ಹೆಜಮಾಡಿ ಶಾಂಭವಿ ಅಳಿವಿ ಬಾಗಿಲ ಕಡಲ ತೀರ ತ್ಯಾಜ್ಯಮಯ ಸಮರೋಪಾದಿ ತ್ಯಾಜ್ಯ ನಿರ್ವಹಣೆಯ ಅಗತ್ಯ

ಅವಿಭಜಿತ ದಕ ಜಿಲ್ಲೆಯನ್ನು ವಿಭಜಿಸುವ ಶಾಂಭವಿ ಅಳಿವೆಯ ಹೆಜಮಾಡಿ ಕಡಲತೀರ ಸಂಪೂರ್ಣ ತ್ಯಾಜ್ಯಮಯವಾಗಿದ್ದು,ಬಾಟಲಿ,ಪ್ಲಾಸ್ಟಿಕ್,ಕಸಕಡ್ಡಿಗಳು ಮತ್ತು ರಬ್ಬರ್ ತ್ಯಾಜ್ಯಗಳು ಈ ಭಾಗದ ಸಂಪೂರ್ಣ ಕಡಲ ತೀರವನ್ನು ಆಕ್ರಮಿಸಿ ಪ್ರವಾಸಿಗರಿಗೆ ಅಸಹ್ಯವುಂಟು ಮಾಡುತ್ತಿದೆ.

ಪ್ರತೀಬಾರಿ ಮಳೆಗಾಲ ಮುಗಿಯುವ ಹಂತದಲ್ಲಿ ಹೊಳೆಯ ತ್ಯಾಜ್ಯಗಳು ಈ ಭಾಗದಲ್ಲಿ ಶೇಖರಣೆಯಾಗುತ್ತಿದ್ದು,ವಿಲೇವಾರಿ ಯಾರು ಮಾಡಬೇಕೆಂದು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಅತೀ ಹೆಚ್ಚು ಪ್ಲಾಸ್ಟಿಕ್ ಮತ್ತು ಬಾಟಲಿಗಳು ಸಂಗ್ರಹವಾಗಿದೆ.ಗುಜುರಿಯವರು ದಿನನಿತ್ಯ ಕೊಂಡೊಯ್ಯವಷ್ಟು ಕೊಂಡೊಯ್ದರೂ ರಾಶಿ ರಾಶಿ ಪ್ಲಾಸ್ಟಿಕ್ ಸಂಗ್ರಹವಾಗಿದೆ.ಔಷಧ, ಮದ್ಯ ಹಾಗೂ ಇನ್ನಿತರ ಬಾಟಲಿಗಳ ರಾಶಿಯೇ ಎದ್ದು ಕಾಣುತ್ತಿದೆ.ಚಪ್ಪಲಿ ಸಹಿತ ರಬ್ಬರ್ ತ್ಯಾಜ್ಯಗಳೂ ಸಾಕಷ್ಟು ಕಂಡುಬಂದಿದೆ.ಇದರ ಜತೆಗೆ ಕಸ ಕಡ್ಡಿಗಳು ಎಲ್ಲೆಂದರಲ್ಲಿ ಕಂಡುಬರುತ್ತಿದೆ.

ಸ್ವಚ್ಛ ಭಾರತ್ ಪರಿಕಲ್ಪನೆ ಸಾಕಾರಗೊಂಡು ವರ್ಷ ನಾಲ್ಕು ಕಳೆದರೂ ಸಮುದ್ರ ಮತ್ತು ಹೊಳೆಗೆ ಕಸ ಬಿಸಾಡುವವರ ಸಂಖ್ಯೆ ಅಧಿಕವಾಗುತ್ತಿರುವುದು ಈ ತ್ಯಾಜ್ಯ ರಾಶಿ ಕಂಡವರಿಗೆ ತಿಳಿದುಬರುತ್ತದೆ.ಶಾಂಭವಿ ಹೊಳೆಗಂಟ ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ ನಿರಂತರ ನಡೆಯುತ್ತಿದೆ.ಪಕ್ಕದ ಹೆಜಮಾಡಿಯಲ್ಲೂ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ.ಆದಾಗ್ಯೂ ಹೊಳೆಗೆ ಕಸ ಬಿಸಾಡುವವರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿರುವುದು ಈ ಕಸದ ರಾಶಿ ಕಂಡರೆ ಅರಿವಾಗುತ್ತದೆ.

