2021 ಶೈಕ್ಷಣಿಕ ವರ್ಷದಲ್ಲಿ ಬೆಳಪು ಸ್ನಾತಕೋತ್ತರ ತರಗತಿ ಆರಂಭ

ಕಾಮಗಾರಿ ಪ್ರಗತಿ ಪರಿಶೀಲನಾ ಸಂದರ್ಭ ಮಂಗಳೂರು ವಿವಿ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭರವಸೆ

ಪಡುಬಿದ್ರಿ ಬೆಳಪುವಿನಲ್ಲಿ ಸ್ಥಾಪನೆಯಾಗಲಿರುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಉದ್ದೇಶಿತ ಕಾಮಗಾರಿಯು ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದ್ದು, 2021 ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭರವಸೆ ನೀಡಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯದ ಬಹು ನಿರೀಕ್ಷಿತ ಬೆಳಪು ಗ್ರಾಮದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕಾಮಗಾರಿ ಪ್ರಗತಿ ಪರಿಶೀಲನೆಗಾಗಿ ಶುಕ್ರವಾರ ಬೆಳಪುವಿಗೆ ಆಗಮಿಸಿದ ಸಂದರ್ಭ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಬೆಳಪು ಗ್ರಾಪಂ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿಯವರ ವಿಶೇಷ ಮುತುವರ್ಜಿಯಿಂದ ಯೋಜನೆಯು ಬೆಳಪುವಿಗೆ ದಕ್ಕಿದ್ದು, ನಿರಂತರ ಅನುದಾನ ಬಿಡುಗಡೆಗಾಗಿ ಶ್ರಮಿಸುತ್ತಿದ್ದಾರೆ. ಸೂಕ್ತ ಅನುದಾನ ಕೊರತೆಯಿಂದ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಉಪಕುಲಪತಿಗಳ ಭೇಟಿಗೆ ಮನವಿ ಮಾಡಿಕೊಂಡಿದ್ದರು.

ಶುಕ್ರವಾರ ಕಾಮಗಾರಿಗೆ ಸಂಬಂಧಿಸಿದ ವಿವಿಧ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಗೊಂದರಂತೆ ವಿಶ್ವವಿದ್ಯಾನಿಲಯ ನೀಡಬೇಕೆನ್ನುವ ಉದ್ದೇಶಕ್ಕೆ ಪೂರಕವಾಗಿ ಬೆಳಪು ಸಂಶೋಧನಾ ಕೇಂದ್ರ ನಿರ್ಮಾಣವಾಗುತ್ತಿದೆ. ಅತ್ಯಂತ ತುರ್ತಾಗಿ ಸ್ನಾತಕೋತ್ತರ ವಿಭಾಗವನ್ನು ಆರಂಭಿಸಲು ಚಿಂತನೆ ನಡೆದಿದೆ. ಆ ಬಳಿಕವಷ್ಟೇ ವಿಜ್ಞಾನ ಸಂಶೋಧನಾ ಕೇಂದ್ರ ಕಾರ್ಯಾರಂಭಗೊಳ್ಳಲಿದೆ. ಕಟ್ಟಡ ಕಾಮಗಾರಿಗಳಿಗಾಗಿ ಈಗಾಗಲೇ 33 ಕೋಟಿ ಅನುದಾನ ಬಿಡಗಡೆಯಾಗಿದೆ. ಆದರೆ ಈ ಪೈಕಿ 10 ಕೋಟಿ ರೂ. ಮಾತ್ರ ಸಂದಾಯವಾಗಿದೆ. ಉಳಿದ ಅನುದಾನ ಏನಾಗಿದೆ ಎಂಬ ಬಗ್ಗೆ ಆಂತರಿಕ ಪರಿಶೀಲನೆ ನಡೆಸಲಾಗುವುದು. ಕಟ್ಟಡ ಕಾಮಗಾರಿಗೆ ಬಿಡುಗಡೆಯಾದ ಅನುದಾನ ಅದಕ್ಕೇ ಬಳಕೆಯಾಗಬೇಕಿದೆ. ಅದನ್ನು ಬೇರೆಡೆ ಬಳಕೆ ಮಾಡುವಂತಿಲ್ಲ ಎಂದವರು ಹೇಳಿದರು.

