ಹೆದ್ದಾರಿ ಸಮಸ್ಯೆಗಳ ಪರಿಶೀಲನೆ: ಶೀಘ್ರ ಸರಿಪಡಿಸುವುದಾಗಿ ಎನ್‍ಎಚ್‍ಐ ಪಿಡಿ ವಿಜಯ್ ಸ್ಯಾಮ್ಸನ್ ಭರವಸೆ

ಟೋಲ್ ವಿನಾಯಿತಿಗೆ ಆಗ್ರಹಿಸಿ

ಪಡುಬಿದ್ರಿ: ಕುಂದಾಪುರದ ಪ್ರಭಾರ ಸಹಾಯಕ ಕಮಿಶನರ್ ಅರುಣ್ ಪ್ರಭಾ,ಕಾಪು ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್,ಕಾಪು ಪುರಸಭಾ ಇಂಜಿನಿಯರ್ ಪ್ರತಿಮಾ, ಗ್ರಾಮಲೆಕ್ಕಿಗ ಶ್ಯಾಮ್‍ಸುಂದರ್ ಸಹಿತ ವಿವಿಧ ಅಧಿಕಾರಿಗಳು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್ ಸ್ಯಾಮ್ಸನ್, ನವಯುಗ ಯೋಜನಾಧಿಕಾರಿ ಶಂಕರ್ ರಾವ್,ರಾಘವೇಂದ್ರ,ಆರ್.ವಿ.ಅಸೋಸಿಯೇಟ್ಸ್‍ನ ಬಾಲಚಂದರ್,ಎನ್.ರಾಮಚಂದ್ರನ್,ಮಲ್ಲಿಕಾರ್ಜುನ ರಾವ್,ನವಯುಗ ಟೋಲ್ ಪ್ಲಾಝಾ ಪ್ರಬಂಧಕ ಶಿವಪ್ರಸಾದ ರೈ ಮತ್ತಿತರರ ಜತೆ ಹೆಜಮಾಡಿ,ಎರ್ಮಾಳು,ಉಚ್ಚಿಲ,ಕಾಪು,ಕಟಪಾಡಿ ಮತ್ತು ಬ್ರಹ್ಮಾವರ,ಸಾಸ್ತಾನ ಮುಂತಾದೆಡೆಗಳಲ್ಲಿ ಮಂಗಳವಾರ ಸಂಜೆ ಹೆದ್ದಾರಿ ಸಮಸ್ಯೆಗಳ ಪರಿಶೀಲನೆ ನಡೆಸಿದರು.
ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಸಭೆ ನಡೆಸಿ ತುರ್ತು ಸ್ಥಳ ಪರಿಶೀಲನೆಗೆ ಹೊರಟ ಅಧಿಕಾರಿಗಳ ತಂಡವು ಬಳಿಕ ಸ್ಥಳ ಪರಿಶೀಲನೆಗೆ ತೆರಳಿತು.

ಹೆಜಮಾಡಿಯ ಕನ್ನಂಗಾರು ಬಳಿ ಒಳ ರಸ್ತೆಗೆ ತೆರಳುವಲ್ಲಿ ಸರ್ವಿಸ್ ರಸ್ತೆಗಾಗಿ ಸ್ಥಳೀಯರು ಬೇಡಿಕೆ ಇಟ್ಟಿದ್ದು,ಶೀಘ್ರ ರಸ್ತೆ ನಿರ್ಮಿಸುವ ಭರವಸೆ ನೀಡಲಾಗಿತ್ತು.ಆದರೆ ಈವರೆಗೂ ರಸ್ತೆ ನಿರ್ಮಿಸಿಲ್ಲ.ಈ ಬಗ್ಗೆ ಅರುಣ್ ಪ್ರಭಾರವರು ಸ್ಪಷ್ಟೀಕರಣ ಬಯಸಿದರು.2 ತಿಂಗಳೊಳಗೆ ಪಶ್ಚಿಮ ಬದಿಯಲ್ಲಿ 500 ಮೀ.ಸರ್ವಿಸ್ ರಸ್ತೆ ನಿರ್ಮಿಸಿಕೊಡುವ ಭರವಸೆ ದೊರೆಯಿತು.ಎರಡೂ ಬದಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಕೇಳಿಕೊಂಡ ಮೇರೆಗೆ ಸ್ಥಳೀಯರಿಂದ ಬೇಡಿಕೆ ಬಂದರೆ ಪರಿಶೀಲಿಸುವ ಭರವಸೆ ನೀಡಲಾಯಿತು.

