರ ನೆರವಿನಿಂದ ನವಯುಗ್ ಟೋಲ್ ಪಡೆಯಿತು.

ತಹಶೀಲ್ದಾರ್ ಗುರು ಸಿದ್ದಯ್ಯ,ಎಎನ್‍ಎಫ್ ಸಿಐ ಬೆಳ್ಳಿಯಪ್ಪ,ಕಾಪು ಸಿಐ ಹಾಲಮೂರ್ತಿ ರಾವ್,ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಹಾಗೂ ನವಯುಗ್ ಟೋಲ್ ಮ್ಯಾನೇಜರ್ ಪ್ರತ್ಯೇಕ ಮಾತುಕತೆ ನಡೆಸಿ ಜಿಲ್ಲಾಧಿಕಾರಿಗಳ ಜತೆ ಸಮಾಲೋಚಿಸಿದ ಬಳಿಕ ಶುಕ್ರವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆಯಲಿರುವ ಸಮಾಲೋಚನಾ ಸಭೆ ತನಕ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಯಿತು.

ಮಧ್ಯಾಹ್ನ 12.15ರ ಬಳಿಕ ಯಥಾಸ್ಥಿತಿ ಜಾರಿಗೆ ಬಂತು.ಇದೇ ವೇಳೆ ಸಾಸ್ತಾನ ಟೋಲ್‍ನಲ್ಲೂ ಉಡುಪಿ ಜಿಲ್ಲಾ ವಾಹನಗಳಿಂದ ಟೋಲ್ ಸಂಗ್ರಹ ಆರಂಭಗೊಂಡಿದ್ದು,12.15ರ ಬಳಿಕ ಸ್ಥಗಿತಗೊಳಿಸಲಾಯಿತು.
ಮೂಲ್ಕಿ ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಮಧು ಆಚಾರ್ಯ,ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಶನ್ ಕಾರ್ಯದರ್ಶಿ ರಮೇಶ್ ಪೂಜಾರಿ,ಪಡುಬಿದ್ರಿ ಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ರವಿ ಶೆಟ್ಟಿ,ಜಯಕರ್ನಾಟಕ ಸಂಸ್ಥೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್,ಕಾಪು ದಿವಾಕರ ಶೆಟ್ಟಿ,ನವೀನ್‍ಚಂದ್ರ ಜೆ.ಶೆಟ್ಟಿ,ವಿಶ್ವಾಸ್ ವಿ.ಅಮೀನ್,ಜಿತೇಂದ್ರ ಫುರ್ಟಾಡೋ,ರವಿರಾಜ್ ಹೆಗ್ಡೆ,ಸುಧಾಕರ ಕರ್ಕೇರ,ಸಚಿನ್ ನಾಯಕ್,ಪಾಂಡುರಂಗ ಕರ್ಕೇರ,ಸುಧೀರ್ ಕರ್ಕೇರ,ರವೀಂದ್ರ ಹೆಜ್ಮಾಡಿ,ರಮಾಕಾಂತ ದೇವಾಡಿಗ,ಕೇಶವ ಸಾಲಿಯಾನ್,ಅಬ್ದುಲ್ ಅಜೀಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನವಯುಗ ಟೋಲ್ ಮ್ಯಾನೇಜರ್ ಮಾಧ್ಯಮದೊಂದಿಗೆ ಮಾತನಾಡಿ,ಕಾನೂನುಬದ್ಧವಾಗಿ ಟೋಲ್ ಸಂಗ್ರಹ ಆರಂಭಿಸಲಾಗಿದೆ.ಈಗಾಗಲೇ ಟೋಲ್ ಸಂಗ್ರಹದಲ್ಲಿ 30 ಕೋಟಿ ರೂ.ಕಡಿಮೆ ಸಂಗ್ರಹವಾಗಿದೆ.ಹಾಗಾಗಿ ಯಾವುದೇ ರಿಯಾಯತಿ ತೋರ್ಪಡಿಸುವಂತಿಲ್ಲ.ಆದಾಗ್ಯೂ ಸ್ಥಳೀಯ ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಟೋಲ್ ವಿನಾಯಿತಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಉಗ್ರ ಹೋರಾಟ-ದೇವಿಪ್ರಸಾದ್: ಕಾಮಾಗಾರಿ ಪೂರ್ಣಗೊಳಿಸದೆ ಯಾವುದೇ ವಾಹನಗಳಿಂದ ಟೋಲ್ ಸಂಗ್ರಹ ಸಾಧ್ಯವಿಲ್ಲ.ಈ ಬಗ್ಗೆ ಸರಕಾರವೇ ಸ್ಪಷ್ಟಪಡಿಸಿದೆ.ಅದನ್ನು ಮೀರಿ ಟೋಲ್ ಸಂಗ್ರಹ ಮಾಡಿದರೆ ಉಭಯ ಜಿಲ್ಲಾ ಸರ್ವ ಸಂಘಟನೆಗಳನ್ನು ಒಗ್ಗೂಡಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿಯ ಉಭಯ ಜಿಲಾಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.