Ancient house on the verge of collapse

Ancient house in a crowded place in Mulki is on the verge of collapse and people demand evacuation

ಜನನಿಬಿಡ ರಸ್ತೆಯ ಪುರಾತನ ಮನೆ ಕುಸಿತದ ಭೀತಿ-ಮನೆ ತೆರವಿಗೆ ಸಾರ್ವಜನಿಕರ ಆಗ್ರಹ — ಎಚ್ಕೆ ಹೆಜ್ಮಾಡಿ, ಮೂಲ್ಕಿ

ಮೂಲ್ಕಿಯ ಹೃದಯಭಾಗದ ರಸ್ತೆಗೆ ತಾಗಿಕೊಂಡಿರುವ ಪುರಾತನ ಎರಡಂತಸ್ತಿನ ಮನೆಯೊಂದು ಕುಸಿಯುವ ಭೀತಿಯಲ್ಲಿದ್ದು, ಸಾರ್ವಜನಿಕರು ಅಪಾಯ ಸಂಭವಿಸುವ ಮುನ್ನ ತಕ್ಷಣ ತೆರವುಗೊಳಿಸುವಂತೆ ಸ್ಥಳೀಯಾಡಳಿತವನ್ನು ಆಗ್ರಹಿಸಿದ್ದಾರೆ.

ಮೂಲ್ಕಿ ಬಸ್ಸು ನಿಲ್ದಾಣ ಪಕ್ಕದ ಪಂಚಮಹಲ್ ರಸ್ತೆಯಲ್ಲಿ 1923ರಲ್ಲಿ ಕಟ್ಟಿದ ಮನೆಯ ಹಿಂಭಾಗದ ಪಾಶ್ರ್ವ ಈಗಾಗಲೇ ಕುಸಿದು ಬಿದ್ದಿದೆ. ರಸ್ತೆಗಭಿಮುಖವಾಗಿರುವ ಮನೆಯ ಮುಂಭಾಗದ ಕಂಬಗಳು ಬಿರುಕು ಬಿಟ್ಟಿದ್ದು ಆಗಲೋ ಈಗಲೇ ರಸ್ತೆ ಮೇಲೆಯೇ ಬೀಳುವ ಅಪಾಯ ಎದುರಾಗಿದೆ. ಶುಕ್ರವಾರ ಮುಂಜಾನೆಯಿಂದ ಮನೆ ಮುಂಭಾಗದ ಕಂಬವೊಂದು ರಸ್ತೆಗೆ ವಾಲಿಕೊಂಡು ನಿಂತಿದೆ.

ಮೂಲ್ಕಿಯ ಪ್ರಸಿದ್ಧ ರಾಜಕೀಯ ಮುಂದಾಳು ದಿ.ನೂರು ಮೊಹಮ್ಮದ್ ಮಾಲೀಕತ್ವದ ಈ ಕಟ್ಟಡವು ಸದ್ಯ ಅವರ ಪತ್ನಿ ರುಕಿಯಾ ನೂರು ಮೊಹಮ್ಮದ್ ವಶದಲ್ಲಿದೆ. ಆದರೆ ಮನೆಯು ವಾಸಕ್ಕೆ ಸಂಪೂರ್ಣ ಅಯೋಗ್ಯವಾದ ಕಾರಣ ಅವರು ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. 1923ರಲ್ಲಿ ಕಟ್ಟಿದ ಈ ಎರಡಂಂತಸ್ತಿನ ಮನೆಯನ್ನು 1949ರಲ್ಲಿ ರಿಪೇರಿ ಮಾಡಲಾಗಿತ್ತು ಎಂದು ಮನೆಯ ದಾಖಲೆಗಳು ತಿಳಿಸುತ್ತದೆ. ಮನೆಯ ಮಾಲಿಕತ್ವದ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಸದ್ಯ ವ್ಯಾಜ್ಯವನ್ನು ದೂರುದಾರರು ಹಿಂಪಡೆದಿದ್ದಾರೆ.

ಜನನಿಬಿಡ ರಸ್ತೆ: ಇದೇ ಮನೆಯ ಅಕ್ಕಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ವಸತಿ ಸಂಕೀರ್ಣಗಳಿವೆ. ರಸ್ತೆಯಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಹಾದು ಹೋಗಿದೆ. ಇದೇ ರಸ್ತೆಯಲ್ಲಿ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ನಿತ್ಯ ಸಂಚರಿಸುತ್ತಾರೆ. ಬ್ಯಾಂಕ್ ಮತ್ತು ಸಭಾಗೃಹಗಳೂ ಇದೇ ರಸ್ತೆಯಲ್ಲಿದ್ದು, ಪೋಲಿಸ್ ಠಾಣೆಗೂ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಪ್ರಮುಖ ದೇವಳಕ್ಕೂ ಹೋಗುವವರು ಇದೇ ರಸ್ತೆಯನ್ನು ಉಪಯೋಗಿಸುತ್ತಾರೆ. ಅಲ್ಲದೆ ನೂರಾರು ಮನೆಗಳವರೂ ಇದೇ ರಸ್ತೆಯನ್ನೇ ಬಳಸುತ್ತಾರೆ. ಮನೆಯ ಮುಂಭಾಗದ ರಸ್ತೆಯಲ್ಲಿ ನಿತ್ಯ ಹಲವಾರು ದ್ವಿಚಕ್ರ ವಾಹನಗಳು ಪಾರ್ಕ್ ಮಾಡುತ್ತಿವೆ.

