ಹೆದ್ದಾರಿ ಸುಂಕ ವಸೂಲಾತಿಗೆ ಜಿಲ್ಲಾಡಳಿತದ ಸಹಕಾರ ಅನಿವಾರ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ನವಯುಗ ಟೋಲ್ ಪ್ಲಾಝಾಗಳಲ್ಲಿ ಸುಂಕ ವಸೂಲಾತಿ(ಟೋಲ್ ಸಂಗ್ರಹ)ಕ್ಕಾಗಿ ಜಿಲ್ಲಾಡಳಿತವು ನವಯುಗ ಕಂಪೆನಿಗೆ ಸಹಕರಿಸುವುದು ಅನಿವಾರ್ಯ. ಅವರ ಕೆಲಸ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹಕ್ಕೆ ಕೇಂದ್ರ ಹೆದ್ದಾರಿ ಇಲಾಖೆ ಮತ್ತು ಎನ್‍ಎಚ್‍ಎಐಯು ಅನುಮತಿ ನೀಡಿದೆ. ಉಡುಪಿ ಜಿಲ್ಲಾಧಿಕಾರಿ ಮತ್ತು ಪೆÇಲೀಸ್ ಅಧೀಕ್ಷಕರು ತಮಗೆ ಸಹಕರಿಸುತ್ತಿಲ್ಲ ಎಂದು ರಾಜ್ಯ ಸರಕಾರಕ್ಕೆ ನವಯುಗ ಕಂಪೆನಿ ದೂರು ನೀಡಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಅವರು ಸೋಮವಾರ ಹೆಜಮಾಡಿಯ ಗ್ರಾಪಂನಲ್ಲಿ ಜಿಲ್ಲಾಡಳಿತದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಾಗ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ರಾಜ್ಯ ಸರಕಾರದ ವಿರುದ್ಧ ಆರ್‍ಬಿರ್ಟೇಶನ್‍ಗೂ ನವಯುಗ ಕಂಪೆನಿ ಅರ್ಜಿ ಹಾಕಿದ್ದು ಅದು ರುಜುವಾತಾದಲ್ಲಿ ಕೋಟಿಗಟ್ಟಲೆ ರಾಪಾಯಿಗಳನ್ನು ದಂಡನಾ ಮೊತ್ತವಾಗಿ ರಾಜ್ಯ ಸರಕಾರ ಪಾವತಿಸಬೇಕಾಗಿದೆ. ಅವರ ಹೆದ್ದಾರಿ ಚತುಃಷ್ಪಥ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ, ಜಿಲ್ಲಾಡಳಿತವು ಪದೇ ಪದೇ ಈ ಕುರಿತಾಗಿ ಸರಕಾರಕ್ಕೆ ವರದಿ ಮಾಡಿದ್ದರೂ ಆದೇಶದಂತೆ ಸ್ಥಳೀಯ ವಾಹನಗಳಿಂದಲೂ ಸುಂಕ ವಸೂಲಿಗೆ ಜಿಲ್ಲಾಡಳಿತವು ಈಗ ಸಹಕರಿಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಹೇಳಿದರು.

ಟೋಲ್ ಹಣ ನೇರ ಬ್ಯಾಂಕ್ ಖಾತೆಗೆ: ತಮಗೆ ಟೋಲ್ ಸಂಗ್ರಹದಲ್ಲಿ ಯಾವುದೇ ಪಾರಮ್ಯ ಇಲ್ಲ. ತಮ್ಮೆಲ್ಲಾ ಸುಂಕ ವಸೂಲಿ ಹಣವನ್ನು ಬ್ಯಾಂಕುಗಳೇ ನೇರ ವಸೂಲಾತಿಯನ್ನೂ ನಡೆಸುತ್ತಿವೆ ಎಂದು ನವಯುಗ ಕಂಪೆನಿಯು ಜಿಲ್ಲಾಡಳಿತಕ್ಕೆ ತಿಳಿಸಿದೆ ಎಂದವರು ಮಾಹಿತಿ ನೀಡಿದರು.

