ಹೆಜಮಾಡಿ ಬಂದು ಯೋಜನೆಗೆ ಕೇಂದ್ರ ಸರಕಾರದ ಪ್ರಥಮ ಕಂತು ರೂ.13.5 ಕೋಟಿ ಬಿಡುಗಡೆ-ಶಾಸಕ ಲಾಲಾಜಿ ಮೆಂಡನ್

ಪಡುಬಿದ್ರಿ: ಬಹು ನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆಗೆ ಕೇಂದ್ರ ಸರಕಾರದ ಪ್ರಥಮ ಕಂತು ರೂ.13.5 ಕೋಟಿ ಬಿಡುಗಡೆಯಾಗಿರುವುದಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದ್ದಾರೆ. ಮಂಗಳವಾರ ಪಡುಬಿದ್ರಿ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಪಡುಬಿದ್ರಿ ಗ್ರಾಪಂನ 2018-19ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಲ್ಪೆ ಮತ್ತು ಮಂಗಳೂರು ಬಂದರುಗಳಿಗೆ ಸಮಾನಾಂತರವಾಗಿ ಹೆಜಮಾಡಿ ಬಂದರು ಯೋಜನೆ ಜಾರಿಯಾಗಲಿದ್ದು,ಸರ್ವ ಸಮಾಜದವರೂ ಇದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿದೆ ಎಂದ ಅವರು,ಕೇಂದ್ರದ ಅನುದಾನ ದೊರಕಿದ ತಕ್ಷಣ ರಾಜ್ಯ ಸರಕಾರವೂ ಅನುದಾನ ಬಿಡುಗಡೆ ಮಾಡಲಿದೆ.ಹಾಗಾಗಿ ಯೋಜನೆಯ ಪ್ರಥಮ ಹಂತ ಶೀಘ್ರ ಆರಂಭಗೊಳ್ಳಲಿದೆ ಎಂದವರು ಹೇಳಿದರು.

ಶಾಸಕರ ಅನುದಾನ ಬಂದಿಲ್ಲ: ಶಾಸಕನಾಗಿ 6 ತಿಂಗಳು ಕಳೆದಿದ್ದರೂ ಈವರೆಗೂ ಶಾಸಕರ ನಿಧಿಗೆ ಯಾವುದೇ ಅನುದಾನ ದೊರಕದ ಕಾರಣ ಅಭಿವೃದ್ಧಿ ಕಾರ್ಯ ಆರಂಭಿಸಿಲ್ಲ.ಆದಾಗ್ಯೂ ಪ್ರಕೃತಿ ವಿಕೋಪ ನಿಧಿ ರೂ. ಒಂದು ಕೋಟಿ ಬಳಸಿ ಜನಸೇವೆ ಮಾಡಲಾಗಿದೆ.ತುಂಬಾ ಬೇಡಿಕೆಗಳಿದ್ದು,ಇತರ ಮೂಲಗಳನ್ನು ಅನುಸರಿಸಿ ಆದ್ಯತೆ ಮೇರೆಗೆ ಅಭಿವೃದ್ಧಿ ಕಾರ್ಯ ನಡೆಸಲು ಬದ್ಧನಿದ್ದೇನೆ ಎಂದವರು ಹೇಳಿದರು.

ಪಡುಬಿದ್ರಿ ಕಾಪುಗೆ ಶೀತಲೀಕೃತ ಶವಾಗಾರ ಘಟಕ: ಕಾಪು ಕ್ಷೇತ್ರಕ್ಕೆ ಅತೀ ಅಗತ್ಯವಾಗಿ ಶೀತಲೀಕೃತ ಶವಾಗಾರದ ಅವಶ್ಯಕತೆ ಬಗ್ಗೆ ಮನಗಂಡಿದ್ದು, ಸರಕಾರಕ್ಕೆ ಮನವಿ ಮಾಡಲಾಗಿದೆ.ಅದರ ಹೊರತಾಗಿಯೂ ದಾನಿಗಳ ನೆರವಿನಿಂದಲಾದರೂ ಶೀಘ್ರವಾಗಿ ಕಾಪು ಮತ್ತು ಪಡುಬಿದ್ರಿಯಲ್ಲಿ ಶೀತಲೀಕೃತ ಶವಾಗಾರ ವ್ಯವಸ್ಥೆ ಮಾಡಲಾಗುವುದು ಎಂದವರು ಹೇಳಿದರು.