ಸ್ವಚ್ಛ ಭಾರತ್ ಬಸ್‍ಸ್ಟ್ಯಾಂಡ್ ಸೀಮಿತ: ಹಲವು ಸಂಘ ಸಂಸ್ಥೆಗಳು ಹಲವಾರು ಬಾರಿ ಸ್ವಚ್ಛ ಭಾರತ್ ಕಾರ್ಯಕ್ರಮದಡಿ ಸ್ವಚ್ಛತಾ ಅಭಿಯಾನ ನಡೆಸುತ್ತಲೇ ಇದ್ದಾರೆ.ಆದರೆ ಅವರ ಪರಿಶ್ರಮ ಕೇವಲ ಬಸ್ಸು ನಿಲ್ದಾಣಗಳಿಗೆ ಸೀಮಿತವಾಗುತ್ತಿರುವುದು ವಿಪರ್ಯಾಸವೇ ಸರಿ.ನಗರ ಅಥವಾ ಗ್ರಾಮ ವ್ಯಾಪ್ತಿಯ ಒಳ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸದ ಕಾರಣ ಅಲ್ಲಿ ಕಸಗಳೂ ಮಳೆ ನೀರಿಗೆ ಸಮುದ್ರ ಸೇರಿ ಬಳಿಕ ಸಮುದ್ರ ತೀರದಲ್ಲಿ ಶೇಖರಣೆಗೊಳ್ಳುತ್ತದೆ.
ಮೂಲ್ಕಿಯ ಬಪ್ಪನಾಡು ದೇವಳ ಸಮೀಪದ ಕೃಷಿಕರೊಬ್ಬರ ಕೃಷಿ ಗದ್ದೆಯಲ್ಲಿ ಕಳೆದ 3 ವರ್ಷಗಳಿಂದ ವಿಪರೀತ ತ್ಯಾಜ್ಯ ಸಂಗ್ರಹಗೊಂಡು ಅವರು 3 ವರ್ಷಗಳಿಂದ ಕೃಷಿಯನ್ನೇ ನಡೆಸಿಲ್ಲ.

ಸಿಆರ್‍ಝಡ್ ಹೊಣೆ: ಕರಾವಳಿ ನಿಯಂತ್ರಣ ವಲಯವಾಗಿ ಗುರುತಿಸಿಕೊಂಡಿರುವ ಕಡಲ ತೀರ ಸಂರಕ್ಷಣೆ ಸಿಆರ್‍ಝಡ್ ವಹಿಸಿದೆ.ಹಾಗಾಗಿ ಕಡಲ ತೀರವನ್ನೂ ಶುಚಿಯಾಗಿಡುವುದು ಅವರದ್ದೇ ಹೊಣೆಯಾಗಿದೆ ಎಂದು ಹೆಜಮಾಡಿಯ ಹಿರಿಯ ಮೀನುಗಾರರೊಬ್ಬರು ತಿಳಿಸಿದ್ದಾರೆ.ಕರಾವಳಿ ತೀರ ಪ್ರದೇಶ ಮತ್ತು ಹೊಳೆ ತೀರದಲ್ಲಿ ಯಾವುದೇ ಅಭಿವೃದ್ಧಿಗೆ ಸಿಆರ್‍ಝಡ್ ಅನುಮತಿ ನೀಡುವುದಿಲ್ಲ.ಹಾಗಾಗಿ ಇಲ್ಲಿ ಶೇಖರಣೆಗೊಂಡ ತ್ಯಾಜ್ಯಗಳಿಗೆ ಅವರೇ ನೇರ ಹೊಣೆಯಾಗುತ್ತಾರೆ ಎಂದವರು ಹೇಳಿದ್ದಾರೆ.

ಹೆಜಮಾಡಿ ಗ್ರಾಪಂ ಕ್ರಮ: ಕಳೆದ ಭಾರಿಯೂ ಇದೇ ರೀತಿ ಹೇರಳ ತ್ಯಾಜ್ಯ ಸಂಗ್ರಹವಾದಾಗ ಹೆಜಮಾಡಿ ಗ್ರಾಪಂ ತುರ್ತು ಕ್ರಮ ಜರುಗಿಸಿ ಜೆಸಿಬಿ ಬಳಸಿ ತ್ಯಾಜ್ಯಗಳನ್ನು ತೆರವುಗೊಳಿಸಿತ್ತು.ಆದರೆ ಕಡಿಮೆ ಆದಾಯದ ಸ್ಥಳೀಯಾಡಳಿತಕ್ಕೆ ಈಗಿನ ಕಸ ನಿರ್ವಹಣೆ ದುಬಾರಿಯಾಗಿದೆ.

