ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳ ಜೀರ್ಣೋದ್ಧಾರಪೂರ್ವಕ ಗ್ರಾಮ ಸಭೆ

ಪಡುಬಿದ್ರಿ: ಅತೀ ಪುರಾತನ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳವನ್ನು ಪುನರುಜ್ಜೀವನಗೊಳಿಸಲು ಹೆಜಮಾಡಿ ಗ್ರಾಮಸ್ಥರು ನಿರ್ಧರಿಸಿದ್ದು,2021ರ ವರ್ಷಾವಧಿ ಉತ್ಸವಕ್ಕೆ ಮುನ್ನ ದೇವಳ ಜೀರ್ಣೋದ್ಧಾರಕ್ಕೆ ಸಹಮತ ವ್ಯಕ್ತಪಡಿಸಲಾಗಿದೆ.

ಭಾನುವಾರ ಸಂಜೆ ದೇವಳದ ವಠಾರದಲ್ಲಿ ನೂತನ ಆಡಳಿತ ಸಮಿತಿಯು ಕರೆದ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಸಹಮತ ವ್ಯಕ್ತಪಡಿಸಲಾಯಿತು.ಇದರ ಪೂರ್ವಭಾವಿಯಾಗಿ ಜೀರ್ಣೋದ್ಧಾರ ಸಮಿತಿ ರಚನೆಗಾಗಿ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಸಮಿತಿಗೆ ಗ್ರಾಮದ ಸೌ ಸಮಾಜದ ಪ್ರಮುಖರನ್ನು ಹಾಗೂ ಸೇವಾ ಮನೋಭಾವವುಳ್ಳವರನ್ನು ಸೇರ್ಪಡೆಗೋಲಿಸಲಾಗುವುದು.ಈ ಬಗ್ಗೆ ಮೇ 25ರೊಳಗೆ ಎಲ್ಲಾ ಸಮಾಜದವರು ತಮ್ಮ ಆಯ್ಕೆಯ ಸದಸ್ಯರ ಪಟ್ಟಿಯನ್ನು ಆಡಳಿತ ಸಮಿತಿಗೆ ತಂದೊಪ್ಪಿಸುವಂತೆ ವಿನಂತಿಸಿದರು. ಈ ಬಗ್ಗೆ ಸರ್ವರಿಂದ ಸಹಮತ ವ್ಯಕ್ತವಾಯಿತು.
ಸಾರ್ವಜನಿಕರಿಂದ ಬಂದ ಪಟ್ಟಿಯನ್ನು ಪರಿಷ್ಕರಿಸಿ ನೂತನ ಸಮಿತಿ ರಚನೆ ಬಗ್ಗೆ ಜೂನ್ 5 ರಂದು ಮತ್ತೆ ಮಹಾಸಭೆ ಕರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.ಅಂದು 3 ಗಂಟೆಗೆ ದೇವಳದ ವಠಾರದಲ್ಲಿ ಮಹಾಸಭೆ ಕರೆದು ನೂತನ ಜೀರ್ಣೋದ್ಧಾರ ಸಮಿತಿ ರಚನೆಯಾಗಲಿದೆ.

ಪ್ರಶ್ನೆಯಲ್ಲಿ ತಿಳಿದುಬಂದಂತೆ ಅಜೀರ್ಣಾವಸ್ಥೆಯಲ್ಲಿರುವ ದೇವಳ ಪುನರುಜ್ಜೀವನಕ್ಕೆ ಗ್ರಾಮಸ್ಥರು ನಿರ್ಧರಿಸಿದ್ದು,ಪೂರಕವಾಗಿ ನೂತನ ಆಡಳಿತ ಮಂಡಳಿ ರಚನೆಯಾಗಿ ಕಳೆದ 6 ತಿಂಗಳಿಂದ ಆಡಳಿತ ನಡೆಸುತ್ತಿದೆ.ಗ್ರಾಮಸ್ಥರ ಒಗ್ಗೂಡುವಿಕೆಯಿಂದ ದೇವಳವನ್ನು ಸಮಗ್ರ ಜೀರ್ಣೋದ್ಧಾರಗೊಳಿಸಲು ಪ್ರತಿಯೊಬ್ಬರೂ ಬಯಸಿದ್ದಾರೆ. ಎರಡು ವರ್ಷದೊಳಗೆ ದೇವಳವನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರೆಲ್ಲರ ಸಹಕಾರದ ಅಗತ್ಯವಿದೆ ಎಂದು ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ ಹೇಳಿದರು.
ದೇವಳದ ಅರ್ಚಕ ರಾಮಚಂದ್ರ ಭಟ್,ಮೊಕ್ತೇಸರ ಶಂಕರ ಶೆಟ್ಟಿ ಪಠೇಲರ ಮನೆ,ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ವಾಮನ ಕೋಟ್ಯಾನ್ ನಡಿಕುದ್ರು ಅನಿಸಿಕೆ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್,ಅರ್ಚಕರಾದ ರಂಗಣ್ಣ ಭಟ್,ಶ್ರೀನಿವಾಸ ಆಚಾರ್ಯ, ಪದ್ಮನಾಭ ಭಟ್,ರಮೇಶ್ ಭಟ್, ಮೊಕ್ತೇಸರರುಗಳಾದ ಹರೀಶ್ ಶೆಣೈ,ಜಯಂತ್ ಪುತ್ರನ್,ಜಯಂತಿ ಆಚಾರ್ಯ, ಇಂದ್ರೇಶ್ ಸಾಲ್ಯಾನ್, ಗಣೇಶ್ ಆಚಾರ್ಯ, ಪಾಂಡುರಂಗ ಕರ್ಕೇರ, ರವೀಂದ್ರ ಕೋಟ್ಯಾನ್ ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ಸುರೇಶ್ ದೇವಾಡಿಗ ವರದಿ ವಾಚಿಸಿದರು.ಕೋಶಾಧಿಕಾರಿ ಶೇಷಗಿರಿ ರಾವ್ ಲೆಕ್ಕಪತ್ರ ಮಂಡಿಸಿದರು.ಮೊಕ್ತೇಸರ ಸಂಜೀವ ಟಿ.ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.