ಕಲ್ಲಟ್ಟೆ ಜಾರಂದಾಯ ಭಜನಾ ಮಂಡಳಿ ತಂಡಕ್ಕೆ ಸತತ 2ನೇ ಬಾರಿ ಆಟಿದ ಪಂಥ ಪ್ರಶಸ್ತಿ

ಕಲ್ಲಟ್ಟೆ ಜಾರಂದಾಯ ಭಜನಾ ಮಂಡಳಿ ತಂಡಕ್ಕೆ ಸತತ 2ನೇ ಬಾರಿ ಆಟಿದ ಪಂಥ ಪ್ರಶಸ್ತಿ
ಪಡುಬಿದ್ರಿ: ಆಟಿ ಕೂಟಗಳಲ್ಲಿ ಅವಿಭಜಿತ ಜಿಲ್ಲೆಯ ಏಕೈಕ ಆಟಿ ಪಂಥವಾಗಿ ಗುರುತಿಸಿಕೊಂಡಿರುವ ಪಡುಬಿದ್ರಿಯ ರೋಟರಿ ಕ್ಲಬ್ ಮತ್ತು ಇನ್ನರವೀಲ್ ಕ್ಲಬ್ ಆಯೋಜಿಸುತ್ತಾ ಬಂದಿರುವ ಆಟಿದ ಪಂಥದಲ್ಲಿ ಪಡುಬಿದ್ರಿ ಕಲ್ಲಟ್ಟೆ ಶ್ರೀ ಜಾರಂದಾಯ ಭಜನಾ ಮಂಡಳಿಯು ಸತತ ಎರಡನೇ ವರ್ಷ ಪ್ರಶಸ್ತಿ ಗೆದ್ದಿದೆ.

ಭಾನುವಾರ ಪಡುಬಿದ್ರಿಯ ಸಾಯಿ ಆರ್ಕೇಡ್ ಸಂಕೀರ್ಣದಲ್ಲಿ ರೋಟರಿ ವತಿಯಿಂದ ನಡೆದ 3ನೇ ವರ್ಷದ ಆಟಿದ ಪಂಥ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಕಲ್ಲಟ್ಟೆ ತಂಡವು ವಿಜಯಿಯಾಗಿ ನಗದು ಸಹಿತ ಪ್ರಶಸ್ತಿ ಪಡೆಯಿತು. ಹೆಜಮಾಡಿಯ ಮಟ್ಟು ಮೊಗವೀರ ಮಹಿಳಾ ಸಭಾವು ತುರುಸಿನ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದರೆ, ಎರ್ಮಾಳು ಯುವತಿ ಮಂಡಲ ತೃತೀಯ ಮತ್ತು ಹೆಜಮಾಡಿ ಫ್ರೆಂಡ್ಸ್ ಚತುರ್ಥ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ಪಡೆಯಿತು.

ಉದ್ಘಾಟನೆ: ಸಮಾರಂಭವನ್ನು ಉದ್ಘಾಟಿಸಿದ ತುಳು ವಿದ್ವಾಂಸ ಪಿ.ಕೆ.ಸದಾನಂದರವರು ಮಾತನಾಡಿ, ಯಾವುದೇ ಆಚರಣೆಗಳು ಸಂಪ್ರದಾಯಬದ್ಧವಾಗಿರಬೇಕು. ಅತಿಯಾದರೆ ಎಲ್ಲವೂ ವಿಷ. ಆಟಿ ಆಚರಣೆಗಳ ತಿನಿಸುಗಳನ್ನು ಎಳೆಯರಿಗೆ ಕಲಿಸಿಕೊಡಬೇಕು ಎಂದರು.
ಸಮಾರಂಭದ ಆಕರ್ಷಣೆಯಾಗಿ ಚಲನಚಿತ್ರ ನಟಿ ಸ್ವಾತಿ ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸ್ಪರ್ಧಾಳುಗಳೆಗೆ ಸ್ಪೂರ್ತಿ ತುಂಬಿದರು.

ರೋಟರಿ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ ಉಚ್ಚಿಲ, ವಲಯ ಸೇವಾನಿ ರಮೀಝ್ ಹುಸೈನ್, ಉಚ್ಚಿಲ ರೋಟರಿ ಕ್ಲಬ್ ಅಧ್ಯಕ್ಷೆ ಶರಾವತಿ ಯು. ಮುಖ್ಯ ಅತಿಥಿಗಳಾಗಿದ್ದರು.

ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ರಿಯಾಝ್ ಮುದರಂಗಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಇನ್ನರ್‍ವೀಲ್ ಅಧ್ಯಕ್ಷೆ ಸುನಂದಾ ವಿಜಯ್, ರೋಟರಿ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ, ಕಾರ್ಯಕ್ರಮ ನಿರ್ದೇಶಕ ಲೋಹಿತಾಕ್ಷ ಸುವರ್ಣ ಉಪಸ್ಥಿತರಿದ್ದರು.

ಸದಾನಂದ ಪಿ.ಕೆ., ಸ್ವಾತಿ ಬಂಗೇರ ಮತ್ತು ಹರೀಶ್ ಕುಮಾರ್ ತೀರ್ಪುಗಾರರಾಗಿದ್ದರು.

ಸುಧಾಕರ್ ಕೆ.ಕಾರ್ಯಕ್ರಮ ನಿರ್ವಹಿಸಿದರು. ಇನ್ನರ್‍ವೀಲ್ ಕಾರ್ಯದರ್ಶಿ ಕಸ್ತೂರಿ ಪ್ರವೀಣ್ ವಂದಿಸಿದರು.