ಹೆಜಮಾಡಿ ಯುವಕ ಅಬುದಾಬಿಯಲ್ಲಿ ಕೊರೊನಾಗೆ ಬಲಿ

ಪಡುಬಿದಿ: ಕಳೆದ 8 ವರ್ಷಗಳಿಂದ ಅಬುದಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹೆಜಮಾಡಿಯ 44ರ ಹರೆಯದ ಯುವಕರೊಬ್ಬರು ಕೊರೊನಾ ಕಾಯಿಲೆ ಉಲ್ಬಣಿಸಿ ಭಾನುವಾರ ಮೃತಪಟ್ಟಿದ್ದಾರೆ.

ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಯುವಕ ಅಬುದಾಬಿಯಲ್ಲಿದ್ದು, ದೇಶದಾದ್ಯಂತ ಕೊರೊನಾ ಉಲ್ಬಣಿಸಿದ್ದ ಸಂದರ್ಭ ಊರಿಗೆ ಬರಲಾಗದೆ ಅಬುದಾಬಿಯಲ್ಲೇ ಉಳಿದಿದ್ದರು. ಉದ್ಯೋಗ ಮಾಡಿಕೊಂಡಿದ್ದಲ್ಲಿ ಎರಡು ಬಾರಿ ಕೊರೊನಾ ಪರೀಕ್ಷೆ ನಡೆಸಿದ್ದ ಸಂದರ್ಭ ನೆಗೆಟಿವ್ ವರದಿ ಬಂದಿತ್ತು. ಮೂರನೇ ಬಾರಿಯ ಪರೀಕ್ಷೆ ಸಂದರ್ಭ ಅವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅಲ್ಲಿ ಸರಕಾರಿ ಸ್ವಾಮ್ಯದ ಶೇಖ್ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದೆರಡು ದಿನಗಳಿಂದ ಕಾಯಿಲೆ ಉಲ್ಬಣಿಸಿದ್ದು, ಅವರನ್ನು ಐಸಿಯುಗೆ
ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಮೃತಪಟ್ಟಿದ್ದಾರೆ.

ಅವರ ಪತ್ನಿ ಹಾಗೂ ಪುತ್ರಿ ಪೂನಾದಲ್ಲಿದ್ದಾರೆ. ಅಲ್ಲಿಂದ ಶವ ತರಲು ಅಸಾಧ್ಯವಾಗಿದ್ದು, ಮಂಗಳವಾರ ಅಬುದಾಬಿಯಲ್ಲೇ ಗೆಳೆಯರು ಮತ್ತು ಸಹೋದ್ಯೋಗಿಗಳ ಸಮ್ಮುಖ ಅಂತ್ಯಕ್ರಿಯೆ ನಡೆಯಲಿದೆ.