ಬಸ್ ತಂಗುದಾಣಕ್ಕೆ ನುಗ್ಗಿದ ಕಾರು: 3 ಮಕ್ಕಳ ಸಹಿತ 7 ಮಂದಿಗೆ ಗಾಯ

ಪಡುಬಿದ್ರಿ: ಜನನಿಬಿಡ ಪಡುಬಿದ್ರಿ ಬಸ್ಸು ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದವರ ಮೇಲೆ ಕಾರು ನುಗ್ಗಿ 7 ಮಂದಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಪಡುಬಿದ್ರಿಯ ಕಾರ್ಕಳ ರಸ್ತೆಯ ಮೂಲಕ ಪಡುಬಿದ್ರಿಗೆ ಬಂದಿದ್ದ ಕಾರೊಂದು ಅದರ ಚಾಲಕ ತಾನು ಬ್ರೇಕ್ ಬದಲು ಎಕ್ಸ್‍ಲೇಟರ್ ಅದುಮಿದ ಪರಿಣಾಮವಾಗಿ ಉಡುಪಿ ಬಸ್ ತಂಗುದಾಣ ಮತ್ತು ಅದರ ಬಳಿಯಲ್ಲಿನ ಪಾನ್‍ವಾಲಾನ ಡಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸುಗಳಿಗಾಗಿ ಪಡುಬಿದ್ರಿಯ ತಾತ್ಕಾಲಿಕ ಬಸ್ ತಂಗುದಾಣದಲ್ಲಿ ಕಾಯುತ್ತಿದ್ದ ಮೂರು ಮಕ್ಕಳ ಸಹಿತ ಪಾನ್‍ವಾಲನೂ ಸೇರಿದಂತೆ ಏಳು ಮಂದಿಗೆ ಗಾಯಗೊಂಡಿದ್ದಾರೆ.

ಪಡುಬಿದ್ರಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲಾ ಸಮೀಪದ ನಿವಾಸಿಗಳಾದ ರಿಜಾನ್(3), ರಿಯಾನ್(5, 1/2), ರಮ್ಲತ್(29), ಜೈನಾಬಿ(38), ರಫೀಜಾ(18) ಮಂಗಳೂರಿನ ಬಾಲಕ ಯಶಸ್ಸ್(8) ಹಾಗೂ ಉತ್ತರಪ್ರದೇಶ ಮೂಲದ ಪಾನ್‍ವಾಲಾ ಗೊಳೇಲ್ ಯಾದವ್(34) ಗಾಯಗೊಂಡವರು.

ಇವರೆಲ್ಲರಿಗೂ ಪಡುಬಿದ್ರಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳೆಲ್ಲರೂ ಪಾನ್‍ವಾಲಾನ ಹೊರತಾಗಿ ಕಾಪು ಮತ್ತು ಕುತ್ಯಾರಿಗೆ ಹೋಗಲು ಬಸ್‍ಗಾಗಿ ಕಾಯುತ್ತಿದ್ದರು.

ಬಸ್ಸು ತಂಗುದಾಣದ ಬಳಿಯ ಪಾನ್‍ವಾಲಾ ಗೊಳೇಲ್ ಭಾಯಿ ಅವರ ಡಬ್ಬವಲ್ಲದಿದ್ದರೆ ಇನ್ನಷ್ಟು ಮಂದಿಗೆ ಗಾಯಗಳಾಗುವ ಸಂಭವವಿತ್ತು ಎಂಬುದಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಪಡುಬಿದ್ರಿ ಪೆÇಲೀಸರು ತಿಳಿಸಿದ್ದಾರೆ. ಕಾರು ಚಾಲಕ ಪಲಿಮಾರು ಕರ್ನಿರೆಯವರೆನ್ನಲಾಗಿದ್ದು ಅವರು ಮೀನು ಖರೀದಿಸಲು ಮನೆ ಮಂದಿಯೊಂದಿಗೆ ಪಡುಬಿದ್ರಿಗೆ ಬಂದಿದ್ದರು. ಅಪಘಾತವಾದ ಕೂಡಲೇ ಪಡುಬಿದ್ರಿ ಠಾಣೆಗೆ ಬಂದು ಶರಣಾಗಿದ್ದ ಇವರು ಠಾಣೆಗೆ ಮೊದಲ ಮಾಹಿತಿಯನ್ನೂ ನೀಡಿದ್ದರು.