ಪಡುಬಿದ್ರಿ ಗ್ರಾಪಂನ 2019-20ನೇ ಸಾಲಿನ ಪ್ರಥಮ ಗ್ರಾಮಸಭೆ

ಕಕ್ಕಸು ತ್ಯಾಜ್ಯ ನೀರು ಸಂಗ್ರಹದಿಂದ ಮುಟ್ಟಳಿವೆ ಮೀನುಗಳ ಸಾವಿಗೆ ಕಾರಣ

ಪಡುಬಿದ್ರಿ ಗ್ರಾಮ ಸಭೆಯಲ್ಲಿ ಮೀನುಗಾರಿಕಾ ಇಲಾಖಾಧಿಕಾರಿ ಕಿರಣ್ ಸ್ಪಷ್ಟನೆ
ಪಡುಬಿದಿ: ಇತ್ತೀಚೆಗೆ ಮಳೆಗಾಲದ ಆರಂಭದ ದಿನಗಳಲ್ಲಿ ಮುಟ್ಟಳಿವೆ ಕಡಿದ ಸಂದರ್ಭ ಹಿನ್ನೀರಿನಲ್ಲಿ ಸಹಸ್ರಾರು ಮೀನುಗಳು ಸತ್ತು ಮೀನುಗಾರರು ಮತ್ತು ಕೃಷಿಕರು ಸಂಕಷ್ಟಕ್ಕೀಡಾದ ಘಟನೆಗೆ ಸಂಬಂಧಿಸಿ ಈವರೆಗೂ ಸರಕಾರದ ವರದಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರನೇಕರು ಗ್ರಾಮಸಭೆಯಲ್ಲಿ ಸ್ಪಷ್ಟೀಕರಣ ಬಯಸಿದ ಸಂದರ್ಭ ಕಾಮಿನಿ ಹೊಳೆಯಲ್ಲಿ ಸಂಗ್ರಹವಾದ ಕಕ್ಕಸು ತ್ಯಾಜ್ಯ ಸಹಿತ ಇತರ ತ್ಯಾಜ್ಯಗಳ ಹೆಚ್ಚಳದಿಂದ ಮೀನುಗಳ ಮಾರಣಹೋಮವಾಗಿದೆ ಎಂದು ಮೀನುಗಾರಿಕಾ ಇಲಾಖಾಧಿಕಾರಿ ಕಿರಣ್ ಸ್ಪಷ್ಟನೆ ನೀಡಿದರು.

ಪಡುಬಿದ್ರಿ ಗ್ರಾಪಂನ 2019-20ನೇ ಸಾಲಿನ ಪ್ರಥಮ ಗ್ರಾಮಸಭೆಯು ಗುರುವಾರ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಈ ಬಗ್ಗೆ ವಿಸ್ತøತ ಚರ್ಚೆ ನಡೆಯಿತು.

ಶಾಸಕ ಲಾಲಾಜಿ ಆರ್.ಮೆಂಡನ್ ಉಪಸ್ಥಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮುಟ್ಟಲಿವೆ ಮೀನುಗಳ ದಾರುಣ ಸಾವು ಮತ್ತು ಕೃಷಿ ನಾಶದ ಬಗ್ಗೆ ಮೀನುಗಾರರು ಮತ್ತು ಕೃಷಿಕರು ಘಟನೆಗೆ ಕಾರಣವೇನೆಂದು ತಿಳಿಯಬಯಸಿದರು.