ಸರ್ವೀಸ್ ರಸ್ತೆಗಳ ಆಕ್ರಮಣ – ಜಿಲ್ಲಾ ಪೆÇಲೀಸ್ ವರಿಷ್ಟರ ಗಮನಕ್ಕೆ
ರಾಹೆ 66ರ ಕುಂದಾಪುರ ತಲಪಾಡಿವರೆಗಿನ ಕೆಲವೆಡೆ ಸರ್ವಿಸ್ ರಸ್ತೆಗಳನ್ನು ರಿಕ್ಷಾ ನಿಲ್ದಾಣವಾಗಿ ಪರಿವರ್ತಿಸಿರುವ ಬಗ್ಗೆ ಹಾಗೂ ಖಾಸಗಿ ವಾಹನಗಳೇ ಪಾರ್ಕಿಂಗ್ ಮಾಡುತ್ತಿರುವ ಬಗ್ಗೆ ಹಲವಾರು ಸಾರ್ವಜನಿಕ ದೂರುಗಳು ಬಂದಿವೆ. ಈ ಬಗ್ಗೆ ತಾನು ಜಿಲ್ಲಾ ಪೆÇಲೀಸ್ ಅಧೀಕ್ಷಕರ ಗಮನಕ್ಕೆ ತರುವುದಾಗಿಯೂ ಜಿಲ್ಲಾಧಿಕಾರಿ ಅವರು ಹೇಳಿದರು.

ಮಾತಿಗೆ ತಪ್ಪಿದರೆ ಉಗ್ರ ಹೋರಾಟ-ಡಾ.ದೇವಿಪ್ರಸಾದ್ ಶೆಟ್ಟಿ
ಹೋರಾಟ ಸಮಿತಿಗೆ ಭರವಸೆ ನೀಡಿದಂತೆ ಜಿಲ್ಲಾ ನೋಂದಣಿಯ ವಾಹನಗಳಿಂದ ಸುಂಕ ವಸೂಲಾತಿ ಮಾಡಿದಲ್ಲಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಉಭಯ ಜಿಲ್ಲಗಳ ಟೋಲ್‍ಗೇಟ್ ಹೋರಾಟಗಾರರ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.ನವಯುಗ ನಿರ್ಮಾಣ ಕಂಪೆನಿಯು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನೇ ಸಮರ್ಪಕವಾಗಿ ನಿರ್ವಹಿಸಿಲ್ಲ. ಕೇವಲ ಸಾರ್ವಜನಿಕ ಸುಲಿಗೆಗಾಗಿ ಟೋಲ್‍ಗೇಟ್ ನಿರ್ಮಿಸಿಕೊಂಡಿರುವ ಕಂಪೆನಿಗೆ ಸ್ಥಳೀಯ ವಾಹನಗಳ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತವು ಅನುಮತಿ ನೀಡಬಾರದು. ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹದ ಕುರಿತಾಗಿ ಯಾವತ್ತಿಗೂ ನಾವು ರಾಜಿ ಮಾಡಿಕೊಳ್ಳುವುದೇ ಇಲ್ಲ. ಈಗಾಗಲೇ ಈ ಜಿಲ್ಲೆಯ ಉಭಯ ಸಂಸದರೂ ಜನತೆಗೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ. ನವಯುಗ ನಿರ್ಮಾಣ ಕಂಪೆನಿಯೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಹಿಂದಿನ ಸಭೆಗಳಲ್ಲಿ ಒಪ್ಪಿಕೊಂಡಂತೆ ಮಾತು ಕೊಟ್ಟಿರುವುದನ್ನೆಲ್ಲವನ್ನೂ ಪಾಲಿಸಲಿ. ಇಲ್ಲವಾದಲ್ಲಿ ಈ ವಿರುದ್ಧದ ತಮ್ಮ ಹೋರಾಟ ಅನಿವಾರ್ಯವಾದೀತು ಎಂದು ಡಾ| ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.