ಬ್ಲೂ ಫ್ಲ್ಯಾಗ್ ಯೋಜನೆ: ದೇಶದ 13 ಬೀಚ್‍ಗಳಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಬ್ಲೂ ಫ್ಲ್ಯಾಗ್ ಯೋಜನೆ ಮಂಜೂರಾಗಿದ್ದು,ಈ ಪೈಕಿ ಪಡುಬಿದ್ರಿ ಬೀಚನ್ನೂ ಸೇರಿಸಲಾಗಿದೆ.ದೇಶದ 13 ಬೀಚ್‍ಗಳ ಪೈಕಿ ಪಡುಬಿದ್ರಿಯಲ್ಲಿ ಆರಂಭಿಕ ಹಂತವಾಗಿ ಯೋಜನೆ ಜಾರಿಯಾಗಲಿದೆ.ಇದರ ನೀಲನಕಾಶೆ ಅಂತಿಮ ಹಂತಕ್ಕೆ ಬಂದಿದ್ದು,8 ಕೋಟಿ ರೂ.ವ್ಯಯಿಸಿ ಬೀಚ್ ಅಭಿವೃದ್ಧಿಯಾಗಲಿದೆ ಎಂದವರು ಹೇಳಿದರು.

ಅಗ್ನಿ ಶಾಮಕ ದಳ: ಪಡುಬಿದ್ರಿಗೆ ತುರ್ತಾಗಿ ಬೇಕಾಗಿರುವ ಅಗ್ನಿ ಶಾಮಕ ದಳ ರಚನೆಗೆ ಗಮನಹರಿಸಲಾಗಿದ್ದು,ಶೀಘ್ರ ಜಾರಿಯಾಗಲಿದೆ ಎಂದು ಮೆಂಡನ್ ತಿಳಿಸಿದರು.
ಟೋಲ್ ಗೇಟ್ ಸಮಸ್ಯೆ: ಹೆಜಮಾಡಿಯ ಟೋಲ್ ಗೇಟ್‍ನಲ್ಲಿ ಸ್ಥಳೀಯರಿಗೆ ಸಂಪೂರ್ಣ ರಿಯಾಯತಿ ನೀಡಲೇಬೇಕೆಂದು ಅವರು ಅಭಿಪ್ರಾಯಿಸಿದರು.

ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ: ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಗ್ರಾಪಂ ಕಛೇರಿ ಕಟ್ಟಡ ಕಾಮಗಾರಿ ಒಂದೂವರೆ ವರ್ಷವಾದರೂ ವಿಳಂಬವಾಗಿರುವ ಬಗ್ಗೆ ಸಭೆಯ ಗಮನ ಸೆಳೆದರು.ಯುಪಿಸಿಎಲ್ ಸಿಎಸ್‍ಆರ್ ನಿಧಿಯಿಂದ ಅವರೇ ಕಾಮಗಾರಿ ನಡೆಸುವ ಕಾರಣ ವಿಳಂಬವಾಗಿರುವುದಾಗಿ ಮಾಹಿತಿ ನೀಡಲಾಯಿತು.

ಸುಜ್ಲಾನ್ ಅಧೀನದ 50 ಎಕ್ರೆ ಜಾಗ ವಶಪಡಿಸಿಕೊಳ್ಳಲು ನಿರ್ಣಯ:ಸುಜ್ಲಾನ್ ವಿಂಡ್ ಮಿಲ್ ಘಟಕಕ್ಕೆ ನೀಡಿದ 615 ಎಕ್ರೆ ಜಾಗವನ್ನು ಅವರು ಪೂರ್ಣವಾಗಿ ಉಪಯೋಗಿಸಿಕೊಂಡಿಲ್ಲ.ಅದನ್ನು ಪರಾಭಾರೆ ಮಾಡುತ್ತಿದ್ದಾರೆ.ಅದನ್ನು ಗ್ರಾಪಂಗೆ ವಾಪಾಸು ಪಡೆದುಕೊಳ್ಳಬೇಕೆಂದು ಉಮಾನಾಥ್ ಪಡುಬಿದ್ರಿ,ಭಾಸ್ಕರ್ ಪಡುಬಿದ್ರಿ,ಪ್ರಕಾಶ್ ಪಾದೆಬೆಟ್ಟು ಆಗ್ರಹಿಸಿದರು.ಚರ್ಚೆಯ ಬಳಿಕ ಈ ಪೈಕಿ 50 ಎಕ್ರೆ ಜಾಗವನ್ನು ಕಸ ವಿಲೇವಾರಿ ಸಹಿತ ವಿವಿಧ ಯೋಜನೆಗಳಿಗೆ ಬಳಸಿಕೊಳ್ಳಲು ವಾಪಾಸು ಪಡೆಯುವಂತೆ ನಿರ್ಣಯ ಕೈಗೊಳ್ಳಲಾಯಿತು.ಶಾಸಕರು,ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರ ಕೂಡುವಿಕೆಯೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ನಿಯೋಗ ತೆರಳಿ ಈ ಬಗ್ಗೆ ಮನವರಿಕೆ ಮಾಡಲು ಸಭೆ ನಿರ್ಧರಿಸಿತು.