ಶಾಸಕರು ಈ ಬಗ್ಗೆ ಇಲಾಖಾಧಿಕಾರಿಗಳಿಗೆ ದೂರವಾಣಿ ಮೂಲಕ ಬರಹೇಳಿ ಸ್ಪಷ್ಟನೆ ಬಯಸಿದರು. ಸಿಎಮ್‍ಎಫ್‍ಆರ್‍ಐ, ಮೀನುಗಾರಿಕಾ ಕಾಲೇಜು ಮತ್ತು ಪರಿಸರ ಇಲಾಖೆ ಪ್ರತ್ಯೇಕವಾಗಿ ಪ್ರಯೋಗಾಲದಲ್ಲಿ ಇಲ್ಲಿನ ನೀರನ್ನು ಕೊಂಡೊಯ್ದು ಪರಿಶೀಲಿಸಿದ್ದು, ಎಲ್ಲಾ ವರದಿಗಳಲ್ಲಿ ಕಾಮಿನಿ ಹೊಳೆಯಲ್ಲಿ ಸಂಗ್ರಹಗೊಂಡ ಕಕ್ಕಸು ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳು ಹೆಚ್ಚಾಗಿ ಸಂಗ್ರಹಗೊಂಡ ಕಾರಣದಿಂದ ಮೀನುಗಳು ಸತ್ತುಹೋಗಿದ್ದಾಗಿ ತಿಳಿಸಲಾಯಿತು. ಅಳಿವೆ ಬಾಗಿಲಲ್ಲಿ ತ್ಯಾಜ್ಯ ನೀರುಗಳು ಸಮುದ್ರ ಸೇರುವ ಸಂದರ್ಭ ಸಲ್ಫೇಟ್, ಅಮೋನಿಯಾ ಮತ್ತು ಬ್ಯಾಕ್ಟೀರಿಯಾ ಸಂಗ್ರಹಗೊಂಡು ಈ ಅವಗಢ ಸಂಭವಿಸಿದ್ದಾಗಿ ಕಿರಣ್ ಮಾಹಿತಿ ನೀಡಿದರು.

ಪಡುಬಿದ್ರಿ ಗ್ರಾಪಂ ಕಟ್ಟಡ ಕಾಮಗಾರಿ ವಿಳಂಬ: ಅದಾನಿ-ಯುಪಿಸಿಎಲ್ ಅನುದಾನದಿಂದ ಪಡುಬಿದ್ರಿ ಗ್ರಾಪಂ ಕಚೇರಿ ಕಟ್ಟಡ ಕಾಮಗಾರಿ ವಿಳಂಬವಾದ ಬಗ್ಗೆ ವರದಿಯ ಉಲ್ಲೇಖವನ್ನು ಉದ್ದೇಶಿಸಿ ಗ್ರಾಮಸ್ಥರಾದ ರಾಮಚಂದ್ರ ಆಚಾರ್ಯ ಸ್ಪಷ್ಟನೆ ಬಯಸಿ ವರದಿ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು. ಅದಾನಿಯ ಸಿಎಸ್‍ಆರ್ ನಿಧಿ 2.77 ಕೋಟಿ ರೂ. ಅನುದಾನ ನಿಡಬೇಕಿದ್ದು, ಈ ಪೈಕಿ 50 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗೆ ಬಳಸಬೇಕಿತ್ತು. ಆದರೆ ಕಟ್ಟಡ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಎರಡೂವರೆ ವರ್ಷ ಕಳೆದರೂ ಕಾಮಗಾರಿ ವಿಳಂಬದ ಬಗ್ಗೆ ಸ್ಪಷ್ಟನೆ ಬಯಸಿದರು. ಈ ಬಗ್ಗೆ ಸ್ಪಷ್ಟನೆ ನೀಡದೆ ವರದಿ ಅಂಗೀಕಾರಕ್ಕೆ ತಮ್ಮ ವಿರೋಧವಿದೆ ಎಂದರು.

ಈ ಸಂದರ್ಬ ಮಾತನಾಡಿದ ಶಾಸಕ ಮೆಂಡನ್, ಕೆಐಆರ್‍ಡಿಎಲ್ ನಿಧಿ 10 ಲಕಷ ರೂ. ಅನುದಾನವನ್ನು ಕಟ್ಟಡ ಕಾಮಗಾರಿಗೆ ನೀಡುವುದಾಗಿ ತಿಳಿಸಿದರು.

