ಪಡುಬಿದ್ರಿ ಘನ,ದ್ರವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೂಕ್ತ ಜಾಗ ನೀಡಲು ಜಿಲ್ಲಾಧಿಕಾರಿ ಸೂಚನೆ

ಪಡುಬಿದ್ರಿ: 15 ಸಾವಿರಕ್ಕೂ ಅಧಿಕ ಜನಸಂಖ್ಯೆಯ ಪಡುಬಿದ್ರಿಯ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಬುಧವಾರ ಸ್ವಯಂ ಪರಿಶೀಲಿಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‍ರವರು ತಕ್ಷಣ ಎಸ್‍ಎಲ್‍ಆರ್‍ಎಮ್ ಘಟಕ ಸ್ಥಾಪನೆಗೆ ಜಾಗ ಗುರುತಿಸುವಂತೆ ತಹಶೀಲ್ದಾರ್ ಮೊಹಮ್ಮದ್ ಇಸಾಕ್‍ರವರಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಶಾಸಕ ಲಾಲಾಜಿ ಆರ್.ಮೆಂಡನ್ ಜತೆಗೂಡಿ ಹೆದ್ದಾರಿ ಬದಿ ಪಡುಬಿದ್ರಿ ಗ್ರಾಪಂ ನಿರ್ಮಾಣ ಹಂತದ ಕಟ್ಟಡ ಮುಂಭಾಗ ಕಾರ್ಯಾಚರಿಸುತ್ತಿರುವ ಎಸ್‍ಎಲ್‍ಆರ್‍ಎಮ್ ಘಟಕಕ್ಕೆ ಭೇಟಿ ನೀಡಿ ಗ್ರಾಪಂ ವತಿಯಿಂದ ನೀಡಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಈ ಹಿಂದಿನ ಜಿಲ್ಲಾಧಿಕಾರಿಯವರ ಸೂಚನೆ ಮೇರೆಗೆ ಗ್ರಾಪಂ ಕಟ್ಟಡ ಬಳಿ ಘಟಕವನ್ನು ನಿರ್ಮಿಸಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಇಲ್ಲಿ ಕಸ ಸಂಗ್ರಹ ಅಧಿಕವಾಗಿ ನಿರ್ವಹಣೆ ಅಸಾಧ್ಯ ಸ್ಥಿತಿಗೆ ತಲುಪಿತ್ತು. ಅಲ್ಲದೆ ಸುತ್ತಲೂ ದುರ್ವಾಸನೆ ತುಂಬಿ ನಡೆದಾಡಲೂ ಕಷ್ಟವಾಗಿತ್ತು.

ಈಗಾಗಲೇ ಪಡುಬಿದ್ರಿ ಗ್ರಾಪಂ ಎಸ್‍ಎಲ್‍ಆರ್‍ಎಮ್ ಘಟಕ ಸ್ಥಾಪನೆಗೆ ಎನ್‍ಟಿಪಿಸಿಯ ಹಳೇ ಗೋಡೌನ್ ಬಳಿ ಒಂದೆಕರೆ ಜಾಗ ಕೇಳಿತ್ತು. ಈ ಬಗ್ಗೆ ವ್ಯಾಜ್ಯ ಹೈಕೋರ್ಟ್‍ನಲ್ಲಿದೆ. ಕಾನೂನು ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಮತ್ತು ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠರವರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ಸೂಕ್ತ ಜಾಗ ಗುರುತಿಸುವಂತೆ ಕೇಳಿದ್ದರು.

ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಕಾಪು ತಹಶೀಲ್ದಾರ್‍ರವರಿಗೆ ಸೂಕ್ತ ಜಾಗ ಗುರುತಿಸುವಂತೆ ಸೂಚನೆ ನೀಡಿದರು.

ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿಯವರು.

ಇದೇ ಸಂದರ್ಭ ಅವರು ಅಪೂರ್ಣ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದರು. ನವಯುಗ್ ಕಂಪನಿಯ ಅಧಿಕಾರಿಗಳಿಗೆ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಆದೇಶಿಸಿದರು.

ಇದೇ ಸಂದರ್ಭ ಹೆದ್ದಾರಿ ಕಾಮಗಾರಿ ತ್ವರಿತ, ಪ್ರಕೃತಿ ವಿಕೋಪ ನಿಧಿಯಿಂದ ಪಡುಬಿದ್ರಿ ವ್ಯಾಪ್ತಿಯಲ್ಲಿ ಸಂಭವಿಸಿದ ಅನಾಹುತಗಳಿಗೆ ತುರ್ತು ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಗ್ರಾಪಂ ವತಿಯಿಂದ ದಮಯಂತಿ ಅಮೀನ್ ಮನವಿ ಸಲ್ಲಿಸಿದರು.

ಬಂದರು ಪ್ರದೇಶಕ್ಕೆ ಭೇಟಿ: ಹೆಜಮಾಡಿ ಬಂದರು ಯೋಜನೆ ವಿಳಂಬ ಬಗ್ಗೆ ಶಾಸಕ ಲಾಲಾಜಿ ಮೆಂಡನ್ ಗಮನ ಸೆಳೆದರು. ಈ ಬಗ್ಗೆ ಸಸಿಹಿತ್ಲು ಅಳಿವೆ ಪ್ರದೇಶಕ್ಕೆ ಭೇಟಿ ನೀಡಿ ಬಂದರು ಪ್ರದೇಶಗಳ ವೀಕ್ಷಣೆ ನಡೆಸಿದರು.

ಸುಜ್ಲಾನ್ ಘಟಕಕ್ಕೆ ಭೇಟಿ: ಸುಜ್ಲಾನ್ ಘಟಕವು ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದು, ಸೂಕ್ತವಾಗಿ ಉಪಯೋಗಿಸದೆ ಪರಾಬಾರೆ ಮಾಡುತ್ತಿದೆ ಎಂದು ಶಾಸಕರಾದಿಯಾಗಿ ಗ್ರಾಮಸ್ಥರ ದೂರಿನ ಮೇರೆಗೆ ಜಿಲ್ಲಾಧಿಕಾರಿಯವರು ಸುಜ್ಲಾನ್ ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳಾದ ಅಶೋಕ್ ಶೆಟ್ಟಿ ಬಳಿ ವಿವರ ಕೇಳಿದರು. ಸ್ಥಳೀಯರಿಗೆ ಉದ್ಯೋಗ ನೀಡದೆ ಸತಾಯಿಸುತ್ತಿರುವ ಬಗ್ಗೆ ಮತ್ತು ದೇವರ ಕಾಡು ನಾಶದ ಬಗ್ಗೆ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮತ್ತು ನಾಗೇಶ್ ಭಟ್ ಜಿಲ್ಲಾಧಿಕಾರಿ ಗಮನ ಸೆಳೆದರು.

ಕಲ್ಸಂಕ ಸೇತುವೆ ಕಾಮಗಾರಿ ವೀಕ್ಷಣೆ ನಡೆಸಿದ ಅವರು ತ್ವರಿತ ಕಾಮಗಾರಿಗೆ ಆದೇಶಿಸಿದರು.

ಈ ಸಂದರ್ಭ ಅಪರ ಡಿಸಿ ಸದಾನಂದ ಪ್ರಭು, ಆರ್‍ಐ ರವಿಶಂಕರ್, ಸೀನಿಯರ್ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಿಶರೀಸ್ ಪಾಶ್ರ್ವನಾಥ್, ಅಸಿಸ್ಟೆಂಟ್ ಡೈರೆಕ್ಟರ್ ಕಿರಣ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದ್ಯಮಿ ಮಿಥುನ್ ಆರ್.ಹೆಗ್ಡೆ, ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ, ಪಲಿಮಾರು ಗ್ರಾಪಂ ಪಿಡಿಒ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.