ಎರ್ಮಾಳು ತೆಂಕ ಬಳಿ ರಸ್ತೆ ಡಿವೈಡರ್ ಬೇಕೆಂದು ಕೇಳಿದ್ದು,ಅವಕಾಶವಿಲ್ಲ ಎಂದು ಶಂಕರ್ ರಾವ್ ಉತ್ತರಿಸಿದರು. ಈ ಬಗ್ಗೆ ಸಂಸದರು,ಶಾಸಕರ ಮೂಲಕ ಇಲಾಖೆಗೆ ಮನವಿ ಮಾಡಲಾಗುವುದು ಎಂದು ಅರುಣ್ ಪ್ರಬಾ ಹೇಳಿದರು.

ಉಚ್ಚಿಲದಲ್ಲಿನ ಅನಧಿಕೃತ ಕಟ್ಟಡಗಳ ತೆರವಿಗೆ ಕುಂದಾಪುರ ಸಹಾಯಕ ಕಮಿಶನರ್ ಸ್ವಯಂ ಒಂದು ವಾರಗಳ ಸಮಯಾವಕಾಶವನ್ನು ಅಂಗಡಿಗಳ ಮಾಲಕರಿಗೆ ನೀಡಿದ್ದು ಅದರೊಳಗೆ ತೆರವುಗೊಳಿಸದಿದ್ದಲ್ಲಿ ನವಯುಗ ನೆರವಿನೊಂದಿಗೆ ತಾವು ತೆರವುಗೊಳಿಸುವುದಾಗಿ ತಿಳಿಸಿದರು.ಈ ಸಂದರ್ಭ ಸ್ಥಳೀಯರೊಳಗೆ ಮಾತಿನ ಚಕಮಕಿ ನಡೆಯಿತು.

ಕಾಪುವಿನಲ್ಲಿನ ಸಮಸ್ಯೆಗಳ ಬಗೆಗೆ ಪುರಸಭಾ ಇಂಜಿನಿಯರ್ ಪ್ರತಿಮಾ ವಿವರಿಸಿದ್ದು ನವಯುಗ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸುವ ಭರವಸೆಯಿತ್ತಿದ್ದಾರೆ.ಕಟಪಾಡಿಯ ಸಮಸ್ಯೆಗಳನ್ನು ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಎನ್‍ಎಚ್‍ಎಐ ಹಾಗೂ ನವಯುಗ ಅಧಿಕಾರಿಗಳಿಗೆ ವಿವರಿಸಿದ್ದು ಕಲ್ಲಾಪು, ಬಿಸ್ಮಿಲ್ಲಾ ಹೊಟೇಲು ಬಳಿಯ ತೊಂದರೆಗಳನ್ನು ನಿವಾರಿಸಿಕೊಡುವುದಾಗಿ ನವಯುಗ ಅಧಿಕಾರಿಗಳು ಹೇಳಿದ್ದಾರೆ.ಮುಂದೆ ಸಹಾಯಕ ಕಮಿಶನರ್ ಅವರು ಈ ಕುರಿತಾದ ವರದಿಯೊಂದನ್ನು ತಯಾರಿಸಿ ಉಡುಪಿ ಜಿಲ್ಲಾಧಿಕಾರಿ, ಎನ್‍ಎಚ್‍ಎಐ, ನವಯುಗ ಕಂಪೆನಿಗಳಿಗೆ ಸಮಸ್ಯೆಗಳ ಶೀಘ್ರ ವಿಲೇವಾರಿಗಳಿಗಾಗಿ ರವಾನಿಸಲಿರುವುದಾಗಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಾಗಿ ಕಾದ ಟೋಲ್ ವಿರೋಧಿ ಹೋರಾಟಗಾರರು: ಪಡುಬಿದ್ರಿಯಲ್ಲಿ ಟೋಲ್ ವಿನಾಯಿತಿಗೆ ಆಗ್ರಹಿಸಿ ಟೋಲ್ ವಿರುದ್ಧ ಹೋರಾಟ ಹಮ್ಮಿಕೊಂಡಿರುವ ಹೋರಾಟಗಾರರು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳು ತಮ್ಮನ್ನು ಭೇಟಿ ಮಾಡಲಿದ್ದಾರೆಂದು ಕಾದು ಕುಳಿತಿದ್ದು,ಜಿಲ್ಲಾಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ಬುಧವಾರದಂದು ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.

ಫೋಟೋ:ಉಚ್ಚಿಲದಲ್ಲಿ ಅನಧಿಕೃತ ಕಟ್ಟಡಗಳಿಗೆ ತೆರಳಿ ವಾರದೊಳಗೆ ತೆರವುಗೊಳಿಸುವಂತೆ ಎಚ್ಚರಿಕೆ ನೀಡಲಾಯಿತು.