ಈ ಭಾಗದ ಟೋಲ್, ಹೆದ್ದಾರಿ, ಬಂದರು, ಎಸ್‍ಎಲ್‍ಆರ್‍ಎಮ್ ಘಟಕ ಇತ್ಯಾದಿ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಶೀಘ್ರ ಜಿಲ್ಲಾಧಿಕಾರಿಯವರು ಇಲ್ಲಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಲಿದ್ದಾರೆ ಎಂದು ಮೆಂಡನ್ ಹೇಳಿದರು. ಅದೇ ರೀತಿ ಮೀನುಗಾರಿಕೆ ಮತ್ತು ಪರಿಸರ ಇಲಾಖಾಧಿಕಾರಿಗಳನ್ನು ಕರೆಸಿ ಹತ್ತು ದಿನದೊಳಗೆ ಸಾರ್ವಜನಿಕ ಸಭೆ ನಡೆಸುವುದಾಗಿಯೂ ತಿಳಿಸಿದರು. ಮುಖ್ಯ ಸಮಸ್ಯೆಯಾದ 94ಸಿ ಹಕ್ಕುಪತ್ರ ವಿಳಂಬ ಬಗ್ಗೆ ಪಡುಬಿದ್ರಿಯಲ್ಲಿ ಶೀಘ್ರ ಜನಸ್ಪಂದನ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದರು.

ಮಧ್ಯಂತರ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳಲ್ಲಿ ಕಾಪು ಕ್ಷೇತ್ರಾಭಿವೃದ್ಧಿಗೆ 10 ಕೋಟಿ ರೂ. ಬೇಡಿಕೆ ಇಟ್ಟಿದ್ದು, ಬಹುತೇಕ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ಗ್ರಾಮಾಭಿವೃದ್ಧಿಗೆ ಯುಪಿಸಿಎಲ್ ಹೆಚ್ಚು ಅನುದಾನ ನೀಡಬೇಕು. ಪಡುಬಿದ್ರಿ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಶೀತಲೀಕರಣ ಘಟಕ ಸ್ಥಾಪನೆಗೆ ಖಾಸಗಿ ಅನುದಾನದ ಅಗತ್ಯವಿದೆ ಎಂದರು.

ಈ ಸಂದರ್ಭ ಮಾತನಾಡಿದ ಪಡುಬಿದ್ರಿ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ವಿವಿಧ ಅನುದಾನ ಬಳಸಿ ಮುಂದಿನ ಅಕ್ಟೋಬರ್ ಒಳಗೆ ಗ್ರಾಪಂ ಕಟ್ಟಡ ಕಾಮಗಾರಿ ಪೂರೈಸಲಾಗುವುದು. ಎಸ್‍ಎಲ್‍ಆರ್‍ಎಮ್ ಘಟಕದಿಂದ ಸಮಸ್ಯೆ ಇದ್ದು, ಸರಕಾರ ಸುಜ್ಲಾನ್ ಕಾಲನಿ ಬಳಿ ಲಭ್ಯ ಇರುವ ಜಾಗ ನೀಡಿದಲ್ಲಿ ಘಟಕವನ್ನು ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.

ಮರ್ಕೆಟ್ ಬಳಿ ತ್ಯಾಜ್ಯ ಸಂಗ್ರಹದಿಂದ ತೀವ್ರ ಸಮಸ್ಯೆಯಾಗುತ್ತಿರುವ ಬಗ್ಗೆ ಲೋಕೇಶ್ ಕಂಚಿನಡ್ಕ ಗಮನ ಸೆಳೆದು ವೈದ್ಯಾಧಿಕಾರಿ ಡಾ.ಬಿಬಿರಾವ್‍ರಿಂದ ಸ್ಪಷ್ಟನೆ ಬಯಸಿದರು. ಈ ಬಗ್ಗೆ ಗ್ರಾಪಂ ಮತ್ತು ಇಲಾಖೆಗಳಿಗೆ ದೂರು ನೀಡಿದ್ದಾಗಿ ಉತ್ತರಿಸಿದರು. ದಮಯಂತಿ ಅಮೀನ್ ಉತ್ತರಿಸಿ, ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿ ಕಾರ್ಯಯೋಜನೆ ಹಮ್ಮಿಕೊಂಡಿದ್ದಾಗಿ ಭರವಸೆ ನೀಡಿದರು.