ಪಡುಹಿತ್ಲು ರಸ್ತೆ ಮತ್ತು ಸೇತುವೆ ಕಾಮಗಾರಿ ನಡೆಯದ ಬಗ್ಗೆ ಪ್ರಕಾಶ್ ಶೆಟ್ಟಿ ಪಡುಹಿತ್ಲು ಶಾಸಕರ ಗಮನ ಸೆಳೆದು ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿದರು.

ಪಾಂದೆ ಅಂಗನವಾಡಿ ಕೇಂದ್ರವು ಬಾಡಿಗೆ ಕಟ್ಟಡದಲ್ಲಿದ್ದು,ಬಾಡಿಗೆದಾರರು ತೆರವಿಗೆ ಸೂಚಿಸಿದ ಬಗ್ಗೆ ಸಭೆಯ ಗಮನ ಸೆಳೆಯಲಾಯಿತು.ದಾನಿ ರತ್ನಾಕರ್ ರಾಜ್ ಅರಸರು ಜಾಗ ದಾನ ಮಾಡುವ ಭರವಸೆ ನೀಡಿದ್ದು ಅದೇ ಜಾಗದಲ್ಲಿ ಅಂಗನವಾಡಿ ನಿರ್ಮಿಸುವುದಾಗಿ ಅಧ್ಯಕ್ಷೆ ದಮಯಂತಿ ವಿ.ಅಮೀನ್ ಭರವಸೆ ನೀಡಿದರು.

ಬಾಕಿ ಇರುವ ಅಂಗಡಿ ಬಾಡಿಗೆ ಮತ್ತು ಉದ್ಯಮ ತೆರಿಗೆಗಳನ್ನು ಶೀಘ್ರ ವಸೂಲಾತಿ ಮಾಡುವಂತೆ ರಾಮಚಂದ್ರ ಆಚಾರ್ಯ ಒತ್ತಾಯಿಸಿದರು.ಪಿಡಿಒ ಪಂಚಾಕ್ಷರಿ ಸ್ವಾಮಿ ಈ ಬಗ್ಗೆ ಗ್ರಾಪಂ ಕಾರ್ಯಸೂಚಿ ಹಮ್ಮಿಕೊಂಡಿದ್ದಾಗಿ ಹೇಳಿದರು.
ತೋಟಗಾರಿಕಾ ಮೇಲಾಧಿಕಾರಿಗಳನ್ನು ಗ್ರಾಪಂಗೆ ಕರೆಸಿ ಕೃಷಿಕರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲು ಸಭೆ ನಿರ್ಣಯಿಸಿತು.
ಬೆರಂದಿಕೆರೆ ಸೊಳ್ಳೆಕಾಟ,ಬಿಳಿನೊಣ ಬಾಧೆ,ಹೆದ್ದಾರಿ ಕಾಮಗಾರಿ ವಿಳಂಬ,ಗರ್ಭಿಣಿ ಸ್ತ್ರೀಯರಿಗೆ ಇಲಾಖೆ ವತಿಯಿಂದ ನೀಡುವ ಆಹಾರ ಪದ್ಧತಿಯನ್ನು ಹಿಂದಿನಂತೆ ಮುಂದುವರಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಜಿಲ್ಲಾಮಟ್ಟದಲ್ಲಿ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ನಗದು ಪುರಸ್ಕಾರ ಪಡೆದ ಪಡುಬಿದ್ರಿ ಕೇಂದ್ರದ ವೈದ್ಯಾಧಿಕಾರಿಗೆ ಅಭಿನಂದನೆ ಸಲ್ಲಿಸಲಾಯಿತು

ಅಧ್ಯಕ್ಷೆ ದಮಯಂತಿ ವಿ.ಅಮೀನ್ ಅಧ್ಯಕ್ಷತೆ ವಹಿಸಿದ್ದರು.ಪಶು ಸಂಗೋಪನಾ ಇಲಾಖೆಯ ದಯಾನಂದ ಪೈ ನೋಡಲ್ ಅಧಿಕಾರಿಯಾಗಿದ್ದು.ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್,ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ,ತಾಪಂ ಸದಸ್ಯರಾದ ನೀತಾ ಗುರುರಾಜ್ ಮತ್ತು ದಿನೇಶ್ ಕೋಟ್ಯಾನ್,ಇಲಾಖಾಧಿಕಾರಿಗಳಾದ ಆರೋಗ್ಯ ಇಲಾಖೆಯ ಡಾ.ಬಿ.ಬಿ.ರಾವ್,ತೋಟಗಾರಿಕಾ ಇಲಾಖೆಯ ಶ್ವೇತಾ ಹಿರೇಮಠ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೋಹಿನಿ ಗೌಡ ಶಿಕ್ಷಣ ಇಲಾಖೆಯ ಶಂಕರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.