ಹೊಸ ವರ್ಷದಲ್ಲಿ ಕೋಡಿ ಕ್ರಿಕೆಟರ್ಸ್ ವತಿಯಿಂದ 127 ಮಂದಿ ರಕ್ತದಾನ

ಪಡುಬಿದ್ರಿ: ಕಳೆದ ಹತ್ತು ವರ್ಷಗಳಿಂದ ಯುವ ಜನತೆ ಹೊಸ ವರ್ಷದ ಅಂಗವಾಗಿ ಮದ್ಯಪಾನ ಮಾಡದಿರಲು ಪ್ರೇರೇಪಿಸುವಂತೆ ಜನವರಿ ಒಂದರ ಬೆಳಿಗ್ಗೆ ನಿರಂತರ ರಕ್ತದಾನ ಶಿಬಿರ ನಡೆಸುತ್ತಾ ಬಂದಿರುವ ಹೆಜಮಾಡಿ ಕೋಡಿಯ ಕೋಡಿ ಕ್ರಿಕೆಟರ್ಸ್‍ನ 127 ಸದಸ್ಯರು ಈ ಬಾರಿ ರಕ್ತದಾನಗೈಯ್ಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್‍ರವರು ಹತ್ತು ವರ್ಷಗಳ ಹಿಂದೆ ತಂಡದ ಸದಸ್ಯರನ್ನು ಒಗ್ಗೂಡಿಸಿ ಈ ಬಗ್ಗೆ ನಿರಂತರ ಸಭೆಗಳನ್ನು ನಡೆಸಿ ಜನವರಿ ಒಂದರಂದೇ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಮನವೊಲಿಸಿದ್ದರು. ಆರಂಭದಲ್ಲಿ ಸದಸ್ಯರನೇಕರು ವಿರೋಧ ವ್ಯಕ್ತಪಡಿಸಿದರೂ ರಕ್ತದಾನದ ಉಪಯುಕ್ತತೆಯನ್ನು ಮನಗಂಡು ಸರ್ವ ಸದಸ್ಯರೂ ರಕ್ತದಾನಕ್ಕೆ ಒಪ್ಪಿಗೆ ಸೂಚಿಸಿದ್ದರು.

ಆರಂಭದ ವರ್ಷಗಳಲ್ಲಿ ಹೆಚ್ಚು ರಕ್ತದಾನ ಮಾಡದಿದ್ದರೂ, ಬರಬರುತ್ತಾ ಸರ್ವ ಸದಸ್ಯರೊಂದಿಗೆ ಸಾರ್ವಜನಿಕರು, ಮಹಿಳೆಯರೂ ರಕ್ತದಾನಕ್ಕೆ ಒಲವು ತೋರಿಸಿದ್ದರು. ಇದರ ಫಲವಾಗಿ ಈ ಬಾರಿ 150ಕ್ಕೂ ಅಧಿಕ ಮಂದಿ ರಕ್ತದಾನಕ್ಕೆ ಉತ್ಸುಕರಾಗಿದ್ದು, ಕೆಲವು ತಾಂತ್ರಿಕ ದೊಷಗಳಿಂದಾಗಿ 127 ಮಂದಿ ರಕ್ತದಾನಗೈದಿದ್ದಾರೆ.

ಕೋಡಿ ಕ್ರಿಕೆಟರ್ಸ್, ಉಡುಪಿ ಮೊಗವೀರ ಯುವ ಸಂಘಟನೆ, ಅಂಬಲಪಾಡಿ ಜಿ.ಶಂಕರ್ ಫ್ಯಮಿಲಿ ಟ್ರಸ್ಟ್, ಮಣಿಪಾಲ ಕೆಎಮ್‍ಸಿ ಆಸ್ಪತ್ರೆ, ರಕ್ತನಿಧಿ ಕೇಂದ್ರ ಹಾಗೂ ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ಬುಧವಾರ ಹೆಜಮಾಡಿ ಕೋಡಿಯ ಮೀನುಗಾರಿಕಾ ಪ್ರೌಢ ಶಾಲೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಬೃಹತ್ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು, ಹೆಜಮಾಡಿ ಕೋಡಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಪಾಲ್ ಸುವರ್ಣ, ಕೋಡಿ ಕ್ರಿಕೆಟರ್ಸ್ ಅಧ್ಯಕ್ಷ ಸೀತಾರಾಮ ಬಂಗೇರ, ಕೆಎಮ್‍ಸಿ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಫಾತಿಮಾ, ಪ್ರೌಢ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಮಚಂದ್ರ ನಾಯಕ್, ಮೂಲ್ಕಿ ನಾಲ್ಕುಪಟ್ಣ ಮೊಗವೀರ ಸಭಾ ಪೂರ್ವಾಧ್ಯಕ್ಷ ಗುರುವಪ್ಪ ಕೋಟ್ಯಾನ್, ಸಣ್ಣಗುಂಡಿ ಮೊಗವೀರ ಸಭಾ ಅಧ್ಯಕ್ಷ ವಿಠಲ ಪುತ್ರನ್, ಗೌರವಾಧ್ಯಕ್ಷ ಹೇಮಾನಂದ ಪುತ್ರನ್, ಮುಂಬೈ ಮೊಗವೀರ ಬ್ಯಾಂಕ್ ನಿರ್ದೇಶಕ ಮುಖೇಶ್ ಬಂಗೇರ ಮುಖ್ಯ ಅತಿಥಿಗಳಾಗಿದ್ದರು. ವಿಜಯ್ ಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ಆಯುಷ್ಮಾನ್ ಕಾರ್ಡ್; ಕೋಡಿ ಕ್ರಿಕೆಟರ್ಸ್ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಶಿಬಿರದಲ್ಲಿ ಒಟ್ಟು 350 ಮಂದಿ ಆಯುಷ್ಮಾನ್ ಕಾರ್ಡ್ ನೊಂದಾಯಿಸಿದರು.

ಸಾರ್ವಜನಿಕ ಸತ್ಯನಾರಾಯಣ ಪೂಜೆ: ಇದೇ ಸಂದರ್ಭ ಕೋಡಿ ಕ್ರಿಕೆಟರ್ಸ್ ವತಿಯಿಂದ ಹತ್ತನೇ ವರ್ಷದ ಸಾರ್ವಜನಿಕ ಗಣಪತಿ ಹೋಮ, ಮತ್ತು ಶ್ರೀ ಸತ್ಯನಾರಾಯಣ ಪೂಜೆಯು ಹೆಜಮಾಡಿ ಕೋಡಿ ವಿದ್ಯಾಪ್ರಸಾರ ಹಳೆವಿದ್ಯಾರ್ಥಿ ಸಂಘದ ಮೈದಾನದಲ್ಲಿ ನಡೆಯಿತು. ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ, ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.