ಗ್ರಾಮಸಭೆಯ ಸ್ಥಳ ಬದಲಾವಣೆ ಬಗ್ಗೆ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸ್ಪಷ್ಟನೆ ಬಯಸಿ, ಹಲವು ಗ್ರಾಮಸಭೆಗಳಲ್ಲಿ ಈ ಬಗ್ಗೆ ಆಗ್ರಹಿಸಿದ್ದರೂ ಸ್ಥಳ ಬದಲಾವಣೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಮುಂದಿನ ಬಾರಿ ಸ್ಥಳ ಬದಲಾವಣೆಯ ಭರವಸೆ ದೊರೆಯಿತು.
ಸರಕಾರದ ಆದೇಶದಂತೆ ಎಸ್‍ಸಿ.ಎಸ್‍ಟಿ ಗ್ರಾಮ ಸಭೆ ನಡೆಸದ ಬಗ್ಗೆ ರಾಜೇಶ್ ಪಡುಬಿದ್ರಿ ಮಾಹಿತಿ ಕೇಳಿದರು. ಶೀಘ್ರ ಗ್ರಾಮಸಭೆ ನಡೆಸುವ ಭರವಸೆ ದೊರೆಯಿತು.

ಪ್ಲಾಸ್ಟಿಕ್ ತ್ಯಾಜ್ಯ, ಮೆಸ್ಕಾಂ ಕಛೇರಿಯ ಸ್ಥಳಾಂತರ, ಗಾಂಜಾ ಸಮಸ್ಯೆ, ಇಲಾಖಾಧಿಕಾರಿಗಳ ಗೈರು, ಸಂತೆ ಮಾರ್ಕೆಟ್‍ನಲ್ಲಿ ಸಂತೆ ದಿನ ಅಡ್ಡಾದಿಡ್ಡಿ ವಾಹನ ನಿಲುಗಡೆ, ರಸ್ತೆ ದುರಸ್ತಿ, ಕುಡಿಯುವ ನೀರು, ಇತ್ಯಾದಿ ಸಮಸ್ಯೆಗಳ ಬಗ್ಗೆ ಅನೇಕರು ಗಮನ ಸೆಳೆದರು.

ವಿವಿಧ ಇಲಾಖಾಧಿಕಾರಿಗಳಾದ ಡಾ.ಬಿ.ಬಿ.ರಾವ್( ಆರೋಗ್ಯ), ಶಕುಂತಳಾ( ಮಹಿಳಾ ಮತ್ತು ಶಿಶು ಕಲ್ಯಾಣ), ಪುಷ್ಪಲತಾ(ಕೃಷಿ), ಶ್ವೇತಾ ಹಿರೇಮಠ(ತೋಟಗಾರಿಕೆ), ಕವಿತಾ( ಶಿಕ್ಷಣ), ಶಿವಪುತ್ರಯ್ಯ ಗುರುಸ್ವಾಮಿ( ಪಶು ಸಂಗೋಪನೆ), ಸುರೇಶ್ ರಾವ್(ಪೋಲಿಸ್), ಸುಧೀರ್ ಪಠೇಲ್(ಮೆಸ್ಕಾಂ), ಅಭಿಲಾಶ್(ಅರಣ್ಯ), ಕಿರಣ್(ಮೀನುಗಾರಿಕೆ) ಇಲಾಖಾ ಮಾಹಿತಿ ನೀಡಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದಯಾನಂದ ಪೈ ನೋಡಲ್ ಅಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯ ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ಸ್ವಾಗತಿಸಿ ವರದಿ ಮಂಡಿಸಿದರು. ಲೆಕ್ಕ ಸಹಾಯಕಿ ರೂಪಲತಾ ವಂದಿಸಿದರು.