ಬೆಳಪುವಿಗೆ ಪ್ರಥಮ ಆದ್ಯತೆ: ಬೆಳಪು ಕೇಂದ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆರಂಭಿಕವಾಗಿ ನೀಡಲಾದ ಜಾಗಗಳಿಗೆ ಸುತ್ತ ಆವರಣ ಗೋಡೆಯ ಅತ್ಯವಶ್ಯವಾಗಿದೆ. ಎರಡನೇ ಹಂತದಲ್ಲಷ್ಟೇ ಆವರಣೆ ಗೋಡೆಗೆ ಪ್ರಾಶಸ್ತ್ಯ ನೀಡಲಾಗುವುದು. ಹೌಸಿಂಗ್ ಬೋರ್ಡ್‍ನವರು ನವೆಂಬರ್ 30ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಅಷ್ಟರಲ್ಲಿ ಸ್ನಾತಕೋತ್ತರ ವಿಭಾಗ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರ ಆರಂಭಕ್ಕೆ ಮುಂದಡಿ ಇಡಲಾಗುವುದು. ಸರಕಾರದ ಅನುದಾನ ಒದಗಿಸಿದಲ್ಲಿ ದ್ವಿತೀಯ ಹಂತದ ಕಾಮಗಾರಿಯೂ ಶೀಘ್ರ ಪ್ರಾರಂಭಗೊಳ್ಳಲಿದೆ. ಸರಕಾರವು ಎಲ್ಲವನ್ನೂ ಭರಿಸದು. ದ್ವಿತೀಯ ಹಂತದಲ್ಲಿ ಸಂಪನ್ಮೂಲ ಕ್ರೋಢೀಕರಣದ ಅಗತ್ಯವೂ ಇದೆ. ಆವರಣ ಗೋಡೆ ನಿರ್ಮಾಣಕ್ಕೆ 2.64 ಕೋಟಿ ರೂ.ಗಳ ಅಗತ್ಯವಿದೆ. ಸರಕಾರದಿಂದ ಅನುದಾನ ತರಲೂ ಕಷ್ಟಕರವಾಗಿದೆ. ಸ್ಥಳೀಯ ಮುಖಂಡರೂ ಇದಕ್ಕೆ ಸಹಕರಿಸಬೇಕಿದೆ ಎಂದರು.

ಮಂಗಳೂರು ವಿವಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಉಮೇಶ್ ಭಟ್ ನಿವೇಶನ ಪರಿಶೀಲನೆಯ ಸಮಗ್ರ ವರದಿ ಒಪ್ಪಿಸಿದರು.

ಆರಂಭಿಕವಾಗಿ ಮಾತನಾಡಿದ ಡಾ.ದೇವಿಪ್ರಸಾದ್ ಶೆಟ್ಟಿ, ಬೆಳಪು ಗ್ರಾಮವನ್ನು ಶೈಕ್ಷಣಿಕ ಕೇಂದ್ರವನ್ನಾಗಿಸುವ ಉದ್ದೇಶದಿಂದ ವಿಶೇಷ ಮುತುವರ್ಜಿ ವಹಿಸಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ತರಲಾಗಿದೆ. ಅನುದಾನಗಳ ವಿಳಂಬ ಪಾವತಿಯಿಂದ ಕಾಮಗಾರಿಗೆ ತೊಡಕಾಗಿದೆ. ಈಗಾಗಲೇ 20 ಎಕ್ರೆ ಜಾಗ ನೀಡಿದ್ದು, ಮತ್ತೆ 11 ಎಕ್ರೆ ಜಾಗವನ್ನು ಕೇಂದ್ರಕ್ಕಾಗಿ ಮೀಸಲಿಡಲಾಗಿದೆ. ಇಂದಿನ ವಿವಿ ಉಪಕುಲಪತಿಗಳ ಮುತುವರ್ಜಿಯಿಂದಲೇ ಗ್ರಾಮಕ್ಕೆ ಕೇಂದ್ರ ದೊರಕಿದೆ. ಅವರೇ ಮುಂದೆ ನಿಂತು ಶೀಘ್ರ ಕೇಂದ್ರ ಆರಂಭಕ್ಕೆ ಮುತುವರ್ಜಿ ವಹಿಸಬೇಕೆಂದರು.

ಮಂಗಳೂರು ವಿವಿ ಕುಲ ಸಚಿವರಾದ ಕೆ.ಎಮ್.ಖಾನ್, ಡೆಪ್ಯುಟಿ ರಿಜಿಸ್ಟ್ರಾರ್ ಉಕ್ರಪ್ಪ ನಾಯಕ್, ಹೌಸಿಂಗ್ ಬೋರ್ಡ್ ಎಇಇ ಅನಿಲ್ ಕುಮಾರ್ ಸಂಕೊಳ್ಳಿ, ಗುತ್ತಿಗೆದಾರ ವಾಸುದೇವ ಶೆಟ್ಟಿ, ವಾಸ್ತುಶಿಲ್ಪಿ ಎನ್.ಎನ್.ಭಟ್, ಪ್ರಾಜೆಟ್ಕ್ ಮ್ಯಾನೇಜರ್ ಕೆ.ವಿಜಯ ಕುಮಾರ್, ಬೆಳಪು ಗ್ರಾಪಂ ಪಿಡಿಒ ಪಿ.ಆರ್.ರಮೇಶ್ ಉಪಸ್ಥಿತರಿದ್ದರು.
ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿ ವಂದಿಸಿದರು.