ಪ್ರಸ್ತಾವಿತ ಬಂದರು ಪ್ರದೇಶ: ತ್ಯಾಜ್ಯ ತುಂಬಿದ ಪೂರ್ತಿ ಪ್ರದೇಶ ಪ್ರಸ್ತಾವಿತ ಬಂದರು ಪ್ರದೇಶವಾಗಿದೆ.ಮೀನುಗಾರಿಕಾ ಇಲಾಖಾಧಿಕಾರಿಗಳೂ ಇಲ್ಲೊಮ್ಮೆ ಭೇಟಿ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸರ್ಫಿಂಗ್ ಪಾಯಿಂಟ್: ಮಂತ್ರ ಸರ್ಫ್ ಕ್ಲಬ್‍ನ ಸರ್ಫಿಂಗ್ ಪಾಯಿಂಟ್ ಆಗಿ ಗುರುತಿಸಿಕೊಂಡಿರುವ ಈ ಭಾಗದ ಕಸ ಸಂಗ್ರಹವು ಅಲ್ಲಿಗೆ ಬರುವ ವಿದೇಶೀಯರಿಗೆ ಅಚ್ಚರಿ ಮೂಡಿಸಿದೆ.ವಿದೇಶಿ ಗಣ್ಯರ ಸಹಿತ ಅವಿಭಜಿತ ದಕ ಜಿಲ್ಲೆಯ ಉನ್ನತ ಅಧಿಕಾರಿಗಳೂ ಇಲ್ಲಿ ಸರ್ಫಿಂಗ್,ಕಾಯಕಿಂಗ್‍ಗಾಗಿ ಆಗಮಿಸುತ್ತಾರೆ.ಅವರಿಗೆ ಇಲ್ಲಿನ ಸ್ವಚ್ಛತೆ ಕಂಡು ಬೆರಗಾಗಿದ್ದಾರೆ.ಆಸ್ಟ್ರಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಬಂದ ಅಧ್ಯಯನಶೀಲ ವಿದ್ಯಾರ್ಥಿಗಳಿಬ್ಬರು ಇಲ್ಲಿನ ತ್ಯಾಜ್ಯ ರಾಶಿಯನ್ನು ಕಂಡು ಬೆರಗಾಗಿದ್ದಾರೆ.ಅತೀ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಕ್ಯಗೊಳ್ಳಬೇಕೆಂದೂ ಅವರು ಎಚ್ಚರಿಸಿದ್ದಾರೆ.ಜಾಗತಿಕವಾಗಿ ಅಭಿವೃದ್ಧೀಶೀಲ ದೇಶಗಳ ಪೈಕಿ ಅತ್ಯಂತ ಮುಂದುವರಿದ ದೇಶವಾಗಿ ಗುರುತಿಸಿಕೊಂಡಿರುವ ಭಾರತವು ಬಹುಬೇಗ ಪ್ಲಾಸ್ಟಿಕ್ ಮುಕ್ತವಾಗಬೇಕು ಎಂದವರು ಹೇಳಿದ್ದಾರೆ.

ಮೈಕ್ರೋ ಪ್ಲಾಸ್ಟಿಕ್ ನಿರ್ವಹಣೆ ಬಗ್ಗೆ ಸಂಶೋಧನೆ ಕೈಗೊಂಡಿರುವ ದಕ್ಷಿಣ ಆಫ್ರಿಕಾದ ಟೈರೋನ್ ಬರ್ಗಸ್ ವಿಕ ದೊಂದಿಗೆ ಮಾತನಾಡಿ,ಸಮುದ್ರ ಜಲಚರಗಳಿಗೆ ಮೈಕ್ರೋ ಪ್ಲಾಸ್ಟಿಕ್ ತೀರಾ ಅಪಾಯಕಾರಿ.ಆಫ್ರಿಕಾ,ಮಡಗಾಸ್ಕರ್ ಸಹಿತ ಹಲವು ದೇಶಗಳಲ್ಲಿ ಸಹೋದ್ಯೋಗಿಗಳೊಂದಿಗೆ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ.ಜಲಚರಗಳಿಂದ ಮಾನವ ಸಂಕುಲಕ್ಕೂ ಇದು ಅಪಾಯಕಾರಿಯಾಗಿದೆ.ಹಾಗಾಗಿ ಸಮುದ್ರಕ್ಕೆ ಪ್ಲಾಸ್ಟಿಕ್ ಎಸೆಯದಿರಿ.ಎಲ್ಲಾ ನಾಗರೀಕರೂ ಒಟ್ಟಾಗಿ ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್‍ಗಳನ್ನು ತೆರವುಗೊಳಿಸಲು ಸಹಕರಿಸಬೇಕು ಎಂದಿದ್ದಾರೆ.
ಅವರ ಜತೆಗಾರ ಆಸ್ಟ್ರಿಯಾದ ಲುಕಾಸ್ ವಿಕ ದೊಂದಿಗೆ ಮಾತನಾಡಿ,ಎಲ್ಲಾ ಸಮುದಾಯ ಒಂದಾಗಿ ಸಮುದ್ರ ತೀರದ ಪ್ಲಾಸ್ಟಿಕ್‍ಗಳನ್ನು ತೆರವುಗೊಳಿಸಬೇಕು.ನಾವು ಪ್ರತಿ ಭಾನುವಾರ ಈ ಕಾರ್ಯದಲ್ಲಿ ಭಾಗವಹಿಸುತ್ತೇವೆ.ನಮ್ಮ ಆರೋಗ್ಯಕ್ಕೆ ತೀರಾ ಅಪಾಯವೆಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಅನಿಸಿಕೆ

-ಹೆಜಮಾಡಿಯ ಶಾಂಭವಿ ಅಳಿವೆಯ ಬಂದರು ಪ್ರದೇಶದ ಸಮುದ್ರ ತೀರದಲ್ಲಿ ಹೇರಳ ತ್ಯಾಜ್ಯ ಬಿದ್ದ ಬಗ್ಗೆ ತಿಳಿದಿದೆ.ಗ್ರಾಪಂ ವತಿಯಿಂದ ಅಷ್ಟೊಂದು ಕಸ ವಿಲೇವಾರಿ ಅಸಾಧ್ಯ.ಆದಾಗ್ಯೂ ಆದ್ಯತೆಗನುಗುಣವಾಗಿ ಕಸ ವಿಲೇವಾರಿಗೆ ಗಮನ ಹರಿಸಲಾಗುವುದು.
-ವಿಶಾಲಾಕ್ಷಿ ಉಮೇಶ್ ಪುತ್ರನ್,ಅಧ್ಯಕ್ಷರು,ಹೆಜಮಾಡಿ ಗ್ರಾಪಂ

ಕಲೆದ ಬಾರಿ ಇದೇ ರೀತಿ ತ್ಯಾಜ್ಯ ಸಂಗ್ರಹವಾದಾಗ ಹೆಜಮಾಡಿ ಗ್ರಾಪಂ ಕಸ ವಿಲೇವಾರಿ ಮಾಡಿತ್ತು.ಈ ಬಾರಿ ಸಿಆರ್‍ಝಡ್‍ಗೆ ಮಾಹಿತಿ ನೀಡಿ ಜಂಟಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.ಹೆಜಮಾಡಿಯ ಪೂರ್ತಿ ಕರಾವಳಿ ತೀರ ಸ್ವಚ್ಛತೆಗೆ ಗಮನಹರಿಸಲಾಗುವುದು.
ಸುಧಾಕರ ಕರ್ಕೇರ,ಉಪಾಧ್ಯಕ್ಷರು,ಹೆಜಮಾಡಿ ಗ್ರಾಪಂ

-ಸಫಿರ್ಂಗ್ ಪಾಯಿಂಟ್ ಎಂದು ಗುರುತಿಸಿಕೊಂಡ ಸಮುದ್ರ ತೀರದಲ್ಲಿ ಅಸಾಧಾರಣವಾಗಿ ತ್ಯಾಜ್ಯ ತುಂಬಿದೆ.ಈ ಬಗ್ಗೆ ಸಿಆರ್‍ಝಡ್ ಗಮನಕ್ಕೂ ತರಲಾಗಿದೆ.ಅವರೇ ಮುಂದೆ ನಿಂತು ತ್ಯಾಜ್ಯ ವಿಲೇವಾರಿ ಮಾಡಬೇಕು.ಆದಾಗ್ಯೂ ಸರ್ಫಿಂಗ್ ವಿದ್ಯಾರ್ಥಿಗಳನ್ನು ಬಳಸಿ ನಿರಂತರ ಸ್ವಚ್ಛತೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
ಗೌರವ್ ಹೆಗ್ಡೆ,ನಿರ್ದೇಶಕರು,ಸರ್ಫಿಂಗ್ ಸ್ವಾಮಿ ಫೌಂಡೇಶನ್,ಮೂಲ್ಕಿ

– ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಲಾಗುವುದು.ನಮ್ಮ ಇಲಾಖೆ ಮತ್ತು ಗ್ರಾಪಂ,ಸಂಘ ಸಂಸ್ಥೆಗಳ ಜತೆಗೂಡಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುವುದು.
-ಹರೀಶ್ಚಂದ್ರ ಕೆ.ಪಿ.,ನಿರೀಕ್ಷಕರು,ಕರಾವಳಿ ಕಾವಲು ಪೋಲೀಸ್,ಹೆಜಮಾಡಿ

 

——-  ಎಚ್ಕೆ ಹೆಜ್ಮಾಡಿ,ಪಡುಬಿದ್ರಿ