ರಸ್ತೆ ಮೇಲೆ ಕುಸಿಯುವ ಭೀತಿ: ರಸ್ತೆಗೆ ತಾಗಿಕೊಂಡೇ ಇರುವ ಮನೆಯು ರಸ್ತೆ ಮೇಲೇಯೇ ವಾಲಿಕೊಂಡಿದ್ದು, ಬಿದ್ದರೆ ರಸ್ತೆ ಮೇಲೆಯೇ ಬೀಳಲಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆ ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ಬೀಳಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ತಕ್ಷಣ ಮನೆ ತೆರವಿಗೆ ಆಗ್ರಹಿಸಿದ್ದಾರೆ. ಸ್ಥಳೀಯ ವಾಹನಗಳು ರಸ್ತೆ ಸಂಚಾರ ಪಥವನ್ನು ಬದಲಿಸಿ ಸುತ್ತು ಬಳಸಿ ಸಂಚರಿಸುತ್ತಿವೆ. ರಸ್ತೆಯಲ್ಲಿ ನಡೆಯುವ ಪಾದಚಾರಿಗಳನ್ನು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಮನವಿ ಮಾಡಲಾಗಿದೆ.

ಈ ಬಗ್ಗೆ ಸ್ಥಳೀಯಾಡಳಿತದ ಗಮನ ಸೆಳೆದಿದ್ದು, ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಮತ್ತು ನಪಂ ಇಂಜಿನಿಯರ್ ಅಶ್ವಿನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯನ್ನು ತಕ್ಷಣ ತೆರವುಗೊಳಿಸುವಂತೆ ಮನೆ ಮಾಲೀಕರಿಗೆ ದೂರವಾಣಿ ಮೂಲಕ ಆದೇಶಿಸಿದ್ದು, ಸೋಮವಾರ ತೆರವುಗೊಳಿಸುವ ಭರವಸೆ ನೀಡಿದ್ದಾರೆ.

ಅಷ್ಟರೊಳಗೆ ಮನೆ ಕುಸಿಯುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ನಪಂ ವತಿಯಿಂದ ಮೂಲ್ಕಿ ಪೋಲಿಸ್ ಠಾಣೆಗೆ ಮತ್ತು ಸುರತ್ಕಲ್ ಸಂಚಾರಿ ಠಾಣೆಗೆ ಲಿಖಿತ ಮನವಿ ಮಾಡಿ ರಸ್ತೆ ಸಂಚಾರ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಮೂಲ್ಕಿ ಪೋಲಿಸರೂ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

ಅನಿಸಿಕೆ: ಮನೆ ಆಗಲೋ ಈಗಲೇ ಬೀಳುವಂತಿದೆ. ತಕ್ಷಣ ತೆರವಿಗೆ ಮನೆ ಮಾಲೀಕರಿಗೆ ಆದೇಶ ನೀಡಲಾಗಿದೆ. ಪೋಲಿಸರಿಗೂ ರಸ್ತೆ ಸಂಚಾರ ಬದಲಿಸುವಂತೆ ಮನವಿ ಮಾಡಲಾಗಿದೆ. — ಚಂದ್ರ ಪೂಜಾರಿ, ಮುಖ್ಯಾಧಿಕಾರಿ, ಮೂಲ್ಕಿ ನಗರ ಪಂಚಾಯಿತಿ.

ಮನೆ ಬೀಳುವ ಸ್ಥಿತಿಯಲ್ಲಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ. ತಕ್ಷಣ ರಸ್ತೆ ಸಂಚಾರ ಬದಲಿಸಲು ಸಂಚಾರಿ ಪೋಲೀಸರಿಗೆ ತಿಳಿಸಲಾಗುವುದು.
-ಅನಂತ ಪದ್ಮನಾಭ, ನಿರೀಕ್ಷಕರು, ಮೂಲ್ಕಿ ಪೋಲಿಸ್ ಠಾಣೆ.

ಫೋಟೋ: ಬೀಳುವ ಸ್ಥಿತಿಯಲ್ಲಿರುವ ಪುರಾತನ ಮನೆ . ರಸ್ತೆಗೆ ಅಭಿಮುಖವಾಗಿ ಮನೆಯ ಕಂಬವೊಂದು ಬಿರುಕು ಬಿಟ್ಟಿರುವುದು.