ಹೆಜಮಾಡಿ ಬಂದರು ಪ್ರದೇಶಕ್ಕೆ ಉಡುಪಿ ಎಡಿಸಿ ತಂಡ ಭೇಟಿ ಪರಿಶೀಲನೆ ಶೀಘ್ರ ಬಂದರು ನಿರ್ಮಾಣದ ಭರವಸೆ

ಪಡುಬಿದ್ರಿ: ಬಹುನಿರೀಕ್ಷಿತ ಹೆಜಮಾಡಿ ಬಂದರು ನಿರ್ಮಾಣ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಉಡುಪಿ ಎಡಿಸಿ ಸದಾಶಿವ ಪ್ರಭು ಮತ್ತು ಬಂದರು ಮತ್ತು ಮೀನುಗಾರಿಕಾ ಇಲಾಖಾ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ಶೀಘ್ರವಾಗಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ಬಂದರು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದೆಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.
ಸ್ಥಳ ಪರಿಶೀಲನೆಯ ಬಳಿಕ ಮಾತನಾಡಿದ ಸದಾಶಿವ ಪ್ರಭು ಅವರು, ಬಹಳಷ್ಟು ಹಳೆದಾದ ಮೀನುಗಾರರ ಬೇಡಿಕೆ ಹಾಗೂ ಕನಸು ಹೆಜಮಾಡಿ ಕಿರು ಬಂದರು ನಿರ್ಮಾಣ, ಇಷ್ಟರಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಂದರು ನಿರ್ಮಾಣದ ಕೆಲವೊಂದು ಮಜಲುಗಳ ಕಾನೂನ್ಮಾಕ ಕೆಲಸಗಳು ಮುಗಿದಿವೆ. ಇದೀಗ ಮೀನುಗಾರಿಕಾ ಬಂದರು ನಿರ್ಮಾಣ ಪ್ರದೇಶದಲ್ಲಿ ಖಾಸಗಿ ಸ್ಥಳಗಳಿದ್ದು, ಆ ಸ್ಥಳಗಳನ್ನು ಕಾನೂನು ಬದ್ಧವಾಗಿ ಅವರಿಂದ ಪಡೆದು ಮೀನುಗಾರೀಕಾ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ಕೇಂದ್ರ ಹಾಗೂ ರಾಜ್ಯದ ಹಣವನ್ನು ಈ ಬಂದರು ನಿರ್ಮಾಣಕ್ಕೆ ಬಳಸಬಹುದಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿದ್ದು ಶೀಘ್ರ ಈ ಕೆಲಸ ಮುಗಿಸಲಾಗುವುದೆಂದರು.
ಹೆಜಮಾಡಿ ಬಂದರು ಸಮಿತಿಯ ಅಧ್ಯಕ್ಷ ಸದಾಶಿವ ಕೋಟ್ಯಾನ್ ಮಾತನಾಡಿ, ಕಳೆದ ನಲ್ವತ್ತೈದು ವರ್ಷಗಳಿಂದ ಹೆಜಮಾಡಿಯಲ್ಲಿ ಕಿರು ಬಂದರು ನಿರ್ಮಿಸಬೇಕೆಂಬ ನಮ್ಮ ಬೇಡಿಕೆಗೆ ಹಲವಾರು ಮೀನುಗಾರಿಕಾ ಮಂತ್ರಿಗಳು ಹಾಗೂ ಹದಿನೈದಕ್ಕೂ ಅಧಿಕ ಜಿಲ್ಲಾಧಿಕಾರಿಗಳು ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇದೀಗ ಭೇಟಿ ನೀಡಿದ ಉಡುಪಿ ಜಿಲ್ಲಾ ಎಡಿಸಿ ಸದಾಶಿವ ಪ್ರಭು ಭರವಸೆಯ ಮಾತುಗಳಿಂದ ನಮ್ಮ ಆಶೆ ಚಿಗುರಿದೆ ಎಂದರು.

ಈ ಸಂದರ್ಭ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ಪರಿವೀಕ್ಷಣಾಧಿಕಾರಿ ರವಿಶಂಕರ್, ಬಂದರು ಇಲಾಖಾ ಎಂಜಿನಿಯರ್ ಉದಯ ಕುಮಾರ್, ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷೀ ಪುತ್ರನ್, ಉಪಾಧ್ಯಕ್ಷ ಸುಧಾಕರ್ ಕರ್ಕೇರ, ಪಾಂಡುರಂಗ ಕರ್ಕೇರ ಮತ್ತಿತರಿದ್ದರು.